Advertisement

ಏಕ ಚುನಾವಣೆಗೆ ರಾಷ್ಟ್ರಪತಿ ಬೆಂಬಲ

01:51 AM Jun 21, 2019 | Team Udayavani |

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ‘ಒಂದು ದೇಶ; ಒಂದು ಚುನಾವಣೆ’ ಉತ್ತಮ ಪರಿಕಲ್ಪನೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹೇಳಿದ್ದಾರೆ. ಸಂಸತ್‌ನ ಸೆಂಟ್ರಲ್ ಹಾಲ್ನಲ್ಲಿ ಗುರುವಾರ ಅವರು 17ನೇ ಲೋಕಸಭೆಯ ಮೊದಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು.

Advertisement

ಜತೆಗೆ 2024ರ ಒಳಗಾಗಿ ದೇಶದ ಅರ್ಥ ವ್ಯವಸ್ಥೆ ಯನ್ನು 5 ಲಕ್ಷಕೋಟಿ ಡಾಲರ್‌ಗೆ ಏರಿಸುವುದರ ಜತೆಗೆ ತ್ರಿವಳಿ ತಲಾಖ್‌, ರಾಷ್ಟ್ರೀಯ ಪೌರತ್ವ ಕಾಯ್ದೆ (ಎನ್‌ಆರ್‌ಸಿ) ಯನ್ನು ಆದ್ಯತೆಯಲ್ಲಿ ಜಾರಿ ಮಾಡುವುದು ಸರ್ಕಾರದ ಆದ್ಯತೆ ಎಂದು ಹೇಳಿದ್ದಾರೆ. 2014ರಲ್ಲಿ ಶುರ ುವಾದ ಅಭಿವೃದ್ಧಿ ಕಾರ್ಯ ಮುಂದುವರಿಸಲು ಜನ ಹಾಲಿ ಸರ್ಕಾರಕ್ಕೇ ಮತ ನೀಡಿದ್ದಾರೆ ಎಂದಿದ್ದಾರೆ.

ಪ್ರಸ್ತಾವನೆಗೆ ಸಹಮತ: ಲೋಕಸಭೆ, ವಿಧಾನಸಭೆ ಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದರ ಬಗ್ಗೆ ಅಧ್ಯಯನ ನಡೆಸಲು ಸರ್ವಪಕ್ಷಗಳ ಸಭೆಯನ್ನು ಬುಧವಾರ ಸರ್ಕಾರ ನಡೆಸಿತ್ತು. ಅದಕ್ಕೆ ಪೂರಕವಾಗಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ, ಏಕಕಾಲದಲ್ಲಿ ಚುನಾವಣೆ ನಡೆಸುವುದು ಇಂದಿನ ಅಗತ್ಯವಾಗಿದೆ ಎಂದಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಪದೇ ಪದೆ ಚುನಾವಣೆಗಳು ನಡೆಯು ವುದರಿಂದ ಅಭಿವೃದ್ಧಿ ಕೆಲಸಗಳಿಗೆ ತೊಂದರೆಯಾ ಗುತ್ತದೆ. ಹೀಗಾಗಿ ಸಂಸತ್‌ ಸದಸ್ಯರು ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಿ ಜಾರಿಯಾಗುವಂತೆ ಮಾಡು ವುದರ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿ ದ್ದಾರೆ. ಈ ವ್ಯವಸ್ಥೆ ಜಾರಿಯಾಗುವುದರಿಂದ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ನಿಲುವುಗಳಿಗೆ ಅನುಗುಣವಾಗಿ ದೇಶದ ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ತಮ್ಮ ಶಕ್ತಿ ವಿನಿಯೋಗ ಮಾಡಬಹುದಾಗಿದೆ ಎಂದಿದ್ದಾರೆ.

‘ಸಬ್‌ಕಾ ಸಾಥ್‌; ಸಬ್‌ಕಾ ವಿಕಾಸ್‌’ ಎಂಬ ಧ್ಯೇಯ ವಾಕ್ಯದ ಜತೆಗೆ ಈ ಸರ್ಕಾರ ನಡೆಯುತ್ತಿದೆ ಎಂದು ಹೇಳಿದ ರಾಷ್ಟ್ರಪತಿ, ಹಾಲಿ ಚುನಾವಣೆಯಲ್ಲಿ 61 ಕೋಟಿ ಮತದಾರರು ಹಕ್ಕು ಚಲಾವಣೆ ಮಾಡಿದ್ದಾರೆ. ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಮತ್ತು ಅಧಿಕಾರಿಗಳು ಶ್ರಮಿಸಿದ್ದಾರೆ ಎಂದು ಕೊಂಡಾಡಿದ್ದಾರೆ.

