Advertisement

Belagavi; ಸಿಎಂ ವಿರುದ್ದ ಆರೋಪ ಮಾಡಿದ ಬಿಜೆಪಿಯವರು ಪಶ್ಚಾತಾಪ ಪಡಲಿದ್ದಾರೆ: ಎಂ.ಬಿ.ಪಾಟೀಲ

05:46 PM Aug 30, 2024 | Team Udayavani |

ಬೆಳಗಾವಿ: ಮುಡಾ ಪ್ರಕರಣದ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaih) ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿರುವ ಬಿಜೆಪಿ (BJP) ನಾಯಕರಿಗೆ ಸದ್ಯದಲ್ಲೇ ಪಶ್ಚಾತ್ತಾಪ ಪಡುವ ಪರಿಸ್ಥಿತಿ ಬರಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (M.B Patil) ಭವಿಷ್ಯ ನುಡಿದರು.

Advertisement

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಏನೂ ಇಲ್ಲ. ಕೆಲ ಬಿಜೆಪಿ ನಾಯಕರೇ ಇದನ್ನು ಹೇಳಿದ್ದಾರೆ. ಹೀಗಾಗಿ ಬಿಜೆಪಿ ನಾಯಕರಿಗೆ ಮುಂದೆ ತಮ್ಮ ತಪ್ಪಿನ ಅರಿವಾಗಲಿದೆ. ಈ ಪ್ರಕರಣದ ನಂತರ ಸಿದ್ದರಾಮಯ್ಯ ಮತ್ತಷ್ಟು ಬಲಶಾಲಿಯಾಗಿ ಹೊರಹೊಮ್ಮಲಿದ್ದಾರೆ ಎಂದರು.

ಇದರಲ್ಲಿ ಮುಡಾದಿಂದಲೇ ತಪ್ಪಾಗಿದೆ. ಭೂ ಸ್ವಾಧೀನ ಮತ್ತು ಸ್ವಾಧೀನ ಪಡಿಸಿಕೊಂಡ ಭೂಮಿಗೆ ಪರಿಹಾರ ಕೊಡುವ ವಿಷಯದಲ್ಲಿ ಮುಡಾ ತಪ್ಪು ಮಾಡಿದೆ. ಅಗ ಜೆಡಿಎಸ್ ಮತ್ತು ಬಿಜೆಪಿ ಅಧಿಕಾರದಲ್ಲಿದ್ದರು. ನಿಜವಾಗಿಯೂ ಹೇಳಬೇಕೆಂದರೆ ಈ ಪ್ರಕರಣದಲ್ಲಿ ಮುಡಾ ವಿರುದ್ಧವೇ ಕ್ರಮವಾಗಬೇಕು ಎಂದು ಪಾಟೀಲ್‌ ಹೇಳಿದರು.

ಮುಡಾ ಪ್ರಕರಣದ ವಿಷಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವದಿಲ್ಲ. ಅವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಹೀಗಾಗಿ ಯಾರೂ ಈ ಗಾದಿಯ ಮೇಲೆ ಟವಲ್ ಹಾಕುವ ಪ್ರಮೇಯವೇ ಬರುವದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಮುಖ್ಯಮಂತ್ರಿಯಾಗುವ ಆಸೆಯಿದೆ. ಆದರೆ ದುರಾಸೆ ಇಲ್ಲ. ಮುಖ್ಯಮಂತ್ರಿ ಹುದ್ದೆ ಖಾಲಿಯೇ ಇಲ್ಲ ಎಂದ ಮೇಲೆ ಅದರ ಮೇಲೆ ಆಸೆ ಪಡುವ ಪ್ರಶ್ನೆ ಎಲ್ಲಿಂದ ಬಂತು. ಈ ವಿಷಯದಲ್ಲಿ ಹೈ ಕಮಾಂಡ್ ನಿರ್ಧಾರವೇ ಅಂತಿಮ ಎಂದರು.

Advertisement

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಕೇಂದ್ರ ಸಚಿವರಾಗಿರುವ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಜನಾರ್ದನ ರೆಡ್ಡಿ ಮತ್ತು ಶಶಿಕಲಾ ಜೊಲ್ಲೆ ಅವರ ವಿರುದ್ಧ ಪ್ರಾಥಮಿಕ ಹಂತರ ವಿಚಾರಣೆ ಮುಗಿದಿದ್ದರೂ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿಲ್ಲ. ಈ ನಾಯಕರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿ ತನಿಖೆ ಪೂರ್ಣಗೊಂಡಿದೆ. ಆದರೂ ಪ್ರಾಸಿಕ್ಯೂಷನ್ ಗೆ ಕ್ರಮವಹಿಸಿಲ್ಲ. ಆದರೆ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಯಾವುದೇ ವಿಚಾರಣೆಯೂ ಆಗಿಲ್ಲ. ಆದರೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿದ್ದಾರೆ ಎಂದು ಎಂ.ಬಿ ಪಾಟೀಲ ಹೇಳಿದರು.

ಇದನ್ನು ವಿರೋಧಿಸಿ ನಾಳೆ ಶನಿವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ನಂತರ ಕುಮಾರಸ್ವಾಮಿ, ಮುರುಗೇಶ ನಿರಾಣಿ, ಜನಾರ್ದನ ರೆಡ್ಡಿ ಮತ್ತು ಶಶಿಕಲಾ ಜೊಲ್ಲೆ ವಿರುದ್ಧದ ಪ್ರಕರಣಗಳಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರನ್ನು ಭೇಟಿಯಾಗಿ ಒತ್ತಾಯಿಸಲಾಗುವದು ಎಂದು  ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next