ಬೆಂಗಳೂರು: ಆಪಾದಿತ ಮುಡಾ ಹಗರಣ(MUDA)ಪ್ರಕರಣದಲ್ಲಿ ಸಿದ್ದರಾಮಯ್ಯ(CM Siddaramaiah) ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲರ ಅನುಮತಿಯನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಅರ್ಜಿಯ ಸುದೀರ್ಘ ವಿಚಾರಣೆಯನ್ನು ಶನಿವಾರ(ಆ 31)ಕರ್ನಾಟಕ ಹೈಕೋರ್ಟ್ ನಡೆಸಿದ್ದು ಮುಂದಿನ ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ 2.30ಕ್ಕೆ(ಸೆ 2) ಮುಂದೂಡಿದೆ.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಈ ಹಿಂದೆ ಸಿದ್ದರಾಮಯ್ಯ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಮಧ್ಯಾಂತರ ಪರಿಹಾರವನ್ನು ನೀಡಿದ್ದರು. ರಾಜ್ಯಪಾಲರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಾದ ಮಂಡಿಸಿದರು. ಸಿದ್ದರಾಮಯ್ಯ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿದರು.
ಸಿದ್ದರಾಮಯ್ಯ ಅವರ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರ ಸಂಪೂರ್ಣವಾಗಿ ಸ್ವತಂತ್ರವಾದ ವಿವೇಚನೆಯಿಂದ ಕೂಡಿದ್ದು, ತರ್ಕಬದ್ಧ ವಾಗಿದೆ. ಇದರಲ್ಲಿ ಸಹಜ ನ್ಯಾಯದ ತತ್ವಗಳನ್ನು ಪಾಲಿಸಲಾಗಿದೆ. ಸೂಕ್ತ ಕಾರಣಗಳ ತಳಹದಿಯಲ್ಲಿ ರಾಜ್ಯ ಪಾಲರು ಮಂತ್ರಿ ಪರಿಷತ್ತಿನ ನಿರ್ಣಯ ವನ್ನು ತಿರಸ್ಕರಿಸಿದ್ದಾರೆ ಎಂದು ಸಾಲಿಸಿ ಟರ್ ಜನರಲ್ ತುಷಾರ್ ಮೆಹ್ತಾ ಬಲವಾಗಿ ಪ್ರತಿಪಾದಿಸಿದ್ದಾರೆ.
ಬೆಳಗ್ಗೆ 11 ಗಂಟೆಗೆ ಆರಂಭವಾದ ಅರ್ಜಿಯ ವಿಚಾರಣೆ ಮಧ್ಯಾಹ್ನ ಊಟದ ವಿರಾಮದ ಬಳಿಕ ಮತ್ತೆ ಆರಂಭವಾಯಿತು. ಸಂಜೆ 4:47 ಕ್ಕೆ ದಿನದ ವಿಚಾರಣೆ ಕೊನೆಗೊಂಡ ಬಳಿಕ ಸೋಮವಾರಕ್ಕೆ ಮುಂದೂಡಿಕೆ ಮಾಡಲಾಯಿತು.
”ನಾನು ಮಧ್ಯಾಂತರ ಆದೇಶವನ್ನು ಏಕೆ ನೀಡಿದ್ದೇನೆ? ವಿಷಯವನ್ನು ಆಲಿಸುತ್ತಿರುವಾಗ, ಯಾವುದೇ ಅಧೀನ ನ್ಯಾಯಾಲಯವು ವಿಚಾರಣೆಯನ್ನು ಮುಂದುವರಿಸುವುದಿಲ್ಲ. ಅದು ಸರಿಯಲ್ಲ. ನಾನು ಅದನ್ನು ನಿಲ್ಲಿಸಲು ಕಾರಣ. ನಾನು ಅದನ್ನು ಆಲಿಸುತ್ತಿದ್ದೇನೆ.ಮಂಜೂರಾತಿ ಅಗತ್ಯವಿದೆಯೇ, ಅದು ಸರಿಯೇ ನಾನು ನಿರ್ಧರಿಸಬೇಕು. ನೀವು ತ್ವರಿತವಾಗಿ ಮುಗಿಸಲು ಬಯಸಿದರೆ, ನಾವು ತ್ವರಿತವಾಗಿ ಮುಗಿಸುತ್ತೇವೆ. ನಾನು ಇದನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳಲು ಬಯಸುವುದಿಲ್ಲ” ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಹೇಳಿದ್ದಾರೆ.