ಯಾದಗಿರಿ: ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್. ಅವರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಹಳ್ಳಿಗಳಲ್ಲಿ ಕಳ್ಳಭಟ್ಟಿ ಸಾರಾಯಿ ಸೇವಿಸಿ ಅನೇಕರು ಮೃತಪಡುತ್ತಿದ್ದಾರೆ ಎಂದು ಕುಟುಂಬದವರು ಅಳಲು ತೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಕಳ್ಳಭಟ್ಟಿ ಸರಾಯಿ ಹಾಗೂ ಸೇಂದಿ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಮಾಡಿ. ಇಲಾಖೆ ವತಿಯಿಂದ ದಾಖಲಾದ ಪ್ರಕರಣಗಳ ಕುರಿತು ಪರಿಶೀಲಿಸಿ, 2021-22ನೇ ಸಾಲಿನ ಮದ್ಯದ ಗುರಿಯನ್ನು ಸಾಧಿಸಲು ಜಾರಿ ಮತ್ತು ತನಿಖೆ ಕಾರ್ಯ ಚುರುಕುಗೊಳಿಸಿ. ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ನಶೆ ಮುಕ್ತ ಕೇಂದ್ರಗಳನ್ನು ನಡೆಸಲು ಜಿಲ್ಲಾಧಿಕಾರಿ ಸೂಚಿಸಿದರು.
ಈ ಸಂದರ್ಭದಲ್ಲಿ ಅಬಕಾರಿ ಉಪ ಆಯುಕ್ತರಾದ ಫೀರೋಜಖಾನ್ ಕಿಲ್ಲೇದಾರ ಹಾಗೂ ಅಬಕಾರಿ ಉಪ ಅಧೀಕ್ಷಕರಾದ ಶ್ರೀರಾಮ ರಾಠೊಡ, ಜಿಲ್ಲಾ ವಿಚಕ್ಷಣ ದಳದ ಅಬಕಾರಿ ನಿರೀಕ್ಷಕರಾದ ಕೇದಾರನಾಥ ಎಸ್.ಟಿ., ಸುರಪುರ ವಲಯ ನಿರೀಕ್ಷಕರಾದ ಜಾಫರಮಿಯಾ, ಶಹಾಪುರ ವಲಯ ನಿರೀಕ್ಷಕರಾದ ವಿಜಯಕುಮಾರ್ ಹಿರೇಮಠ ಅಬಕಾರಿ ಉಪನಿರೀಕ್ಷಕರಾದ ಶ್ರೀಧರ ನಿರೋಣಿ, ಶರಣು ನಂದಿಗೌಡ, ಬಸವರಾಜ ರಾಜಣ್ಣರ, ಸುರೇಶ ಮಾಳೇಕರ್ ಹಾಜರಿದ್ದರು.