ಮಹಿಳಾ ಘನತೆಗೆ ಕುಂದು: ಕೇಂದ್ರ ಸರ್ಕಾರ ತ್ರಿವಳಿ ತಲಾಖ್‌ ಮತ್ತು ನಿಕಾಹ್‌ ಹಲಾಲಾ ವ್ಯವಸ್ಥೆಗೆ ಕೊನೆ ಹಾಡಲು ಬದ್ಧವಾಗಿದೆ. ಮಹಿಳೆಯರ ಸಮಾ ನತೆಗೆ ಇಂಥ ಪದ್ಧತಿಗಳು ತೊಡಕಾಗಿವೆ ಎಂದಿರುವ ರಾಷ್ಟ್ರಪತಿ, ಗೌರವಯುತವಾಗಿ ಮಹಿಳೆಯರು ಜೀವಿಸಬೇಕಾಗಿದ್ದರೆ, ಈ ಪದ್ಧತಿ ಕೊನೆಗಾಣುವ ಬಗ್ಗೆ ಎಲ್ಲರೂ ಕೈಜೋಡಿಸಬೇಕು ಎಂದಿದ್ದಾರೆ.

Advertisement

78 ಮಹಿಳೆಯರು ಸಂಸತ್‌ ಸದಸ್ಯರಾಗಿ ಆಯ್ಕೆ ಯಾಗಿದ್ದಾರೆ. ಲೋಕ ಸಭೆಯ ಇತಿಹಾಸದಲ್ಲಿಯೇ ಇದು ಮೊದಲು ಎಂದಿದ್ದಾರೆ ರಾಷ್ಟ್ರಪತಿ. ಮಹಿಳಾ ಸಬಲೀಕರಣ ಮಾತ್ರ ಸರ್ಕಾರದ ಆದ್ಯತೆಯಾಗಿರದೆ, ಅವರ ನೇತೃತ್ವದಲ್ಲಿಯೇ ದೇಶದ ಅಭಿವೃದ್ಧಿ ಕೆಲಸಗಳು ನಡೆಯಬೇಕೆನ್ನುವುದೇ ಮಹತ್ವಾಕಾಂಕ್ಷೆ ಯಾಗಿದೆ ಎಂದಿದ್ದಾರೆ.

ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯಿಂದಾಗಿ ವಿವಿಧ ಭಾಗಗಳಲ್ಲಿ ಹೆಣ್ಣು ಭ್ರೂಣಹತ್ಯೆ ಪ್ರಮಾಣ ಗಣನೀ ಯವಾಗಿ ತಗ್ಗಿದೆ. ಮಹಿಳೆಯರ ಮತ್ತು ಪುರುಷರ ನಡುವಿನ ಅನುಪಾತ ಗಣನೀಯವಾಗಿ ಸುಧಾರಿಸಿದೆ ಎಂದಿದ್ದಾರೆ.

ಗ್ರಾಮೀಣರೇ ಹೆಚ್ಚು: ಕೇಂದ್ರ ಸರ್ಕಾರ ಜಾರಿಗೊಳಿಸಿದ ಉಜ್ವಲ ಯೋಜನೆ, ‘ಮಿಷನ್‌ ಇಂದ್ರಧನುಸ್ಸು’, ಉಚಿತವಾಗಿ ವಿದ್ಯುತ್‌ ನೀಡುವ ‘ಸೌಭಾಗ್ಯ ಯೋಜನೆ’ಯಲ್ಲಿ ಲಾಭ ಪಡೆದವರು ಗ್ರಾಮೀಣ ಪ್ರದೇಶದ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ ಮಹಿಳೆಯರಿಗೇ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ರಾಷ್ಟ್ರಪತಿ ಹೇಳಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ 2 ಕೋಟಿ ಮನೆಗಳನ್ನು ನಿರ್ಮಿಸಲಾಗುತ್ತದೆ ಎಂದಿದ್ದಾರೆ.

