Advertisement

CM, ನಾಗೇಂದ್ರ ಹೆಸರು ಹೇಳಲು ಒತ್ತಡ: ED ಅಧಿಕಾರಿಗಳ ವಿರುದ್ಧವೇ ಪ್ರಕರಣ!

12:03 AM Jul 23, 2024 | Team Udayavani |

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಿರುವ ಜಾರಿ ನಿರ್ದೇಶನಾಲಯ (ಇ.ಡಿ.)ದ ಇಬ್ಬರು ಅಧಿಕಾರಿಗಳ ವಿರುದ್ಧವೇ ಎಫ್ಐಆರ್‌ ದಾಖಲಾಗಿದೆ.

Advertisement

ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಬಿ. ಕಲ್ಲೇಶ್‌ ದೂರಿನ ಮೇರೆಗೆ ವಿಲ್ಸನ್‌ ಗಾರ್ಡನ್‌ ಠಾಣೆ ಪೊಲೀಸರು ಇ.ಡಿ.ಯ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ.

ಇಬ್ಬರು ಅಧಿಕಾರಿಗಳು ಸಿಎಂ ಮತ್ತು ಮಾಜಿ ಸಚಿವ ನಾಗೇಂದ್ರ ಹೆಸರು ಹೇಳಲು ಒತ್ತಡ ಹೇರಿದ್ದರು ಎಂದು ಆರೋಪಿಸಲಾಗಿದೆ.

ದೂರುದಾರ ಬಿ. ಕಲ್ಲೇಶ್‌ ಈ ಹಿಂದೆ ವಾಲ್ಮೀಕಿ ನಿಗಮದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಈ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ಕಲ್ಲೇಶ್‌ಗೆ ನೋಟಿಸ್‌ ಕೊಟ್ಟು ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಅದರಂತೆ ಜು. 16ರಂದು ಕಲ್ಲೇಶ್‌ ವಿಚಾರಣೆಗೆ ಹಾಜರಾಗಿದ್ದು, ಬಳಿಕ ಆರೋಪಿ ಅಧಿಕಾರಿಗಳು ಕಲ್ಲೇಶ್‌ಗೆ 17 ಪ್ರಶ್ನೆಗಳನ್ನು ಕೇಳಿದ್ದರು. ಈ ಪೈಕಿ 3 ಪ್ರಶ್ನೆಗಳಿಗೆ ಉತ್ತರ ನೀಡಲು ಕಡತದ ಅಗತ್ಯವಿದೆ ಎಂದು ಕಲ್ಲೇಶ್‌ ವಾಪಸ್‌ ಬಂದಿದ್ದರು. ಜು. 18ರಂದು ಮತ್ತೆ ವಿಚಾರಣೆಗೆ ಕಲ್ಲೇಶ್‌ ಹಾಜರಾಗಿದ್ದರು. ವಿಚಾರಣೆ ಬಳಿಕ ಹೇಳಿಕೆ ಪತ್ರಕ್ಕೆ ಕಲ್ಲೇಶ್‌ ಅವರಿಂದ ಸಹಿ ಕೂಡ ಮಾಡಿಸಿಕೊಂಡಿದ್ದಾರೆ. ಆದರೆ ತಮಗೆ ನಕಲು ಪ್ರತಿ ನೀಡಿಲ್ಲ ಎಂದು ಕಲ್ಲೇಶ್‌ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಈ ವೇಳೆ ಆರೋಪಿ ಅಧಿಕಾರಿಗಳು ಮತ್ತೆ ಪ್ರಶ್ನೆಗಳನ್ನು ಕೇಳಿದ್ದು, ಬೆಂಗಳೂರಿನ ಎಂ.ಜಿ. ರಸ್ತೆ ಬ್ಯಾಂಕ್‌ ಖಾತೆಗೆ ಖಜಾನೆಯ ಮೂಲಕ ವಾಲ್ಮೀಕಿ ನಿಗಮಕ್ಕೆ ಹಣ ಜಮಾ ಮಾಡಿದ್ದು ತಪ್ಪು ಎಂದಿದ್ದರು. ಆಗ ಕಲ್ಲೇಶ್‌, ಸರಕಾರದ ಆದೇಶದ ಮೇರೆಗೆ ಬಿಲ್‌ ಮಾಡಿ 2024ರ ಮಾ. 25ರಂದು ಜಮೆ ಮಾಡಿದ್ದೇನೆ. ಆದರೆ ಈ ಖಾತೆಯಲ್ಲಿ ಅದೇ ಮಾ. 5ರಿಂದಲೇ ಅಕ್ರಮ ಹಣ ವರ್ಗಾವಣೆಯಾಗಿದೆ. ಆದ್ದರಿಂದ ನನ್ನ ತಪ್ಪು ಇಲ್ಲ ಎಂದು ಹೇಳಿದ್ದಾರೆ. ಆಗ ಕೋಪಗೊಂಡ ಅಧಿಕಾರಿಗಳು, ನಿಮ್ಮನ್ನು ಅರೆಸ್ಟ್‌ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಕಲ್ಲೇಶ್‌ ಆರೋಪಿಸಿದ್ದಾರೆ.

