ಉಳ್ಳಾಲ: ಇತ್ತೀಚೆಗೆ ಓಖೀ ಚಂಡಮಾರುತದ ಪ್ರಭಾವದಿಂದ ಸಮುದ್ರದ ಅಲೆಗಳಿಂದ ಹಾನಿಗೀಡಾದ ರೆಸಾರ್ಟ್ ಮಾಲಕರು ಸಮುದ್ರ ಬದಿಯ ಮರಳನ್ನು ಜೆಸಿಬಿ ಮೂಲಕ ಹಾನಿಗೀಡಾದ ತಡೆಗೋಡೆಗೆ ಹಾಕುವುದನ್ನು ಸ್ಥಳೀಯರು ಮತ್ತು ನಗರಸಭೆ ಕೌನ್ಸಿಲರ್ ತಡೆಯೊಡ್ಡಿದ ಘಟನೆ ಉಳ್ಳಾಲದಲ್ಲಿ ನಡೆದಿದೆ. ಉಳ್ಳಾಲ ಕೈಕೋ ಸಮೀಪ ಇರುವ ಖಾಸಗಿ ರೆಸಾರ್ಟಿನ ಕಾಂಪೌಂಡ್‌ಗೆ ಸಮುದ್ರದ ಅಲೆಗಳು ಬಡಿದು ಹಾನಿ ಮಾಡಿದ್ದವು.
ಇದರಿಂದ ಸಾಕಷ್ಟು ಜಾಗ ಕೂಡ ಸಮುದ್ರಪಾಲಾಗಿತ್ತು. ರೆಸಾರ್ಟ್‌ನಲ್ಲಿ ನಡೆಯುತ್ತಿದ್ದ ಸಮಾರಂಭದ ವೇಳೆ ಅಲೆಗಳು ಬಡಿದು ಸೇರಿದ್ದ ಜನ ಈ ವೇಳೆ ಓಡಿದ್ದರು. ಈಗ ಸಮ್ಮರ್ ಸ್ಯಾಂಡ್ ರೆಸಾರ್ಟ್‌ನ ಮಾಲಕರು ಹೋದ ಜಾಗವನ್ನು ಸಮತಟ್ಟುಗೊಳಿಸುವ ಸಲುವಾಗಿ ಜೆಸಿಬಿ ಮೂಲಕ ಹೊಂಡ ನಿರ್ಮಿಸಿ ಮರಳು ರಾಶಿ ಹಾಕುತ್ತಿದ್ದರು. ಇದನ್ನು ಕಂಡ ಸ್ಥಳೀಯ ನಿವಾಸಿಗಳು ಇದು ಇನ್ನಷ್ಟು ತೊಂದರೆಯನ್ನು ಉಂಟು ಮಾಡುತ್ತದೆ, ಅಲ್ಲದೆ ಸಿಆರ್
ಝೆಡ್ ವ್ಯಾಪ್ತಿಗೆ ಬರುವ ಜಾಗದಿಂದ ಮರಳುಗಾರಿಕೆ ನಡೆಸುವುದೇ ಅಪರಾಧ ಎಂದು ಜೆಸಿಬಿ ಮೂಲಕ ನಡೆಯುತ್ತಿದ್ದ ಕಾಮಗಾರಿಗೆ ತಡೆಯೊಡ್ಡಿದ್ದರು.
ಈ ವೇಳೆ ರೆಸಾರ್ಟ್ ಮಾಲಕರು ಸಮುದ್ರಪಾಲಾದ ತಮ್ಮ ಜಾಗದಿಂದಲೇ ಮರಳನ್ನು ತೆಗೆಯಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದು, ಇದಕ್ಕೆ ಒಪ್ಪದ ಸ್ಥಳೀಯ ಕೌನ್ಸಿಲರ್ ಅಕ್ರಮವಾಗಿ ಮರಳು ತೆಗೆದಲ್ಲಿ ಪ್ರಕರಣ ದಾಖಲಿಸಿ ಜೆಸಿಬಿ ಯಂತ್ರವನ್ನು ವಶಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಸಿದಾಗ, ತೆಗೆದಿರುವ ಹೊಂಡವನ್ನು ಮುಚ್ಚುವ ಭರವಸೆಯನ್ನು ರೆಸಾರ್ಟ್ ಮಾಲಕರು ನೀಡಿದ್ದಾರೆ.