ಎನ್‌ಆರ್‌ಸಿ ಆದ್ಯತೆಯಲ್ಲಿ ಜಾರಿ: ಅಸ್ಸಾಂನಲ್ಲಿ ಉಗ್ರವಾದದಿಂದ ನಲುಗಿರುವ ಪ್ರದೇಶಗಳಲ್ಲಿ ರಾಷ್ಟ್ರೀಯ ಪೌರತ್ವ ಕಾಯ್ದೆ (ಎನ್‌ಆರ್‌ಸಿ)ಯನ್ನು ಆದ್ಯತೆಯಲ್ಲಿ ಜಾರಿ ಮಾಡಲಾಗುತ್ತದೆ. ಸಾಂಸ್ಕೃತಿಕ, ಸಾಮಾಜಿಕ ಮತ್ತು ಭಾಷೆಯ ವಿಚಾರಗಳನ್ನು ಸಂರಕ್ಷಿಸಲು ಅನುವಾಗುವಂತೆ ಕಾಯ್ದೆಗೆ ಕೆಲ ತಿದ್ದುಪಡಿಗಳನ್ನೂ ಮಾಡಲಾಗುತ್ತದೆ. ಗಡಿ ಪ್ರದೇಶಗಳಲ್ಲಿ ಅಕ್ರಮ ಒಳನುಸುಳುವಿಕೆ ತಡೆಗಟ್ಟಲು ಭದ್ರತೆ, ಗಸ್ತು ಬಿಗಿಗೊಳಿಸಲಾಗುತ್ತದೆ ಎಂದಿದ್ದಾರೆ.

ವೇಗ ವೃದ್ಧಿಸಲಿದೆ: ಕಪ್ಪುಹಣದ ವಿರುದ್ಧ ಹಲವು ರೀತಿಯ ಹೋರಾಟಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ಹೇಳಿದ ರಾಷ್ಟ್ರಪತಿ, ಮುಂದಿನ ದಿನಗಳಲ್ಲಿ ಅದು ಮತ್ತಷ್ಟು ವೇಗ ಪಡೆಯಲಿದೆ ಎಂದಿದ್ದಾರೆ. ಎರಡು ವರ್ಷಗಳ ಅವಧಿಯಲ್ಲಿ 4.25 ಲಕ್ಷ ಕಂಪನಿಗಳ ನಿರ್ದೇಶಕರನ್ನು ಅನರ್ಹಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಸರ್ಜಿಕಲ್, ಬಾಲಕೋಟ್ನಿಂದ ಶಕ್ತಿ ಪ್ರದರ್ಶನ

ರಾಷ್ಟ್ರೀಯ ಭದ್ರತೆಯು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಸರ್ಜಿಕಲ್ ದಾಳಿ ಹಾಗೂ ಬಾಲಕೋಟ್ ವೈಮಾನಿಕ ದಾಳಿಗಳ ಮೂಲಕ ಭಾರತವು ತನ್ನ ಸಾಮರ್ಥ್ಯ ಹಾಗೂ ಶಕ್ತಿಯನ್ನು ಪ್ರದರ್ಶಿಸಿದ್ದು, ಭವಿಷ್ಯದಲ್ಲೂ ಭದ್ರತೆಗಾಗಿ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ ಎಂದು ರಾಷ್ಟ್ರಪತಿ ಕೋವಿಂದ್‌ ತಿಳಿಸಿದ್ದಾರೆ. ಸರ್ಕಾರವು ಸೇನೆಯ ಆಧುನೀಕರಣ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವತ್ತ ಹೆಜ್ಜೆಯಿಟ್ಟಿದೆ. ಸದ್ಯದಲ್ಲೇ ಭಾರತೀಯ ಸೇನೆಗೆ ಮೊದಲ ರಫೇಲ್ ಯುದ್ಧ ವಿಮಾನ ಹಾಗೂ ಅಪಾಚೆ ಹೆಲಿಕಾಪ್ಟರ್‌ ಸೇರ್ಪಡೆಯಾಗಲಿದೆ. ಜತೆಗೆ, ಆಧುನಿಕ ರೈಫ‌ಲ್ಗಳು, ಟ್ಯಾಂಕ್‌ಗಳು, ಯುದ್ಧ ವಿಮಾನಗಳನ್ನು ದೇಶೀಯವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲೂ ನಿಯಮಗಳನ್ನು ರೂಪಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next