Advertisement
ಖರ್ಗೆಯವರಿಗೆ ಕಲಬುರಗಿ ಯಲ್ಲಿ ಬಿಜೆಪಿಯಿಂದ ಪ್ರಬಲ ಪೈಪೋಟಿ ಇರುವುದ ರಿಂದ ಅವರಿಗೆ ಸೋಲಾಗದಂತೆ ನೋಡಿಕೊಳ್ಳಲು ಎರಡು ಕಡೆ ಸ್ಪರ್ಧೆಗೆ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆ ಇಡಲಾಗಿದೆ. ಹಿರಿಯ ಶಾಸಕರಾದ ರಮೇಶ್ ಕುಮಾರ್ ಸೇರಿ ಪಕ್ಷದ ಕೆಲವು ಹಿರಿಯ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ, ಖರ್ಗೆಯವರ ಸೋಲು ಗೆಲುವಿನಿಂದ ರಾಷ್ಟ್ರ ರಾಜಕಾರಣ ಹಾಗೂ ಕಾಂಗ್ರೆಸ್‌ಗೆ ಆಗುವ ನಷ್ಟದ ಬಗ್ಗೆ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ.
Related Articles
Advertisement
ಕೋಲಾರ ಗೊಂದಲ: ಅದೇ ಕಾರಣಕ್ಕೆ ಕೋಲಾರ ಲೋಕಸಭಾ ಕ್ಷೇತ್ರದಿಂದಲೂ ಖರ್ಗೆಯವರಿಗೆ ಟಿಕೆಟ್ ನೀಡುವಂತೆ ಕೋಲಾರ ಜಿಲ್ಲಾ ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ದಲಿತ ಬಲಗೈ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅಲ್ಲಿ ಸ್ಪರ್ಧೆ ಮಾಡಿದರೆ ಖರ್ಗೆಯವರ ಗೆಲುವು ಸುಲಭವಾಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಅದಕ್ಕೆ ಪರ್ಯಾಯವಾಗಿ ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ಕಲ್ಪಿಸಿದರೆ, ಅಲ್ಲಿ ದಲಿತ ಎಡಗೈ ಸಮುದಾಯ ಹೆಚ್ಚಿರುವುದರಿಂದ ಅವರೂ ಗೆಲ್ಲಲು ಅನುಕೂಲವಾಗುತ್ತದೆ. ಅದರೊಂದಿಗೆ ದಲಿತ ಎಡಗೈ ಸಮುದಾಯದ ಮತದಾರರು ಹೆಚ್ಚಿರುವ ಪಕ್ಕದ ದಾವಣಗೆರೆ ಹಾಗೂ ಬಳ್ಳಾರಿ ಲೋಕ ಸಭಾ ಕ್ಷೇತ್ರದಲ್ಲಿಯೂ ಮುನಿಯಪ್ಪ ಸ್ಪರ್ಧೆಯಿಂದ ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರವನ್ನು ರಾಹುಲ್ ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯ ನಾಯಕರ ವಾದವನ್ನು ಖರ್ಗೆಯವರು ನಯವಾಗಿ ತಳ್ಳಿ ಹಾಕಿದ್ದಾರೆ ಎನ್ನಲಾಗಿದ್ದು, ಕಲಬುರಗಿಯಲ್ಲಿ ಮಾತ್ರ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ, ಅಂತಿಮವಾಗಿ ಹೈಕಮಾಂಡ್ ಸೂಚಿಸಿದರೆ, ಅನಿವಾರ್ಯವಾಗಿ ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮುನಿಯಪ್ಪಗೆ ಅವಕಾಶ ತಪ್ಪಿಸಲು ತಂತ್ರ: ಆದರೆ, ಕೆಲವು ನಾಯಕರ ಈ ಪ್ರಯತ್ನಕ್ಕೆ ಕೆಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಕೆ.ಎಚ್. ಮುನಿಯಪ್ಪ ಅವರನ್ನು ಕೋಲಾರ ಕ್ಷೇತ್ರದಿಂದ ಹೊರ ಹಾಕಲು ಖರ್ಗೆಯವರ ಹೆಸರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಖರ್ಗೆಯವರು ಎರಡು ಕಡೆಯಲ್ಲಿ ಸ್ಪರ್ಧೆಮಾಡಿದರೆ, ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಚುನಾವಣಾ ಸಮಿತಿ ಸಭೆಯಲ್ಲಿ ನಿರ್ಧಾರ
ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಲು ಬಿಜೆಪಿ ರಾಷ್ಟ್ರೀಯ ನಾಯಕರು ನಡೆಸುತ್ತಿರುವ ಪ್ರಯತ್ನದ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ನಾಯಕರು ಗಂಭೀರವಾಗಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಕುರಿತಂತೆ ಶನಿವಾರ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಶಂಕರ ಪಾಗೋಜಿ