Advertisement

ಪಕ್ಷಗಳಿಗೆ ಪ್ರತಿಷ್ಠೆಯ ಕಣವಾದ ಪುರಸಭೆ ಚುನಾವಣೆ

10:08 AM May 28, 2019 | Suhan S |

ಹರಪನಹಳ್ಳಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಸೋತು ಮುಖಭಂಗ ಅನುಭವಿಸಿದ ಬೆನ್ನಲ್ಲೇ ಸ್ಥಳೀಯ ಪುರಸಭೆಗೆ ಮೇ 29ರಂದು ಮತದಾನ ನಡೆಯಲಿದೆ. ಮತದಾರರ ಮನವೊಲಿಸಲು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷದ ನಾಯಕರು ಅಖಾಡಕ್ಕಿಳಿದು ಬಿಸಿಲು ಲೆಕ್ಕಿಸದೇ ಬಿರುಸಿನ ಪ್ರಚಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪುರಸಭೆ ಚುನಾವಣಾ ಕಣ ರಂಗೇರಿದೆ.

Advertisement

ಪುರಸಭೆಯ ಒಟ್ಟು 27 ವಾರ್ಡ್‌ಗಳ ಪೈಕಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಎಲ್ಲಾ ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿವೆ. ಆದರೆ ಜೆಡಿಎಸ್‌ 9 ವಾರ್ಡ್‌ಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಹಾಕಿದ್ದು, ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ನಾಯಕರು ಜಂಟಿಯಾಗಿ ಪ್ರಚಾರ ನಡೆಸಿದ್ದು, ಇದೀಗ ಮೈತ್ರಿ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಎದುರಾಳಿಗಳಾಗಿ ಪ್ರಚಾರಕ್ಕಿಳಿದ್ದಾರೆ. 9 ವಾರ್ಡ್‌ಗಳನ್ನು ಹೊರತುಪಡಿಸಿ ಉಳಿದ ವಾರ್ಡ್‌ಗಳಲ್ಲಿ ಜೆಡಿಎಸ್‌ ಪಕ್ಷವು ಯಾರಿಗೂ ಬೆಂಬಲ ಸೂಚಿಸದೇ ತಟಸ್ಥವಾಗಿದೆ.

ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟ್ ಹಂಚಿಕೆ ಗೊಂದಲದಿಂದ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಉಳಿದಿರುವುದು ಕಾಂಗ್ರೆಸ್‌ ಹುರಿಯಾಳುಗಳಿಗೆ ತಲೆ ನೋವು ತರಿಸಿದೆ. ಕೆಪಿಸಿಸಿಯಿಂದ ಪುರಸಭೆ ಚುನಾವಣೆ ಉಸ್ತುವಾರಿ ಪಡೆದುಕೊಳ್ಳುವ ಮೂಲಕ ಹರಪನಹಳ್ಳಿ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ಪಿ.ಟಿ.ಪರಮೇಶ್ವರನಾಯ್ಕ ಅವರಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ.

ಕ್ಷೇತ್ರದಲ್ಲಿ ಪಕ್ಷ ಸಂಘಟಿಸುತ್ತಿದ್ದ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರಿದ್ದಾಗಲೂ ಕೂಡ ಪುರಸಭೆ ಉಸ್ತುವಾರಿ ಪಡೆದುಕೊಂಡಿರುವುದರಿಂದ ಸಚಿವರು ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ ರೂಪಿಸುತ್ತಿದ್ದಾರೆ. ಪುರಸಭೆಯ ಅಧಿಕಾರದ ಗದ್ದುಗೆ ಹಿಡಿಯಲೇಬೇಕೆಂದು ಸ್ವತಃ ಸಚಿವರೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಗಲಿರುಳು ಎನ್ನದೇ ವಾರ್ಡ್‌ಗಳಲ್ಲಿ ಸಂಚರಿಸಿ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದಾರೆ. ಸಚಿವರ ಮತಯಾಚನೆಯಿಂದ ಕೆಲವು ವಾರ್ಡ್‌ಗಳಲ್ಲಿ ಅಭ್ಯರ್ಥಿಗಳ ಪರ ಅಲೆ ಎದ್ದಿದೆ. ಮತ್ತೂಂದೆಡೆ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರನ್ನು ಪುರಸಭೆ ಚುನಾವಣೆ ಅಖಾಡಕ್ಕೆ ಬಾರದಂತೆ ಮಾಡಿರುವ ಹಿನ್ನೆಲೆಯಲ್ಲಿ ಸಚಿವರಿಗೆ ಮುಖಭಂಗ ಮಾಡಲು ಸ್ವಪಕ್ಷೀಯರಿಂದಲೇ ತಂತ್ರಗಾರಿಕೆಯ ಕಸರತ್ತು ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಚಿವರ ಎಂಟ್ರಿಯಿಂದ ಎಚ್ಚೆತ್ತುಕೊಂಡಿರುವ ಶಾಸಕ ಜಿ.ಕರುಣಾಕರರೆಡ್ಡಿ ಸಹ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಪ್ರತಿತಂತ್ರ ಸಿದ್ಧಪಡಿಸಿಕೊಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಮೊಗಸಾಲೆಯಲ್ಲಿ ಹುಮಸ್ಸು ಕೂಡ ಗರಿಗೆದರಿದೆ. ಹೀಗಾಗಿ ಪ್ರತಿಯೊಂದು ವಾರ್ಡ್‌ಗಳಿಗೂ ಶಾಸಕರು ತೆರಳಿ ಅಭ್ಯರ್ಥಿಗಳ ಪರ ಮತದಾರರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಮತ್ತೂಂದೆಡೆ ಜೆಡಿಎಸ್‌ ಮುಖಂಡ ಅರಸೀಕೆರೆ ಎನ್‌.ಕೊಟ್ರೇಶ್‌ ಅವರು ತಮ್ಮ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಜೆಡಿಎಸ್‌ ಹೆಚ್ಚಿನ ಸ್ಥಾನದಲ್ಲಿ ಗೆಲುವು ಪಡೆಯದಿದ್ದರೂ ಕಿಂಗ್‌ ಮೇಕರ್‌ ಆಗಲಿದೆ.

Advertisement

ಹರಪನಹಳ್ಳಿ ರಾಜಕಾರಣದಲ್ಲಿ ನೆಲೆಯೂರಲು ಪಿ.ಟಿ.ಪರಮೇಶ್ವರನಾಯ್ಕ ಅವರು ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಪುರಸಭೆಯ ಅಧಿಕಾರ ಚುಕ್ಕಾಣಿ ಹಿಡಿಯುವ ಮೂಲಕ ಹಾಲಿ ಶಾಸಕರಾಗಿರುವ ಜಿ.ಕರುಣಾಕರರೆಡ್ಡಿ ಅವರು ತಮ್ಮ ಪ್ರತಿಷ್ಠೆ ಉಳಿಸಿಕೊಳ್ಳಬೇಕಿದೆ. ಒಟ್ಟಿನಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ಪುರಸಭೆ ಗದ್ದುಗೆ ಹಿಡಿಯಲು ಅಂತಿಮವಾಗಿ ಮತದಾರರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದು, ಮತದಾರ ಯಾರಿಗೆ ಮಣೆ ಹಾಕುತ್ತಾನೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

•ಎಸ್‌.ಎನ್‌.ಕುಮಾರ್‌ ಪುಣಬಗಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next