ಬೆಂಗಳೂರು: ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಜಾಮೀನು ಅರ್ಜಿ ವಿಚಾರಣೆ ವೇಳೆ ಅವರ ವಿರುದ್ಧ ತಕರಾರು ಸಲ್ಲಿಸದಂತೆ ತುಮಕೂರಿನ ಎಎಸ್‌ಪಿ ಎಚ್.ಡಿ.ಆನಂದ್ ಕುಮಾರ್,ಬೆಂಗಳೂರಲ್ಲಿ ಸಿಸಿಬಿ ಡಿಸಿಪಿಯಾಗಿದ್ದಾಗ ವಿಶೇಷ ತನಿಖಾ ದಳದ ಸರ್ಕಾರಿ ಅಭಿಯೋಜಕರಿಗೆ ಒತ್ತಡ ಹೇರಿದ್ದ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ವಿಶೇಷ ತನಿಖಾ ದಳದ ಐಜಿಪಿ ಚರಣ್‌ರೆಡ್ಡಿ ಅವರು ಮೇ 25ರಂದೇ ರಾಜ್ಯ ಪೊಲೀಸ್ ಮಾಹಾ ನಿರ್ದೇಶಕ ರೂಪಕ್ ಕುಮಾರ್ ದತ್ತಾ ಅವರಿಗೆ ವರದಿ ನೀಡಿದ್ದಾರೆ. ಇಲಾಖೆ ಆಂತರಿಕ ವಿಚಾರಣೆಯಲ್ಲಿ ಚರಣ್‌ರೆಡ್ಡಿ ನೀಡಿದ ವರದಿಯಲ್ಲಿ ಸತ್ಯಾಂಶ ಕಂಡು ಬಂದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆನಂದ್‌ಕುಮಾರ್ ಅವರನ್ನು ಸಿಸಿಬಿಯಿಂದ ಎತ್ತಂಗಡಿ ಮಾಡಿ ತುಮಕೂರಿನ ಎಎಸ್‌ಪಿಯಾಗಿ ವರ್ಗಾಯಿಸಲಾಗಿದೆ ಎಂದು ಹೇಳಲಾಗಿದೆ.
ಜಂತಕಲ್ ಮೈನಿಂಗ್ ಪ್ರಕರಣ ಸಂಬಂಧ ಮೇ 15ರಂದು ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಅವರನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದರು. ಇದೇ ವೇಳೆ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಅಪರಾಧ ವಿಭಾಗದ ಡಿಸಿಪಿಯಾಗಿದ್ದ ಆನಂದ್‌ಕುಮಾರ್, ಎಸ್‌ಐಟಿಯ ಸರ್ಕಾರಿ ಅಭಿಯೋಜಕರಿಗೆ ತಕರಾರು ಅರ್ಜಿ ಸಲ್ಲಿಸದಂತೆ ಪ್ರಭಾವ ಬೀರುತ್ತಿದ್ದರು. ಜತೆಗೆ ಗಂಗಾರಾಮ್ ಬಡೇರಿಯಾ ಪರವಾಗಿ ಕೆಲಸ ಮಾಡುವಂತೆ ಎಸ್‌ಐಟಿ ಅಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದರು.
ಅಷ್ಟೇ ಅಲ್ಲ ಬಡೇರಿಯಾ ಜಾಮೀನು ಅರ್ಜಿ ವಿಚಾರಣೆ ವೇಳೆ ಖುದ್ದಾಗಿ ಕಲಾಪ ಸಹ ವೀಕ್ಷಿಸಿದ್ದರೆಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ಐಜಿಪಿ ಚರಣ್‌ರೆಡ್ಡಿ, ತನಿಖಾಧಿಕಾರಿಯೊಬ್ಬರಿಗೆ ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ಮಾಹಿತಿ ಕಲೆಹಾಕಿದ ತನಿಖಾಧಿಕಾರಿಗಳು, ಬಡೇರಿಯಾ ವಿಚಾರದಲ್ಲಿ ಆನಂದಕುಮಾರ್ ಮಧ್ಯಸ್ಥಿಕಿ ವಹಿಸುತ್ತಿರುವುದು ಕಂಡು ಬಂದಿದೆ ಎಂದು ಸಮಗ್ರ ವರದಿ ಸಲ್ಲಿಸಿದ್ದರು. ಇದನ್ನಾಧರಿಸಿ ಚರಣ್ ರೆಡ್ಡಿ, ರಾಜ್ಯ ಡಿಜಿಪಿ ರೂಪಕ್ ಕುಮಾರ್ ದತ್ತಾ ಅವರಿಗೆ ವರದಿ ನೀಡಿದ್ದರು.
“ಪೊಲೀಸ್ ಅಧಿಕಾರಿಯೊಬ್ಬರು ತನಿಖಾ ಸಂಸ್ಥೆಯ ವಿಚಾರಣೆಯಲ್ಲಿ ಪ್ರಭಾವ ಬೀರುತ್ತಿದ್ದಾರೆ. ಆರೋಪಿತರ ಪರವಾಗಿ ಸಹಾಯ ಮಾಡುವಂತೆ ತನಿಖಾಧಿಕಾರಿಗಳು ಮತ್ತು ವಕೀಲರಿಗೆ ಒತ್ತಡ ಹೇರುತ್ತಿದ್ದಾರೆ. ಹೀಗೆ ಪ್ರಭಾವ ಬೀರಿದರೆ ಕೆಲಸ ಮಾಡುವುದಾದರೂ ಹೇಗೆ. ಆದ್ದರಿಂದ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ’ ಎಂದು ಚರಣರೆಢಿz ಮನವಿ ಮಾಡಿದ್ದರು.