Advertisement

700 ವರ್ಷ ಹಿಂದಿನ “ಗದುಗಿನ ಭಾರತ’ಸಂರಕ್ಷಣೆಗೆ ಮುನ್ನುಡಿ?

06:00 AM May 23, 2018 | Team Udayavani |

ಬೆಳ್ತಂಗಡಿ: ಕವಿ ಕುಮಾರವ್ಯಾಸನ ವಂಶಸ್ಥರು ತಾಳೆಗರಿಗಳಲ್ಲಿ ಲೇಖೀಸಿದ “ಕರ್ಣಾಟ ಭಾರತ ಕಥಾ ಮಂಜರಿ’ ಅಥವಾ “ಗದುಗಿನ ಭಾರತ’ ಎನ್ನಲಾಗಿರುವ ತಾಡವೋಲೆ ಗ್ರಂಥವನ್ನು ಧರ್ಮಸ್ಥಳಕ್ಕೆ ಮೂಲಪ್ರತಿ ಸಂರಕ್ಷಣೆಗಾಗಿ ನೀಡಿದ್ದು, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಶೋಧನಾ ಪ್ರತಿಷ್ಠಾನಕ್ಕೆ ಹಸ್ತಾಂತರಿಸಲಾಗಿದೆ. ಆದರೆ, ಇದು ಮೂಲ ಪ್ರತಿ ಹೌದೇ, ಅಲ್ಲವೇ ಎನ್ನುವುದು ಪ್ರತಿಷ್ಠಾನದ ತಜ್ಞರು ಪರೀಕ್ಷಿಸಿದ ಬಳಿಕವಷ್ಟೇ ತಿಳಿದು ಬರಲಿದೆ.

Advertisement

ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕು ಕೋಳಿವಾಡದ ಕವಿ ಕುಮಾರವ್ಯಾಸನ ಮೂಲ ವಂಶಸ್ಥರು ಎನ್ನಲಾದ ಅವಧೂತ ವೀರ ನಾರಾಯಣ ಪಾಟೀಲ್‌ ಹಾಗೂ ಚಂದ್ರಶೇಖರ ಡಿ. ಪಾಟೀಲ್‌ ತಮ್ಮ ಮೂಲ ನಿವಾಸದಲ್ಲಿದ್ದ ಈ ಗ್ರಂಥವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ
ಅವರಿಗೆ ಹಸ್ತಾಂತರ ಮಾಡಿದ್ದಾರೆ. ಡಾ| ಹೆಗ್ಗಡೆ ಅವರು ತಾಳೆಗರಿಗಳ ವೀಕ್ಷಣೆ ಮಾಡಿದ್ದಾರೆ.

ಆರು ತಿಂಗಳ ಕಾಲಾವಕಾಶ: ತಾಳೆಗರಿಗಳನ್ನು ಪೆಟ್ಟಿಗೆಯಲ್ಲಿಡಲಾಗಿದ್ದು, ಪ್ರತಿಷ್ಠಾನಕ್ಕೆ ಹಸ್ತಾಂತರಿಸಲಾಗಿದೆ. ಅವುಗಳನ್ನು ಸಂರಕ್ಷಿಸಿ ಮತ್ತೆ ಹಿಂದಿರುಗಿಸಬೇಕಾಗಿದ್ದು, ಅಜೀರ್ಣಾವಸ್ಥೆಯಲ್ಲಿರುವುದರಿಂದ ಆರು ತಿಂಗಳ ಬಳಿಕ ಹಿಂದಿರುಗಿಸುವುದಾಗಿ ಪ್ರತಿಷ್ಠಾನದವರು ತಿಳಿಸಿದ್ದಾರೆ. ತಾಳೆ
ಗರಿಗಳು ಸುಮಾರು 700 ವರ್ಷಕ್ಕೂ ಹಿಂದಿನದಾಗಿದ್ದು, ಕವಿ ಕುಮಾರವ್ಯಾಸನೇ ಬರೆದಿರುವುದು ಎಂದು ವಂಶಸ್ಥರು ಹೇಳುತ್ತಿದ್ದಾರೆ. ಆದರೆ, ನಿಖರವಾದ ಕಾಲಮಾನ ತಾಳೆ ಗರಿಗಳ ಪರೀಕ್ಷೆ ನಡೆಸಿದ ಬಳಿಕ ತಿಳಿಯಲಿದೆ. ಒಂದು ವೇಳೆ ಇದು ಕುಮಾರವ್ಯಾಸನೇ ಬರೆದ ಮೂಲ ಕೃತಿಯೇ ಆಗಿದ್ದಲ್ಲಿ ಅಮೂಲ್ಯ ಕೃತಿಯೊಂದರ ಸಂರಕ್ಷಣೆ ನಡೆದಂತೆ ಆಗಲಿದೆ. 

