Advertisement

ತುರ್ತು ಸೇವಾ ಸಿಬಂದಿಗೆ ಸಿಗದ ಬಸ್‌ ಸೇವೆ

11:26 PM Apr 28, 2020 | Sriram |

ಬೆಳ್ತಂಗಡಿ: ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬಂದಿಗೆ ತುರ್ತು ಸೇವೆ ನೆಲೆಯಲ್ಲಿ ಕಚೇರಿಗೆ ಹಾಜರಾಗಲು ಅನುಕೂಲವಾಗುವಂತೆ ಜಿಲ್ಲಾಡಳಿತ ಆದೇಶದ ಮೇರೆಗೆ ಕೆಎಸ್ಸಾರ್ಟಿಸಿ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಿದೆ. ಆದರೆ ಬೆಳ್ತಂಗಡಿ ತಾಲೂಕಿಗೆ ಮಾತ್ರ ಇದು ಅನ್ವಯವಾದಂತಿಲ್ಲ.

Advertisement

ಮಂಗಳೂರು ಮತ್ತು ಪುತ್ತೂರು ವಿಭಾಗಗಳಿಂದ ಒಟ್ಟು 7 ಬಸ್‌ಗಳು ಕಾರ್ಯಾಚರಿಸುತ್ತಿವೆ. ಪ್ರತಿ ಬಸ್‌ನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೇವಲ 30 ಮಂದಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ.

ಸರಕಾರಿ ನೌಕರರು ಗುರುತಿನ ಚೀಟಿ ತೋರಿಸಿ ನಿಗದಿತ ಟಿಕೆಟ್‌ ದರ ಪಾವತಿಸಿ ಪ್ರಯಾಣಿಸಲು ಅವಕಾಶ ಇದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿಂದಲೂ ಈ ಸಮಸ್ಯೆ ಎದುರಾಗಿದ್ದು, ಈ ಕುರಿತು ಜಿಲ್ಲಾಡಳಿತ ಉಪಕ್ರಮಕ್ಕೆ ಮುಂದಾಗಿರಲಿಲ್ಲ. ತೀವ್ರ ಒತ್ತಡದ ನಡುವೆ ಬಸ್‌ ಸೇವೆ ನೀಡಲಾದರೂ ಗ್ರಾಮೀಣ ಭಾಗವಾದ ಬೆಳ್ತಂಗಡಿಗೆ ಮಾತ್ರ ಸೇವೆ ಒದಗಿಸುವಲ್ಲಿ ವಿಫಲವಾಗಿದೆ.

ಬೆಳ್ತಂಗಡಿ ತಾಲೂಕಿನಿಂದ ವೆನ್ಲಾಕ್ ಹಾಗೂ ಲೇಡಿಗೋಷನ್‌ ಆಸ್ಪತ್ರೆಗೆ ಪ್ರತಿನಿತ್ಯ 12 ಮಂದಿ ಸಿಬಂದಿ ತೆರಳುವವರಿದ್ದಾರೆ. ಪ್ರತಿನಿತ್ಯ 60 ಕಿ.ಮೀ. ದೂರ ಸ್ವಂತ ವಾಹನದಲ್ಲಿ ತೆರಳುವುದು ಸಾಧ್ಯವಿಲ್ಲದಿರುವುದರಿಂದ ಜಿಲ್ಲಾಡಳಿತ ಶೀಘ್ರ ಸ್ಪಂದಿಸುವಂತೆ ಸೇವಾ ಸಿಬಂದಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ನೀಡಿದರೂ ಯಾವುದೇ ಸ್ಪಂದನೆ ಇಲ್ಲದಂತಾಗಿದೆ.

Advertisement

ಬ್ಯಾಂಕ್‌, ಪಿಡಿಒ ಸೇರಿದಂತೆ ಅನೇಕ ಸಿಬಂದಿಗಳು ದುಬಾರಿ ವ್ಯಯದೊಂದಿಗೆ ಕಚೇರಿ ಕೆಲಸಕ್ಕೆ ತೆರಳಬೇಕಾಗಿದೆ. ಆದ್ದರಿಂದ ಸೇವೆ ವಿಸ್ತರಿಸುವಂತೆಯೂ ಕೂಗು ಕೇಳಿಬಂದಿದೆ.

ತಾತ್ಕಾಲಿಕ ಖಾಸಗಿ ವಾಹನ ವ್ಯವಸ್ಥೆ
ಸದ್ಯ ಪುಂಜಾಲಕಟ್ಟೆವರೆಗೆ ಕೆ.ಎಂ.ಸಿ. ಆಸ್ಪತ್ರೆ ಸಿಬಂದಿಯನ್ನು ಕರೆದೊಯ್ಯುತ್ತಿರುವ ಬಸ್‌ ಸೇವೆಯನ್ನು ಮುಂದುವರಿಕೆಯಾಗಿ ಬೆಳ್ತಂಗಡಿಗೆ ವಿಸ್ತರಿಸಲು ವಿನಂತಿಸಲಾಗಿದೆ. ಸಮಯ ಹೊಂದಾಣಿಕೆಯಾಗದಿದ್ದಲ್ಲಿ ತಾತ್ಕಾಲಿಕ ಖಾಸಗಿ ವಾಹನ ವ್ಯವಸ್ಥೆ ಕಲ್ಪಿಸಲಾಗುವುದು.
 -ಹರೀಶ್‌ ಪೂಂಜ, ಶಾಸಕ

ಜಿಲ್ಲಾಡಳಿತದಿಂದ ಸೂಚನೆ ಬಂದಿಲ್ಲ
ತುರ್ತು ಸೇವೆ ಪರಿಗಣಿಸಿ ಜಿಲ್ಲಾಡಳಿತದ ಸೂಚನೆಯಂತೆ ಸರಕಾರಿ ಆಸ್ಪತ್ರೆ ಸಿಬಂದಿಗೆ ಪುತ್ತೂರು ವಿಭಾಗದಿಂದ ಬಸ್‌ ಸೇವೆ ಒದಗಿಸಲಾಗಿದೆ. ಬೆಳ್ತಂಗಡಿ ವ್ಯಾಪ್ತಿಯಿಂದ ಬಸ್‌ ಆವಶ್ಯಕತೆ ಕುರಿತು ಜಿಲ್ಲಾಡಳಿತದಿಂದ ಯಾವುದೇ ಸೂಚನೆ ಬಂದಿಲ್ಲ.
 -ಅರುಣ್‌ ಎನ್‌.ಎಸ್‌., ಮಂಗಳೂರು ಕೆ.ಎಸ್‌.ಆರ್‌.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next