Advertisement

ಹುಣಸೂರಿನಲ್ಲಿ ನಡೆಯುತ್ತಿರುವ ಮತಾಂತರ ತಡೆಯಿರಿ

09:22 PM Mar 04, 2020 | Lakshmi GovindaRaj |

ಹುಣಸೂರು: ಕೊಡಗಿನ ಹೆಬ್ಬಾಗಿಲು ಹುಣಸೂರು ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತಾಂತರವಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು, ಮತಾಂತರ ತಡೆಯಲು ಸಂಘಟಿತರಾಗಿ ಹೋರಾಟ ನಡೆಸಬೇಕೆಂದು ಸಂಸದ ಪ್ರತಾಪ್‌ ಸಿಂಹ ಕಾರ್ಯಕರ್ತರಿಗೆ ಮನವಿ ಮಾಡಿದರು.

Advertisement

ನಗರದ ಬ್ರಾಹ್ಮಣರ ಬಡಾವಣೆಯ ರಾಘವೇಂದ್ರಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನೂತನ ತಾಲೂಕು ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷ ಹಳ್ಳದಕೊಪ್ಪಲು ನಾಗಣ್ಣಗೌಡ ಅವರಿಗೆ ಪಕ್ಷದ ಬಾವುಟ ಹಸ್ತಾಂತರಿಸಿ ಅವರು ಮಾತನಾಡಿದರು.

ಮತಾಂತರ ತಡೆಗಟ್ಟಿ: ಪಕ್ಷದ ಕಾರ್ಯಕರ್ತರು, ವಿವಿಧ ಘಟಕಗಳ ಸದಸ್ಯರು ಪದಾಧಿಕಾರಿಗಳು ಇಲ್ಲಿ ನಡೆಯುತ್ತಿರುವ ಮತಾಂತರವನ್ನು ತಡೆಗಟ್ಟಲು ಮೊದಲು ಸಂಘಟಿತರಾಗಿ ಹೋರಾಟ ನಡೆಸಬೇಕು. ಯಾವುದೇ ಗೊಂದಲಕ್ಕೊಳಗಾಗದೆ, ಗಲಾಟೆ ಮಾಡಿಕೊಳ್ಳದೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ, ಸಮಸ್ಯೆಗಳು ಕಂಡು ಬಂದಲ್ಲಿ ಪಕ್ಷದ ಹಿರಿಯರನ್ನು ಸಂಪರ್ಕಿಸಬೇಕೆಂದು ಎಂದು ತಿಳಿಸಿದರು.

ಹಿಂದಿನ ಅಧ್ಯಕ್ಷ, ವಕೀಲರೂ ಆದ ಯೋಗಾನಂದಕುಮಾರ್‌ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರಿಂದ ಹಂತ ಹಂತವಾಗಿ ಪಕ್ಷ ಬಲವರ್ಧನೆ ಕಂಡಿದೆ. ಮುಂದೆ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆಗಳು ಬರಲಿದ್ದು, ನೂತನ ಅಧ್ಯಕ್ಷರು ಕಾರ್ಯಕರ್ತರು ಹಾಗೂ ಪಕ್ಷದ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಬಂದವರು-ಬರುವವರನ್ನು ಗೌರವವಾಗಿ ನಡೆಸಿಕೊಂಡು ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಸಲಹೆ ನೀಡಿದರು.

ನೂತನ ಅಧ್ಯಕ್ಷ ಹಳ್ಳದಕೊಪ್ಪಲು ನಾಗಣ್ಣಗೌಡ ಮಾತನಾಡಿ, ತಮ್ಮ ರಾಜಕೀಯ ಗುರು ಮಾಜಿ ಶಾಸಕ ದಿ.ಪಾಪಣ್ಣ ಅವರ ಕಾಲದಿಂದ ಜಾತ್ಯತೀತ ತತ್ವವನ್ನು ಅಳವಡಿಸಿಕೊಂಡು ಬಂದಿದ್ದು, ಇಂದು ರಾಜಕೀಯ ಕ್ಷೇತ್ರ ಕಲುಷಿತಗೊಂಡಿದೆ. ಎಲ್ಲಾ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಮೇಳೈಸುತ್ತಿದೆ. ತಳ ಹಂತದ ಕಾರ್ಯಕರ್ತರನ್ನು ಗುರುತಿಸಿ ಸ್ಥಾನಮಾನ ನೀಡುವುದು ಬಿಜೆಪಿಯಲ್ಲಿ ಮಾತ್ರ. ಹೀಗಾಗಿ ತಾವು ಸಹ ತಳ ಹಂತದ ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.

Advertisement

ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌, ಜಿಲ್ಲಾಧ್ಯಕ್ಷ ಮಹೇಂದ್ರ, ಸಂಘಟನಾ ಕಾರ್ಯದರ್ಶಿ ಸುರೇಶ್‌ಬಾಬು, ಗ್ರಾಮಾಂತರ ಉಪಾಧ್ಯಕ್ಷ ಜಾಬಗೆರೆ ರಮೇಶ್‌ಕುಮಾರ್‌, ಜಿಪಂ ಮಾಜಿ ಸದಸ್ಯ ಸಿ.ಟಿ.ರಾಜಣ್ಣ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್‌, ಜಿಲ್ಲಾ ಕಾರ್ಯದರ್ಶಿ ಹನಗೋಡು ಮಂಜುನಾಥ್‌, ಜಿಪಂ ಮಾಜಿ ಸದಸ್ಯರಾದ ಕುನ್ನೇಗೌಡ, ಪರಮೇಶ್‌, ಮುಖಂಡರಾದ ರಾಜೇಂದ್ರ, ವೀರೇಶರಾವ್‌ ಬೋಬಡೆ, ಸತ್ಯಪ್ಪ, ಮಹಿಳಾ ಘಟಕದ ಅಧ್ಯಕ್ಷೆ ವೆಂಕಟಮ್ಮ, ರವಿಕುಮಾರ್‌, ಅರಗು ಮಂಜುನಾಥ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next