Advertisement

ಅಧ್ಯಕ್ಷ ಮಿತ್ರರ ವಾಕ್ಸಮರ

03:13 AM May 13, 2019 | Team Udayavani |

ಬೆಂಗಳೂರು: ಈವರೆಗೆ ಕಾಂಗ್ರೆಸ್‌- ಜೆಡಿಎಸ್‌ ಪಕ್ಷಗಳ ಕೆಳ ಹಂತದ ನಾಯಕರಲ್ಲಿದ್ದ ವಾಕ್ಸಮರ ಈಗ “ಅಧ್ಯಕ್ಷರ ಮಟ್ಟ’ಕ್ಕೆ ಮುಟ್ಟಿದೆ. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌ ರವಿವಾರ ರಂಗ ಪ್ರವೇಶ ಮಾಡಿದ್ದು, ಇದಕ್ಕೆ ಕಾಂಗ್ರೆಸ್‌ನಿಂದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಅಹಿಂದ ಮಾಡಿದ್ದಕ್ಕಾಗಿ ಜೆಡಿಎಸ್‌ನಿಂದ ತನ್ನನ್ನು ಉಚ್ಚಾಟಿಸಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ ಬೆನ್ನಲ್ಲೇ, “ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಸೇರಿಸಿ ಮುಖ್ಯಮಂತ್ರಿಯಾಗುವಂತಹ ವಾತಾ ವರಣವನ್ನು ನಿರ್ಮಿಸಿದವರೇ ನಾವು’ ಎಂದು ವಿಶ್ವನಾಥ್‌ ಹೇಳಿದ್ದಾರೆ.

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಕೆಲವರು ಗೊಂದಲದ ಹೇಳಿಕೆ ನೀಡಿ ಚೇಲಾಗಿರಿ ಪ್ರದರ್ಶಿಸುತ್ತಿದ್ದಾರೆ.

ಮುಖ್ಯಮಂತ್ರಿಯಾದರೆ 2022ಕ್ಕೆ ಆಗಲಿ ಎಂದು ವಿಶ್ವನಾಥ್‌ ಕುಟುಕಿದರೆ, ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, “ಹೊಟ್ಟೆ ಕಿಚ್ಚಿನಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದು, ಅವರ ಮಾತಿಗೆ ಕಿಮ್ಮತ್ತು ನೀಡುವುದಿಲ್ಲ’ ಎಂದಿದ್ದಾರೆ.

ಇದಕ್ಕೆ ತಕ್ಕುದಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಒಂದು ಪಕ್ಷದ ಅಧ್ಯಕ್ಷರಾಗಿರುವ ವಿಶ್ವನಾಥ್‌ ಇಂಥ ಹೇಳಿಕೆ ನೀಡಬಾರದು. ಅವರು ಮೈತ್ರಿ ಧರ್ಮ ಪಾಲಿಸ ಬೇಕು ಎಂದು ಕುಟುಕಿದ್ದಾರೆ. ಈ ನಡುವೆ, ರಾಜ್ಯಕ್ಕೆ ಭೇಟಿ ನೀಡಿರುವ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಕೆಲವು ಶಾಸಕರು ಸಿದ್ದ ರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂದು ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅವರ ಅಭಿಪ್ರಾಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿ ವಿವಾದದ ತೀವ್ರತೆ ಕಡಿಮೆಗೊಳಿಸಲು ಯತ್ನಿಸಿದ್ದಾರೆ. ಜತೆಗೆ ಸಣ್ಣಪುಟ್ಟ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಮೈತ್ರಿ ಸರಕಾರ ಐದು ವರ್ಷ ಸುಭದ್ರವಾಗಿ ಆಡಳಿತ ನಡೆಸಲಿದೆ ಎಂದು ಪುನರುಚ್ಚರಿಸಿದ್ದಾರೆ.

