ದಾವಣಗೆರೆ: ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿನ 18 ವರ್ಷ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಒಂದು ವಾರದೊಳಗಾಗಿ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ತಿಳಿಸಿದರು.
ವಿದ್ಯಾರ್ಥಿಗಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡುವುದಕ್ಕೆ ಸಂಬಂಧಿ ಸಿದಂತೆ ನಡೆದ ವಿಡಿಯೋ ಸಂವಾದದ ಬಳಿಕ ಮಾತನಾಡಿದ ಅವರು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ನಿರ್ದೇಶನದಂತೆ ಜಿಲ್ಲೆಯಲ್ಲಿನ ಎಲ್ಲ ಸರ್ಕಾರಿ ಹಾಗೂ ಖಾಸಗಿ ಪದವಿ, ಸ್ನಾತಕೋತ್ತರ ಪದವಿ, ಪಾಲಿಟೆಕ್ನಿಕ್, ಐಟಿಐ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಒಂದು ವಾರದ ಒಳಗಾಗಿ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡಲಾಗುವುದು ಎಂದರು. ಜಿಲ್ಲೆಯಲ್ಲಿ 50,132 ವಿದ್ಯಾರ್ಥಿಗಳು, 3,619 ಬೋಧಕರು ಹಾಗೂ 1,905 ಬೋಧಕೇತರ ಸಿಬ್ಬಂದಿ ಸೇರಿದಂತೆ ಒಟ್ಟು 55,656 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಆರಂಭವಾಗಿದೆ. ಕೆಲವು ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮೊದಲನೇ ಡೋಸ್ ಲಸಿಕೆ ಪಡೆದಿರಬಹುದು. ಲಸಿಕೆ ಪಡೆಯದೆ ಇರುವ ಎಲ್ಲ ಅರ್ಹ ವಿದ್ಯಾರ್ಥಿಗಳಿಗೂ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.
ಎಲ್ಲ ಕಾಲೇಜುಗಳಲ್ಲಿ ಲಸಿಕಾ ಕ್ಯಾಂಪ್ ಆಯೋಜಿಸಲಾಗುವುದು. ಲಸಿಕೆ ಲಭ್ಯತೆ ಆಧಾರದ ಮೇಲೆ ಲಸಿಕೆ ಕ್ಯಾಂಪ್ ಏರ್ಪಡಿಸುವ ಸ್ಥಳ, ದಿನವನ್ನು ಆರೋಗ್ಯ ಇಲಾಖೆ ನಿಗದಿಪಡಿಸಲಿದೆ. ಲಸಿಕೆ ಕಾರ್ಯಕ್ರಮ ಯಶಸ್ವಿಗೊಳಿಸಲು ನೋಡಲ್ ಅ ಧಿಕಾರಿಗಳನ್ನು ನೇಮಿಸಲಾಗುವುದು. ದಾವಣಗೆರೆ ವಿಶ್ವವಿದ್ಯಾಲಯವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ 29,485 ಪದವಿ, 2,227ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಬೇಕಿದೆ. ಈ ಕಾರ್ಯಕ್ರಮಕ್ಕೆಂದೇ ಪ್ರತ್ಯೇಕವಾಗಿ ಲಸಿಕೆ ಹಂಚಿಕೆ ಮಾಡಲಾಗುವುದಿಲ್ಲ, ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಈಗಾಗಲೇ ನಡೆಯುತ್ತಿರುವ ಲಸಿಕಾ ಕಾರ್ಯಕ್ರಮದ ಜತೆ ಜತೆಗೆ, ವಿದ್ಯಾರ್ಥಿಗಳಿಗೂ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲೆಯ ಎಲ್ಲ ಕಾಲೇಜುಗಳ ಪಟ್ಟಿಯನ್ನು ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಲೇಜುಗಳಲ್ಲಿ ನಡೆಸಲಾಗುವ ಲಸಿಕಾ ಕ್ಯಾಂಪ್ ಸಂದರ್ಭದಲ್ಲಿ ಕೋವಿಡ್‌ಗೆ ಸಂಬಂಧಿಸಿದಂತೆ ಹಾಗೂ ಲಸಿಕೆ ನೀಡಿಕೆಗಾಗಿ ಸರ್ಕಾರ ಹೊರಡಿಸಿರುವ ಎಲ್ಲ ಮಾರ್ಗಸೂಚಿಗಳನ್ನು ಅಧಿಕಾರಿಗಳು ತಪ್ಪದೇ ಪಾಲಿಸಬೇಕು. ಕಾಲೇಜುಗಳಲ್ಲಿ ಸೂಕ್ತ ಕೊಠಡಿಗಳನ್ನು ಪರಿಶೀಲಿಸಿ, ನಿಗದಿಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದರು.
ಸರ್ಕಾರದಿಂದ ಜಿಲ್ಲೆಗೆ ಹಂಚಿಕೆ ಮಾಡಲಾಗುವ ಕೋವಿಡ್ ನಿರೋಧಕ ಲಸಿಕೆಯ ಪ್ರಮಾಣ ಪರಿಗಣಿಸಿ, ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಅಗತ್ಯವಿರುವ ಲಸಿಕೆ ಹಂಚಿಕೆ ಮಾಡಬೇಕು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೀಡುವ ಲಸಿಕೆ ಕಾರ್ಯಕ್ರಮಕ್ಕೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವಂತಾಗಬಾರದು. ಸೂಕ್ತ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಮೀನಾಕ್ಷಿ ಅವರಿಗೆ ಸೂಚಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ| ಶಶಿಧರ್ ಇತರರು ಇದ್ದರು.