ವಾಡಿ: ತಡೆ ಹಿಡಿಯಲಾದ 18 ದಿನದ ಬಾಕಿ ವೇತನ ಬಿಡುಗಡೆ ಹಾಗೂ ಬೋಗಸ್ ಬಿಲ್ ಹಾಕುವಂತೆ ಕಾಯಕ ಬಂದುಗಳ ಮೇಲೆ ಒತ್ತಡ ಹೇರುತ್ತಿರುವ ಗ್ರಾಪಂ ಸದಸ್ಯರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಇಂಗಳಗಿ ಗ್ರಾಪಂ ವ್ಯಾಪ್ತಿಯ ನರೇಗಾ ಕೂಲಿ ಕಾರ್ಮಿಕರು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಮಂಗಳವಾರ ಪಂಚಾಯತಿ ಮುಂದೆ ಜಮಾಯಿಸಿ ಘೋಷಣೆ ಕೂಗುವ ಮೂಲಕ ಪಿಡಿಒ ರೇಷ್ಮಾ ಕೋತ್ವಾಲ್ ಮತ್ತು ಗ್ರಾಪಂ ಅಧ್ಯಕ್ಷ ಸುಭಾಸ ಯಾಮೇರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನರೇಗಾ ಯೋಜನೆಯಡಿ ಇಂಗಳಗಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 500 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. 18 ದಿನಗಳು ಕಳೆದರೂ ಕಾರ್ಮಿಕರ ಖಾತೆಗೆ ಶ್ರಮದ ವೇತನ ಜಮೆ ಮಾಡಿಲ್ಲ. ಇದರಿಂದ ಕಾರ್ಮಿಕರ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದ ಗಳಿಗೆಯಲ್ಲಿ ಕೆಸಲ ಕೊಟ್ಟು ವೇತನ ಪಾವತಿಸಲೆಂದೇ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಲಾಗಿದೆ. ಆದರೆ ಪಂಚಾಯತಿ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಧೋರಣೆಯಿಂದಾಗಿ ಕಾರ್ಮಿಕರು ವೇತನದಿಂದ ವಂಚಿತರಾಗಿದ್ದಾರೆ. ಅಲ್ಲದೆ ಕುಂದನೂರು ಗ್ರಾಮದಿಂದ ಚುನಾಯಿತರಾದ ಕೆಲ ಪಂಚಾಯಿತಿ ಸದಸ್ಯರು ತಮ್ಮ ಸ್ವಾರ್ಥಕ್ಕಾಗಿ ನರೇಗಾ ಯೋಜನೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಬೋಗಸ್ ಹಾಜರಿ ಹಾಕುವಂತೆ ಕಾಯಕ ಬಂದುಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ದುಡಿಯುವ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಇಂತಹ ಜನಪ್ರತಿನಿಧಿಗಳಿಂದ ಯೋಜನೆಯೂ ದುರ್ಬಳಕೆಯಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಕುಂದನೂರಿನ ಕೆಲ ಪುಡಾರಿಗಳಿಂದ ಹಲ್ಲೆ ಮಾಡುವ ಬೆದರಿಕೆಗಳು ಬಂದಿವೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಬೋಗಸ್ ಹಾಜರಿ ಹಾಕಿಸಿಕೊಳ್ಳಲು ಕಾಯಕ ಬಂದುಗಳ ಮೇಲೆ ಒತ್ತಡ ಹೇರುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಅಕ್ರಮ ಹಾಜರಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಚಿತ್ತಾಪುರ ತಾಲೂಕು ಅಧ್ಯಕ್ಷೆ ಶೇಖಮ್ಮ ಕುರಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಸಾಯಬಣ್ಣ ಗುಡುಬಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ನರೇಗಾ ಕಾರ್ಮಿಕರಾದ ವಿಜಯಲತಾ ಸಂಕಾ, ಗಿಡ್ಡಮ್ಮ ಪವಾರ, ಮಲ್ಲಮ್ಮ ಸಂಕಾ, ಮಲ್ಲಪ್ಪ ನಾಟೀಕಾರ, ಜೈರಾಬಿ, ಜಗದೇವಿ ಪೂಜಾರಿ, ನಾಗಮ್ಮ ಸೇರಿದಂತೆ ನೂರಾರು ಜನ ನರೇಗಾ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.