ಶಹಾಬಾದ: ತಾಲೂಕಿನಲ್ಲಿ ಬಾಲ್ಯ ವಿವಾಹ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಹಶೀಲ್ದಾರ್ ಸುರೇಶ ವರ್ಮಾ ಹೇಳಿದರು.
ತಹಶೀಲ್ದಾರ್ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲಬುರಗಿ ಮತ್ತು ಶಿಶು ಅಭಿವೃದ್ಧಿ ಯೋಜನೆ ಶಹಬಾದ ವತಿಯಿಂದ ಆಯೋಜಿಸಲಾಗಿದ್ದ ಬಾಲ್ಯ ವಿವಾಹ ನಿಷೇಧ ಕುರಿತು ನಡೆದ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಆಗಾಗ ವರದಿಗಳು ಕೇಳಿಬರುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಸಮಾಜದ ಮುಖಂಡರ ವಿಶ್ವಾಸ ಪಡೆದು ಮನವರಿಕೆ ಮಾಡುವಂತಾಗಬೇಕು ಎಂದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಅನುಷ್ಠಾನ ಸಂಬಂಧ ವಸತಿ ನಿಲಯಗಳ ಮೇಲ್ವಿಚಾರಕರಿಗೆ, ದೇವಸ್ಥಾನಗಳ ಪೂಜಾರಿಗಳಿಗೆ, ಮುದ್ರಣಾಲಯಗಳ ಮಾಲೀಕರಿಗೆ, ಕಲ್ಯಾಣ ಮಂಟಪಗಳ ವ್ಯವಸ್ಥಾಪಕರಿಗೆ, ಸಾಮೂಹಿಕ ವಿವಾಹಗಳ ಆಯೋಜಕರಿಗೆ, ಧಾರ್ಮಿಕ ಮುಖಂಡರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಅರಿವು ಕಾರ್ಯಾಗಾರಗಳನ್ನು ಮಾಡಿ, ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಬಾಲ್ಯ ವಿವಾಹದ ದಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ಗೋಡೆಬರಹ, ಭಿತ್ತಿ ಚಿತ್ರಗಳು, ಬೀದಿ ನಾಟಕ ಪ್ರದರ್ಶನಗಳ ಮೂಲಕ ಜಾಗೃತಿ ಮೂಡಿಸಿ ಎಂದರು.
ಗ್ರೇಡ್-2 ತಹಶೀಲ್ದಾರ್ ಗುರುರಾಜ ಸಂಗಾವಿ, ಶಿಶು ಅಭಿವೃದ್ಧಿ ಯೋಜನಾ ಧಿಕಾರಿ ಬಿ.ಎಸ್.ಹೊಸಮನಿ, ಪಿಎಸ್‌ಐ ಸುವರ್ಣಾ ಮಲಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ ಮೇಲ್ವಿಚಾರಕ ರವಿಕುಮಾರ ಮುತ್ತಗಿ, ಶಕುಂತಲಾ ಸಾಕ್ರೆ, ನೇತ್ರಾವತಿ, ಸಂಗಮ್ಮ, ತಾಪಂ ಅಧಿಕಾರಿ ಹಾಗೂ ಚೈಲ್ಡ್ ಲೈನ್ ಸಂಸ್ಥೆ ಸಿಬ್ಬಂದಿ ಇದ್ದರು.