ಕಲಬುರಗಿ: ಮನಸ್ಸು ಭಾವನೆಗಳ ಗ್ರಂಥಾಲಯವಿದ್ದಂತೆ, ಒಂದಿಷ್ಟು ಜನ ಪುಟಗಳನ್ನು ಅರಿತುಕೊಂಡು ಉತ್ತಮ ಜೀವನ ನಡೆಸಿದರೆ ಇನ್ನು ಕೆಲವರು ಪುಟಗಳನ್ನು ಹರಿದು ಅತೃಪ್ತಿಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ| ವಾಸುದೇವ ಸೇಡಂ ಹೇಳಿದರು.
ನಗರದ ಆಳಂದ ರಸ್ತೆಯಲ್ಲಿರುವ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ರಾಷ್ಟ್ರೀಯ ವೈದ್ಯರ ದಿನಾಚರಣೆ, ಲೆಕ್ಕಪರಿಶೋಧಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಈ ಮೂರೂ ಕ್ಷೇತ್ರಗಳು ರಾಷ್ಟ್ರದ ಅಭಿವೃದ್ಧಿಯಲ್ಲಿ ಅತ್ಯುತ್ತಮ ಪಾತ್ರ ವಹಿಸಿ, ಸಮಾಜದ ಸ್ವಾಸ್ಥÂ ಕಾಪಾಡುತ್ತವೆ. ಕತ್ತಲೆ ಮೀರಿ ಬೆಳಕು ನೀಡುವುದರಿಂದಲೇ ದೀಪಕ್ಕೆ ಬೆಲೆ ಬರುತ್ತದೆ. ಹಾಗೆ ಕಷ್ಟ ಮೀರಿ ಬೆಳೆದು ನಿಂತಾಗಲೆ ಮನುಷ್ಯನಿಗೆ ಬೆಲೆ ಬರುತ್ತದೆ. ಅಂಥಹ ಸಾಲಿನಲ್ಲಿರುವವರನ್ನು ಗುರುತಿಸಿ ಗೌರವಿಸುತ್ತಿರುವ ಸಂಘದ ಕಾರ್ಯ ಶ್ಲಾಘನೀಯ ಎಂದರು.
ವಿಶೇಷ ಸನ್ಮಾನಿತರಾದ ಲೆಕ್ಕ ಪರಿಶೋಧಕ ಮಲ್ಲಿಕಾರ್ಜುನ ವಿ.ಮಹಾಂತಗೋಳ ಮಾತನಾಡಿ, ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದು ಕೇವಲ ವೈದ್ಯರಾಗುವುದು, ಎಂಜಿನಿಯರ್ ಆಗುವುದನ್ನಷ್ಟೇ ಜೀವನದಲ್ಲಿ ಗುರಿ ಇಟ್ಟುಕೊಂಡಿರುವುದು ವಿಷಾಧನೀಯ. ಪಾಲಕರು ಕೂಡ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಪಡೆಯಬೇಕು ಎನ್ನುವ ಒತ್ತಡ ತರುತ್ತಿದ್ದಾರೆ. ಹೀಗಾಗಬಾರದು. ಪರಿಶ್ರಮದಿಂದ ಬೇರೆಬೇರೆ ಕ್ಷೇತ್ರದಲ್ಲಿಯೂ ಸಾಧನೆ ಮಾಡಬಹುದು ಎಂದರು.
ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಹರಸೂರ, ಕನ್ನಡ ಜಾನಪದ ಪರಿಷತ್ ದಕ್ಷಿಣ ವಲಯ ಅಧ್ಯಕ್ಷ ಸಿದ್ಧಲಿಂಗ ಬಾಗಲಕೋಟಿ, ಕಾರ್ಯದರ್ಶಿ ಸಿದ್ಧರಾಮ ತಳವಾರ, ಖಜಾಂಚಿ ರಘುನಂದನ್ ಕುಲ್ಕರ್ಣಿ, ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದ ಮುಖ್ಯಸ್ಥ ಅಸ್ಲಾಂ ಶೇಖ್, ಸಂಗೀತ ಕಲಾವಿದ ಮಹೇಶ ತೆಲೆಕುಣಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಂಘದ ಅಧ್ಯಕ್ಷ ನ್ಯಾಯವಾದಿ ಹಣಮಂತರಾಯ ಅಟ್ಟೂರ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಪತ್ರಕರ್ತ ಚಂದ್ರಕಾಂತ ಹಾವನೂರ, ಹಿರಿಯ ವೈದ್ಯ ಡಾ| ವಿಶ್ವನಾಥ ವಾಗಣಗೇರಿ, ಲೆಕ್ಕ ಪರಿಶೋಧಕರಾದ ಸಿಎ ಮಲ್ಲಿಕಾರ್ಜುನ ವಿ.ಮಹಾಂತಗೋಳ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ನಂದಿನಿ ರೆಡ್ಡಿ ಪ್ರಾರ್ಥಿಸಿದರು, ಪಾಯಲ್ ಹಿಬಾರೆ ನಿರೂಪಿಸಿ, ವಂದಿಸಿದರು. ಲಕ್ಷ್ಮೀ ಡಾಖಲೆ, ಹಣಮಂತರಾಯ ಕುರಕೋಟಿ, ಇರ್ಫಾನ್ ಮಲಘಾಣ ಹಾಗೂ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.