ಶಹಾಪುರ: ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆದಿದ್ದು, ಅಕ್ರಮ ಮರಳು ಸಾಗಾಣಿಕೆ ಭರದಲ್ಲಿ ಚಾಲಕರು ಟಿಪ್ಪರ್‌ನ್ನು ಬೇಕಾಬಿಟ್ಟಿಯಾಗಿ ಸಂಚರಿಸುತ್ತಿರುವುದರಿಂದ ಸಾರ್ವಜನಿಕರು ಮತ್ತು ಬೈಕ್ ಸವಾರರು ಪ್ರಾಣ ಭಯದಿಂದಲೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಮರಳು ಸಾಗಾಣಿಕೆ ತಡೆ ಮತ್ತು ರವಿವಾರ ನಡೆದ ಅಪಘಾತ ಘಟನೆ ಖಂಡಿಸಿ ಇಲ್ಲಿನ ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ಹಾಗೂ ವಿವಿಧ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ತಾಲೂಕಿನ ಹತ್ತಿಗೂಡೂರ ಗ್ರಾಮದಲ್ಲಿ ರವಿವಾರ ಮರಳು ತುಂಬಿದ ಟಿಪ್ಪರವೊಂದು ವೇಗದಿಂದ ಬಂದು ಬೈಕ್ ಸವಾರನೋರ್ವನಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಅಮಾಯಕ ರೈತ ಕನ್ಯಾಕೋಳೂರ ಗ್ರಾಮದ ಮಡಿವಾಳಪ್ಪ ಎಂಬುವರು ಅಸುನೀಗಿದರು.
ಮರಳು ವಾಹನ ಒಂದೇ ರಾಯಲ್ಟಿ ಪಡೆದು ಹಲವು ಟ್ರಿಪ್ ಮರಳನ್ನು ಸಾಗಿಸುತ್ತಿದ್ದು, ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ. ಶನಿವಾರ ರಾತ್ರಿಯೇ ನಮ್ಮ ಕಾರ್ಯಕರ್ತರು ಅಕ್ರಮವಾಗಿ ಮರಳು ತುಂಬಿದ ಹಲವು ಟಿಪ್ಪರಗಳನ್ನು ತಡೆ ಹಿಡಿದು ಪೊಲೀಸ್ ಠಾಣೆಗೆ ಕರೆ ಮಾಡಿದರೂ ಯಾರೊಬ್ಬ ಅಧಿಕಾರಿಗಳು ಸ್ಪಂದನೆ ನೀಡದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು. ಕಾರಣ ಕೂಡಲೇ ಪೊಲೀಸ್ ಅಧಿಕಾರಿಗಳು ಮರಳು ಟಿಪ್ಪರ್ ಮಾಲೀಕರು ಮತ್ತು ಚಾಲಕರನ್ನು ಕರೆದು ಸಭೆ ನಡೆಸುವ ಮೂಲಕ ಎಚ್ಚರಿಕೆ ನೀಡಬೇಕು. ಕೂಡಲೇ ಹತ್ತಿಗೂಡೂರ ಗ್ರಾಮದ ಬಳಿ ಇರುವ ಪೊಲೀಸ್ ಚೆಕ್ ಪೋಸ್ಟ್ ನಿಯಮನುಸಾರ ಕರ್ತವ್ಯ ನಿಭಾಯಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಉಪ ತಹಶೀಲ್ದಾರ್ ಚಂದ್ರಕಾಂತ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ದಲಿತ ಮುಖಂಡ ಶರಣರಡ್ಡಿ ಹತ್ತಿಗೂಡೂರ, ಭೀಮಣ್ಣ ಮಾಲಿಪಾಟೀಲ, ಸಾಯಬಣ್ಣ ಪೂಜಾರಿ ಕನ್ಯಾಕೋಳೂರ, ಸುರೇಶ ಬಾಬು ಹೊಸ್ಮನಿ, ರಂಗನಾಥ ಬಾಗಲಿ, ನಾಗಪ್ಪ ಘಂಟಿ, ಹಣಮಂತ ನಾಟೇಕಾರ, ಬಸವರಾಜ, ಮಲಕಣ್ಣ ಸೇರಿದಂತೆ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.