Advertisement

ಎಪಿಎಂಸಿಯಲ್ಲಿ ಸೋಂಕು ಕಳೆವ ಸುರಂಗ

01:12 PM Apr 06, 2020 | Suhan S |

ಹುಬ್ಬಳ್ಳಿ: ಕೋವಿಡ್ 19 ತಡೆ ನಿಟ್ಟಿನಲ್ಲಿ ಜಿಲ್ಲಾಡಳಿತ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಸ್ಥಳೀಯ ಯಂಗ್‌ ಇಂಡಿಯಾ (ವೈಐ) ಹಾಗೂ ಕಾನ್ಫಿಡರೇಷನ್‌ ಆಫ್‌ ಇಂಡಿಯನ್‌ ಇಂಡಸ್ಟ್ರಿ ( ಸಿಐಐ) ಸಹಯೋಗದಲ್ಲಿ ಅಮರಗೋಳದ ಎಪಿಎಂಸಿ ಮಹಾದ್ವಾರದ ಬಳಿ ಸೋಂಕು ಕಳೆಯುವ ಸುರಂಗ ನಿರ್ಮಿಸಿದ್ದು, ರಾಜ್ಯದಲ್ಲಿಯೇ ಇದೊಂದು ವಿನೂತನ ಪ್ರಯತ್ನವಾಗಿದೆ.

Advertisement

ಸಚಿವ ಜಗದೀಶ ಶೆಟ್ಟರ ರವಿವಾರ ಇದಕ್ಕೆ ಚಾಲನೆ ನೀಡಿದರಲ್ಲದೆ, ಎಪಿಎಂಸಿಗೆ ಆಗಮಿಸುವ ಸಾವಿರಾರು ಸಂಖ್ಯೆಯ ರೈತರು, ವ್ಯಾಪಾರಸ್ಥರ ಆರೋಗ್ಯ ರಕ್ಷಣೆಗೆ ಇದು ಸಹಕಾರಿಯಾಗಲಿದೆ. ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಘಟನೆಗಳ ಸಹಭಾಗಿತ್ವದಲ್ಲಿ ಈ ಕಾರ್ಯ ಮಾಡಿರುವುದು ಉತ್ತಮ ಬೆಳವಣಿಗೆ ಎಂದರು.

ಯಂಗ್‌ ಇಂಡಿಯಾ ಸಂಸ್ಥೆ ಅಧ್ಯಕ್ಷ ಡಾ|ಶ್ರೀನಿವಾಸ ಜೋಶಿ ಮಾತನಾಡಿ, ತಮಿಳುನಾಡಿನ ತಿರುಪ್ಪುರದಲ್ಲಿ ಅಲ್ಲಿನ ಯಂಗ್‌ ಇಂಡಿಯಾ ಸಂಸ್ಥೆ ಇಂತಹ ಪ್ರಯತ್ನ ಮಾಡಿರುವುದನ್ನು ನೋಡಿ, ನಗರದಲ್ಲೂ ಅದನ್ನು ಅನುಷ್ಠಾನಗೊಳಿಸುವ ಆಸಕ್ತಿ ಉಂಟಾಯಿತು. ಅದಕ್ಕೆ ಮಹಾನಗರ ಪಾಲಿಕೆ ಅಗತ್ಯ ಸಹಕಾರ ನೀಡಿತು. ಪಾರಾದಿ ಅವರಿಂದ ಸ್ಟೀಲ್‌ ಫ್ರೇಮ್‌ ಸಿದ್ಧಪಡಿಸಿ, ಹೈಪ್ರಶರ್‌ವುಳ್ಳ ಫಾಗರ್ಸ್‌, ಒಂದು ಅಶ್ವಶಕ್ತಿಯ ಪಂಪ್‌ ಅಳವಡಿಸಲಾಗಿದೆ. ಸುರಂಗದ ನಾಲ್ಕು ಅಡಿ ಅಂತರದಲ್ಲಿ ವ್ಯಕ್ತಿಗಳು ಬಂದಾಗ ಸೆನ್ಸಾರ್‌ ಮೂಲಕ ಕಾರ್ಯ ಆರಂಭವಾಗುತ್ತದೆ. ಶೇ. 1ರ ಸೋಡಿಯಂ ಹೈಪೋಕ್ಲೋರೈಟ್‌ ಮಿಶ್ರಿತ ದ್ರಾವಣವನ್ನು ಮಹಾನಗರ ಪಾಲಿಕೆ ನಿರಂತರವಾಗಿ ಒದಗಿಸಲಿದೆ. ಯಂಗ್‌ ಇಂಡಿಯಾ ಮತ್ತು ಸಿಐಐ ಒಂದು ಲಕ್ಷ ರೂ. ವೆಚ್ಚದಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯಕೈಗೊಂಡಿವೆ ಎಂದರು.

ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಮಾತನಾಡಿ, ಹುಬ್ಬಳ್ಳಿ ಎಪಿಎಂಸಿಗೆ ಪ್ರತಿನಿತ್ಯ ಸಾವಿರಾರು ರೈತರು, ವ್ಯಾಪಾರಿಗಳು ಆಗಮಿಸುತ್ತಾರೆ. ಅವರಿಗೆ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಈ ಪ್ರಯತ್ನ ಮಾಡಲಾಗಿದೆ. ಸಾರ್ವಜನಿಕರು ಸ್ವಲ್ಪ ತಾಳ್ಮೆಯಿಂದ ವಾಹನದಿಂದ ಇಳಿದು, ಸುರಂಗದಲ್ಲಿ ಒಮ್ಮೆ ಹಾಯ್ದು ಬರುವ ಅಭ್ಯಾಸ ರೂಢಿಸಿಕೊಂಡರೆ ಒಳ್ಳೆಯದು ಎಂದರು.

ಜಿಲ್ಲಾಧಿಕಾರಿ ದೀಪಾ ಚೋಳನ್‌, ಮಹಾನಗರ ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌, ಪಾಲಿಕೆಯ ಪರಿಸರ ಇಂಜಿನಿಯರ್‌ ನಯನಾ, ಪೊಲೀಸ್‌ ಇನ್ಸ್‌ಪೆಕ್ಟರ್‌ ಪ್ರಭು ಸೂರಿನ್‌, ಯಂಗ್‌ ಇಂಡಿಯಾದ ಸಚಿನ್‌, ಡಾ| ನಾಗರಾಜ ನಾಯಕ, ಕಿರಣ ಮಾಳವದೆ, ಸಿಐಐ ಅಧ್ಯಕ್ಷ ವಿ.ಎಸ್‌.ವಿ. ಪ್ರಸಾದ, ಅನುಪಮ ಬೇತಾಳ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next