Advertisement

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮತ ದಾನ ಪೂರ್ಣಗೊಂಡ ಬಳಿಕ ಮಂಡ್ಯ, ಮೈಸೂರು- ಕೊಡಗು, ತುಮಕೂರು, ಕೋಲಾರ ಸಹಿತ ಹಳೇ ಮೈಸೂರು ಭಾಗದ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮತಗಳು ಪರಸ್ಪರ ಮೈತ್ರಿ ಅಭ್ಯರ್ಥಿಗೆ ಚಲಾವಣೆಯಾಗಿಲ್ಲ ಎಂಬ ವಿಚಾರ ವಾಗಿ ಉಭಯ ಪಕ್ಷಗಳ ನಾಯಕರ ಅಸಮಾ ಧಾನ, ಆಕ್ರೋಶ ಆರೋಪಗಳಿಗೆ ಸೀಮಿತವಾಗಿತ್ತು. ಆದರೆ ಸಿದ್ದರಾಮಯ್ಯ, ನಾನು ಜೆಡಿಎಸ್‌ ಬಿಡಲಿಲ್ಲ, ಅಹಿಂದ ಮಾಡಿದ್ದಕ್ಕೆ ಎಚ್‌.ಡಿ. ದೇವೇಗೌಡರು ನನ್ನನ್ನು ಉಚ್ಚಾಟನೆ ಮಾಡಿದರು ಎಂಬುದಾಗಿ ಶನಿವಾರ ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸೃಷ್ಟಿಸಿರುವ ತಲ್ಲಣ ರವಿವಾರ ಇನ್ನಷ್ಟು ತೀವ್ರ ಸ್ವರೂಪ ಪಡೆಯಲು ಕಾರಣವಾಗಿತ್ತು.

ಸಿದ್ದರಾಮಯ್ಯನವರು ತಮ್ಮ ವರ್ಚಸ್ಸು, ವ್ಯಕ್ತಿತ್ವ ತೋರಿಸಿಕೊಳ್ಳುವ ಭರದಲ್ಲಿ ಜೆಡಿಎಸ್‌ಗಾಗಿ ದುಡಿದ ತನ್ನನ್ನು ದೇವೇಗೌಡರೇ ಹೊರ ಹಾಕಿದರು ಎಂಬ ಹೇಳಿಕೆ ಜೆಡಿಎಸ್‌ಗೆ ಮರ್ಮಾಘಾತ ನೀಡಿದಂತಾಗಿತ್ತು. ಈ ಹೇಳಿಕೆ ಪಕ್ಷದ ಮೇಲೆ ಉಂಟು ಮಾಡುವ ಅಪಾಯದ ತೀವ್ರತೆ ತಗ್ಗಿಸಲು ರಂಗ ಪ್ರವೇಶಿಸಿದಂತೆ ವಿಶ್ವನಾಥ್‌ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಇದು ಸೂಕ್ತ ಸಮಯವಲ್ಲ. ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದ ಮೇಲೆ ಅವರು ಮುಖ್ಯಮಂತ್ರಿ ಹೇಗೆ ಆಗುತ್ತಾರೆ ಎನ್ನುವ ಮೂಲಕ ವಾಸ್ತವ ಅರಿತು ಮಾತನಾಡಬೇಕು ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.

ಕಾದು ನೋಡುವ ತಂತ್ರ
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಧ್ಯಕ್ಷರ ಮಟ್ಟದ ಮಾತಿನ ವಾಕ್ಸಮರದ ಮೇಲೆ ಬಿಜೆಪಿ ನಿಗಾ ಇರಿಸಿದೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಪರಸ್ಪರ ಕಚ್ಚಾಡಿಕೊಂಡು ಸರಕಾರ ಪತನ ಗೊಳ್ಳಲಿದೆ ಎಂದು ಈ ಹಿಂದೆಯೇ ಬಿಜೆಪಿ ನಾಯಕರು ಹೇಳಿದ್ದು, ಪ್ರಸ್ತುತ ಅದೇ ದಾರಿಯಲ್ಲಿ ಸಾಗುತ್ತಿದೆ. ಪ್ರಸ್ತುತ ನಡೆಯುತ್ತಿರುವ ವಾಕ್ಸಮರ ಇನ್ನಷ್ಟು ತೀವ್ರಗೊಂಡರೆ ಅದು ಸರಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಮೇ 23ರಂದು ಫ‌ಲಿತಾಂಶ ಹೊರಬೀಳಲಿದ್ದು, ಅನಂತರ ಸಾಕಷ್ಟು ರಾಜಕೀಯ ಬದಲಾವಣೆ ನಡೆಯಲಿದೆ ಎಂದು ಬಿಜೆಪಿ ಭಾವಿಸಿದೆ.