ಪ್ರತಿಷ್ಠಾನದಿಂದ ಉಚಿತ ಸಂರಕ್ಷಣೆ: ಧರ್ಮಸ್ಥಳದ ಪ್ರಾಚ್ಯ ವಿದ್ಯಾಸಂಸ್ಥೆ ಶ್ರೀ ಮಂಜುನಾಥೇಶ್ವರ ಸಂಶೋಧನಾ ಪ್ರತಿಷ್ಠಾನದಲ್ಲಿ ಪ್ರಾಚೀನ ಸಂರಕ್ಷಣೆಯನ್ನು ಮಾಡಿ ಮತ್ತೆ ಹಿಂದಿರುಗಿಸಲಾಗುತ್ತದೆ. ಆದರೆ, ಇದಕ್ಕೆ ಯಾವುದೇ ರೀತಿಯ ವೆಚ್ಚವನ್ನು ಪಡೆಯಲಾಗುವುದಿಲ್ಲ. ಈಗಾಗಲೇ ಹಲವು ಅತ್ಯಮೂಲ್ಯ ಗ್ರಂಥಗಳನ್ನು ಇಲ್ಲಿ ಸಂರಕ್ಷಿಸಿ ಇರಿಸಲಾಗಿದೆ.

ಗದುಗಿನ ಭಾರತದ ಸಂರಕ್ಷಣೆ: ಗದುಗಿನ ನಾರಣಪ್ಪ ಅಥವಾ ಕುಮಾರವ್ಯಾಸ ರಚಿಸಿರುವ ಕೃತಿಗಳಲ್ಲಿ ಪ್ರಸಿದಟಛಿವಾದುದು “ಕರ್ಣಾಟ ಭಾರತ ಕಥಾಮಂಜರಿ’. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂಬ ಇತರ ಹೆಸರುಗಳೂ ಇವೆ. 700 ವರ್ಷಗಳ ಹಿಂದಿನ ಕೃತಿಯೆಂದು ಹೇಳಲಾಗುತ್ತಿದೆ. ಆದರೆ, ವರ್ಷವನ್ನು ಪರೀಕ್ಷೆಗೆ ಕಳುಹಿಸಿ ತಿಳಿಯಲಾಗುವುದು. ಗ್ರಂಥದಲ್ಲಿ ಎಲ್ಲೂ ಬರೆದ ಇಸವಿ, ವ್ಯಕ್ತಿಯ ಬಗ್ಗೆ ಮಾಹಿತಿ ನೀಡದಿದ್ದರೆ ನಿಖರವಾಗಿ ಹೇಳುವುದು ಕಷ್ಟ.
● ಡಾ| ಎಸ್‌.ಆರ್‌. ವಿಘ್ನರಾಜ್‌,  ಶ್ರೀ ಮಂಜುನಾಥೇಶ್ವರ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕರು

Advertisement

ನಾವು ಕುಮಾರವ್ಯಾಸರ ವಂಶಸ್ಥರಾಗಿದ್ದೇವೆ. ಹಿರಿಯರು ಹಾಗೂ ಪೂರ್ವಜರು ಇದು ಕುಮಾರವ್ಯಾಸನೇ ಬರೆದಿರುವ “ಕರ್ಣಾಟ ಭಾರತ ಕಥಾಮಂಜರಿ’ ಎಂದು ತಿಳಿಸಿದ್ದಾರೆ. ಸಂರಕ್ಷಣೆ ದೃಷ್ಟಿಯಿಂದ ಧರ್ಮಸ್ಥಳಕ್ಕೆ ನೀಡಲಾಗಿದೆ.
● ಅವಧೂತ ವೀರ ನಾರಾಯಣ ಪಾಟೀಲ್‌, ಕುಮಾರ ವ್ಯಾಸರ ಮೂಲ ವಂಶಸ್ಥರು.

Advertisement

Udayavani is now on Telegram. Click here to join our channel and stay updated with the latest news.

Next