Advertisement

ಫಲಿತಾಂಶ ಕುಸಿದ ಶಾಲೆಯ ಅನುದಾನ ಕಟ್‌: ಸಂಕನೂರ 

04:59 PM May 23, 2018 | |

ಧಾರವಾಡ: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ಜಿಲ್ಲಾ ಸರಾಸರಿಗಿಂತ ಕಡಿಮೆ ಬಂದಿರುವ ಖಾಸಗಿ ಅನುದಾನಿತ ಶಾಲೆ, ಕಾಲೇಜುಗಳ ಅನುದಾನ ತಡೆ ಹಿಡಿಯಲು, ಕಡಿಮೆ ಮಾಡಲು ಅಥವಾ ಹಿಂತೆಗೆದುಕೊಳ್ಳಲು ಇತ್ತೀಚಿಗೆ ಸರಕಾರ ಗಂಭೀರವಾಗಿ ಚಿಂತನೆ ನಡೆಸಿರುವುದನ್ನು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ತೀವ್ರ ಖಂಡಿಸಿದ್ದಾರೆ.

Advertisement

ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಡಾ| ಶಾಲಿನಿ ರಜನೀಶ ಅವರು, ರಾಜ್ಯದ ಎಲ್ಲಾ ಉಪನಿರ್ದೇಶಕರಿಗೆ ಪತ್ರ ಬರೆದು, ಕಳೆದ 5 ವರ್ಷಗಳಲ್ಲಿ ಜಿಲ್ಲಾ ಸರಾಸರಿಗಿಂತ ಫಲಿತಾಂಶ ಕಡಿಮೆಯಾದ ಶಾಲೆ, ಕಾಲೇಜುಗಳ ಪಟ್ಟಿಯನ್ನು ಸಿದ್ಧಪಡಿಸಿ ಅನುದಾನ ತಡೆ ಹಿಡಿಯಲು ಅಥವಾ ಹಿಂಪಡೆಯಲು, ಕ್ರಮ ಜರುಗಿಸಲು ಸರಕಾರಕ್ಕೆ ಕಳುಹಿಸಲು ಸೂಚನೆ ನೀಡಿದ್ದಾರೆ. ಇದಕ್ಕೆ ತಪ್ಪಿದಲ್ಲಿ ಆಯಾ ಉಪನಿರ್ದೇಶಕರೇ ಹೊಣೆಗಾರರಾಗುತ್ತಾರೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಶಿಕ್ಷಣ ಕಾಯ್ದೆ ಅಧಿ ನಿಯಮ 1983 ಕಲಂನ 53ರ ಪ್ರಕಾರ ಖಾಸಗಿ ಅನುದಾನಿತ ಶಾಲೆ, ಕಾಲೇಜುಗಳಿಗೆ ನೀಡಿದ ಅನುದಾನ ತಡೆ ಹಿಡಿಯುವ, ಕಡಿಮೆ ಮಾಡುವ ಅಥವಾ ಹಿಂಪಡೆಯುವ ಅಧಿಕಾರ ಇರುವುದು. ಆದರೆ ಈ ಅಧಿಕಾರವನ್ನು ಬಳಸಿಕೊಂಡು ಸರಕಾರ ಶಾಲೆ, ಕಾಲೇಜುಗಳ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಫಲಿತಾಂಶ ಸಂಬಂಧಪಟ್ಟಕ್ಕೆ ಜಿಲ್ಲಾ ಸರಾಸರಿಗಿಂತ ಕಡಿಮೆ ಇರತಕ್ಕದ್ದಲ್ಲ ಎಂಬ ನಿಯಮ ರೂಪಿಸಿ ಆಜ್ಞೆ ಹೊರಡಿಸಿರುವುದು ಅವೈಜ್ಞಾನಿಕ ಹಾಗೂ ಅಮಾನವೀಯ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.

ಹೀಗಾಗಿ ಫಲಿತಾಂಶ ಜಿಲ್ಲಾ ಸರಾಸರಿಗಿಂತ ಕಡಿಮೆಯಾದಲ್ಲಿ ಏಕಾಏಕಿಯಾಗಿ ಅನುದಾನ ತಡೆಹಿಡಿಯುವ ಅಥವಾ ಹಿಂಪಡೆಯಬೇಕೆಂಬ ನಿಯಮಾವಳಿ ರೂಪಿಸಿದ್ದನ್ನು ರದ್ದುಪಡಿಸಬೇಕು. ಯಾವ ಕಾರಣಕ್ಕೂ ರಾಜ್ಯದ ಶಾಲೆ, ಕಾಲೇಜುಗಳ ಅನುದಾನ ತಡೆ ಹಿಡಿಯುವ ಕ್ರಮ ಕೈಗೊಳ್ಳಬಾರದು. ಒಂದು ವೇಳೆ ಫಲಿತಾಂಶ ಕಡಿಮೆಯಾದ ಕಾರಣದ ಮೇಲೆ ಸರಕಾರ ಅನುದಾನ ತಡೆಹಿಡಿಯಲು ಮುಂದಾದಲ್ಲಿ ರಾಜ್ಯಾದ್ಯಂತ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಹಾಗೂ ಆಡಳಿತ ಮಂಡಳಿ ಹೋರಾಟಕ್ಕೆ ಮುಂದಾಗುವ ಅನಿವಾರ್ಯ ಪ್ರಸಂಗ ಬರಲಿದೆ ಎಂದು ಸಂಕನೂರ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next