Advertisement
ಗೌರಿ ಲಂಕೇಶ್ ಹತ್ಯೆಯಾಗಿ ಮೂರು ತಿಂಗಳು ಕಳೆದರೂ ಇದುವರೆಗೂ ಆರೋಪಿಗಳನ್ನು ಬಂಧಿಸದಿರುವುದನ್ನು ಖಂಡಿಸಿ ಗೌರಿ ಲಂಕೇಶ್ ಬಳಗದ ಕಾರ್ಯಕರ್ತರು ಮಂಗಳವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಮತ್ತಿಗೆ ಹಾಕಲು ಜಾಥಾ ಕೈಗೊಂಡರು. ಮೌರ್ಯ ವೃತ್ತದಿಂದ ಕೆಲ ದೂರ ಹೋಗುತ್ತಿದ್ದಂತೆ ನೂರಾರು ಮಂದಿ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ಬಳಿಕ ಬಿಡುಗಡೆ ಮಾಡಿದರು.
Related Articles
Advertisement
ಲೇಖಕ ಯೋಗೇಶ್ ಮಾಸ್ಟರ್, ಕೋಮು ಸೌಹರ್ದ ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್, ವಕೀಲರಾದ ಅನಂತ್‌ನಾಯ್ಕ, ನರಸಿಂಹಮೂರ್ತಿ, ಬಸವರಾಜ ಪೂಜಾರ್, ಹಿರಿಯ ಸಾಹಿತಿ ಕೆ.ನೀಲಾ, ತ್ರಿಮೂರ್ತಿ ಇತರರು ಇದ್ದರು.
ಅನೂಪ್ ಗೌಡ ವಿಚಾರಣೆ: ಇತ್ತೀಚೆಗಷ್ಟೇ ಅಪಹರಣ ಯತ್ನ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ತಾಹೀರ್ ಹುಸೇನ್ ಅಲಿಯಾಸ್ ಅನೂಪ್ ಗೌಡನನ್ನು ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಲಿದೆ.
ಚಿಕ್ಕಬಳ್ಳಾಪುರ ಮೂಲದ ತಾಹೀರ್ ಹುಸೇನ್ ಹಲವು ಬಾರಿ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಪ್ರಕರಣಗಳಲ್ಲಿ ಬಂಧಿತನಾಗಿದ್ದಾನೆ. ಈತನ ವಿರುದ್ಧ ಬೆಳಗಾವಿ, ಮೈಸೂರು, ಬೆಂಗಳೂರು, ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ. 10 ತಿಂಗಳ ಹಿಂದೆಯಷ್ಟೇ ತಾಹೀರ್ ಹುಸೇನ್‌ನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದರು.
ನೆರೆ ರಾಜ್ಯಗಳಲ್ಲಿನ ಅಕ್ರಮ ಶಸ್ತ್ರಾಸ್ತ್ರ ಪೂರೈಸುವವರೊಂದಿಗೆ ತಾಹೀರ್ ನಿಕಟ ಸಂಪರ್ಕ ಹೊಂದಿದ್ದು, ಇದನ್ನೇ ಈತ ವೃತ್ತಿಯನ್ನಾಗಿಸಿಕೊಂಡಿದ್ದ. ಆತನನ್ನು ಸದ್ಯದಲ್ಲೇ ವಶಕ್ಕೆ ಪಡೆದು ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತೇವೆ. ಡಿ.16ರವರೆಗೆ ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುವುದು ಎಂದು ಎಸ್‌ಐಟಿ ತನಿಖಾಧಿಕಾರಿ ಎಂ.ಎನ್.ಅನುಚೇತ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಗೌರಿ ಹಂತಕರಿಗೆ ಪಿಸ್ತೂಲ್ ಮಾರಾಟ?: ಪತ್ರಕರ್ತೆ ಗೌರಿ ಹತ್ಯೆಗೈದಿರುವುದು 7.65 ಎಂಎಂ ಕಂಟ್ರಿ ಮೆಡ್ ಪಿಸ್ತೂಲ್‌ನಲ್ಲಿಯೇ ಎಂದು ವಿಧಿ ವಿಜ್ಞಾನ ಪರೀûಾ ವರದಿ ತಿಳಿಸಿದೆ. ಹೆಚ್ಚಾಗಿ ಈ ಕಂಟ್ರಿ ಮೆಡ್ ಪಿಸ್ತೂಲ್‌ಗಳು ಮಾರಾಟವಾಗುವುದು ಉತ್ತರ ಕರ್ನಾಟಕದ ಭಾಗದಲ್ಲಿ.
ಜತೆಗೆ ಗೌರಿ ಹಂತಕರಿಗೆ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದ ಕಡೆಯವರೇ ಪಿಸ್ತೂಲ್ ಪೂರೈಕೆ ಮಾಡಿದ್ದಾರೆ ಎಂಬ ಅನುಮಾನ ಕೂಡ ಇದೆ. ಈ ಹಿನ್ನೆಲೆಯಲ್ಲಿ ತಾಹೀರ್‌ನನ್ನು ವಿಚಾರಣೆಗೊಳಪಡಿಸುವುದರಿಂದ ಮಹತ್ವದ ಸುಳಿವು ಸಿಗುವ ಸಾಧ್ಯತೆಯಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.