ತೇಪೆಗೆ ದಿನೇಶ್‌ ಯತ್ನ
ಮೈತ್ರಿ ಸರಕಾರದ ಪ್ರಮುಖರಾದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಅವರೇ ಮಾತಿನ ಸಮರಕ್ಕಿಳಿದಿರುವುದು ಅಪಾಯಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಮನಗಂಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ತೇಪೆ ಹಚ್ಚಲು ಯತ್ನಿಸಿದ್ದಾರೆ.

ವಾಕ್ಸಮರ ಜೋರಾದರೆ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮಾತ್ರವಲ್ಲದೆ ಮೈತ್ರಿ ಸರಕಾರದ ವರ್ಚಸ್ಸಿಗೂ ಧಕ್ಕೆ ಉಂಟಾಗುವ ಸೂಕ್ಷ್ಮ ಅರಿತ ದಿನೇಶ್‌ ಅವರು ಮೈತ್ರಿ ಧರ್ಮವನ್ನು ಉಭಯ ಪಕ್ಷದವರೂ ಪಾಲಿಸೋಣ ಎನ್ನುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸುವ ಪ್ರಯತ್ನ ನಡೆಸಿದ್ದಾರೆ.

ಕಾಂಗ್ರೆಸ್‌ ಸರಕಾರದ ಐದು ವರ್ಷಗಳ ಆಡಳಿತದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ವಿಶ್ವನಾಥ್‌ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರ ಹೇಳಿಕೆ ಸಮಂಜಸವಲ್ಲ. ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದಲ್ಲಿರುವವರು ಯೋಚಿಸಿ ಮಾತನಾಡಬೇಕು. ಎಲ್ಲರೂ ಮೈತ್ರಿ ಧರ್ಮ ಪಾಲನೆ ಮಾಡಬೇಕು ಎಂದು ಪುನರುಚ್ಚರಿಸಿದ್ದಾರೆ.

ಕುಮಾರಸ್ವಾಮಿ ಮೌನ
ಕಾಂಗ್ರೆಸ್‌-ಜೆಡಿಎಸ್‌ ನಡುವೆ ವಾಕ್ಸಮರ ನಡೆಯುತ್ತಿದ್ದರೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ತಮಗೇನೂ ಸಂಬಂಧ ವಿಲ್ಲ ವೆಂಬಂತೆ ಇದ್ದಾರೆ. ಕೊಡಗಿನ ರೆಸಾರ್ಟ್‌ನಲ್ಲಿ ಎರಡು ದಿನ ವಿಶ್ರಾಂತಿ ಪಡೆದ ಅವರು ರವಿವಾರ ಮದ್ದೂರಿನಲ್ಲಿ ತಮ್ಮ ಖಾಸಗಿ ಆಪ್ತ ಕಾರ್ಯದರ್ಶಿ ರಘು ಅವರ ಬೀಗರ ಔತಣದಲ್ಲಿ ಪಾಲ್ಗೊಂಡಿದ್ದರು. ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ ಅವರು ಮಾಧ್ಯಮಗಳೊಂದಿಗೆ ಕಾಯ್ದು ಕೊಂಡಿರುವ ಅಂತರವನ್ನು ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next