ಸಿಎಂ, ನಾಗೇಂದ್ರ ಹೆಸರು ಹೇಳಲು ಒತ್ತಡ: ಆರೋಪ

Advertisement

ವಿಚಾರಣೆ ನೆಪದಲ್ಲಿ ಇಬ್ಬರು ಆರೋಪಿ ಅಧಿಕಾರಿಗಳು ಎಂ.ಜಿ. ರಸ್ತೆ ಬ್ಯಾಂಕ್‌ ಖಾತೆಗೆ ಅನುದಾನ ಜಮಾ ಮಾಡುವಂತೆ ಮುಖ್ಯಮಂತ್ರಿಗಳು, ಮಾಜಿ ಸಚಿವ ನಾಗೇಂದ್ರ ಮತ್ತು ಸರಕಾರದ ಅತ್ಯುನ್ನತ ಅಧಿಕಾರ ಹಾಗೂ ಎಫ್ಡಿ ಇಲಾಖೆ ನಿರ್ದೇಶನ ಮಾಡಿತ್ತು ಎಂದು ಹೇಳಿಕೆ ನೀಡುವಂತೆ ಒತ್ತಡ ಹೇರಿದ್ದಾರೆ ಎಂದು ಕಲ್ಲೇಶ್‌ ಆರೋಪಿಸಿದ್ದಾರೆ. ಒಂದು ವೇಳೆ ತಾವು ಸೂಚಿಸಿದಂತೆ ಹೇಳಿಕೆ ನೀಡದಿದ್ದರೆ ಬಂಧಿಸುತ್ತೇವೆ. 7 ವರ್ಷ ಜೈಲು ಶಿಕ್ಷೆ ಮಾಡಿಸುವವರೆಗೂ ಬಿಡುವುದಿಲ್ಲ ಎಂದು ಮುರಳಿ ಕಣ್ಣನ್‌ ಬೆದರಿಕೆ ಹಾಕಿದ್ದಾರೆ. ಅಲ್ಲದೆ, “ನೀನೊಬ್ಬ ಅಪರಾಧಿ, ಈಗಲೇ ನಿನ್ನನ್ನು ಬಂಧಿಸುತ್ತೇನೆ. ಇ.ಡಿ. ಬಗ್ಗೆ ನಿನಗೆ ಗೊತ್ತಿಲ್ಲ. ಇ.ಡಿ. ಸಹಾಯ ಬೇಕಾದರೆ ನಾನು ಹೇಳಿದಂತೆ ಹೇಳು’ ಎಂದು ಒತ್ತಡ ಹಾಕಿದ್ದಾರೆ. ಬಳಿಕ ಮುರಳಿ ಕಣ್ಣನ್‌, ಮಿತ್ತಲ್‌ ಅವರನ್ನು ಕರೆಸಿಕೊಂಡು ತನ್ನನ್ನು ಬಂಧಿಸುವ ಬಗ್ಗೆ ಚರ್ಚಿಸಿದ್ದರು. ಬಳಿಕ ಮತ್ತೂಮ್ಮೆ ಬಂದಾಗ ಬಂಧಿಸುವ ಬಗ್ಗೆ ನೋಡೋಣ ಎಂದು ಹೇಳಿ ಕಳುಹಿಸಿದ್ದಾರೆ. ಹೀಗಾಗಿ ಹಗರಣದಲ್ಲಿ ಮುಖ್ಯಮಂತ್ರಿ, ಮಾಜಿ ಸಚಿವ ನಾಗೇಂದ್ರ ಹಾಗೂ ಎಫ್ಡಿ ಇಲಾಖೆಯ ಅಧಿಕಾರಿಗಳ ಹೆಸರು ಹೇಳುವಂತೆ ಒತ್ತಡ ಹಾಕಿದ್ದ ಇ.ಡಿ. ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಲ್ಲೇಶ್‌ ದೂರಿನಲ್ಲಿ ಮನವಿ ಮಾಡಿದ್ದಾರೆ.

ಗಂಭೀರ ಸ್ವರೂಪವಲ್ಲದ ಪ್ರಕರಣ ದಾಖಲಿಸಿದ್ದ ಪೊಲೀಸರು!
ಬಿ. ಕಲ್ಲೇಶ್‌ ಈ ಹಿಂದೆ ಶೇಷಾದ್ರಿಪುರ ಠಾಣೆಯಲ್ಲಿ ಇ.ಡಿ. ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ಆದರೆ ಶೇಷಾದ್ರಿಪುರ ಠಾಣೆ ಪೊಲೀಸರು ಇದೊಂದು ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್‌ಸಿಆರ್‌) ದಾಖಲಿಸಿಕೊಂಡಿದ್ದರು. ಅನಂತರ ಘಟನೆ ನಡೆದ ಸ್ಥಳದ ಆಧಾರದ ಮೇಲೆ ವಿಲ್ಸನ್‌ ಗಾರ್ಡನ್‌ ಠಾಣೆಗೆ ಎನ್‌ಸಿಆರ್‌ ವರ್ಗಾವಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಲ್ಸನ್‌ಗಾರ್ಡನ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next