Advertisement

ನಾಳೆ ರಾಷ್ಟ್ರಪತಿ ಚುನಾವಣೆ: ಕೋಟ್ಯಧಿಪತಿಗಳಿಂದ ರಾಷ್ಟ್ರಪತಿ ಆಯ್ಕೆ

04:10 AM Jul 16, 2017 | Team Udayavani |

ನವದೆಹಲಿ: ಸ್ವತಂತ್ರ ಭಾರತದ 14ನೇ ರಾಷ್ಟ್ರಪತಿ ಆಯ್ಕೆಗೆ ವೇದಿಕೆ ಸಜ್ಜಾಗಿದೆ. ಸೋಮವಾರ (ಜು.17) ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ನವದೆಹಲಿಯ ಸಂಸತ್‌ ಭವನ, ದೇಶದ 28 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆ ಕಟ್ಟಡಗಳೇ ಮತದಾನ ಕೇಂದ್ರಗಳಾಗಿವೆ. 

Advertisement

ಇಲ್ಲಿ ಶಾಸಕರು, ಸಂಸದರು ಸೇರಿದಂತೆ ಒಟ್ಟು 4,896 ಮಂದಿ ಹಕ್ಕು ಚಲಾಯಿಸಲಿದ್ದಾರೆ. ರಾಷ್ಟ್ರಪತಿ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಅಸೋಸಿಯೇಷನ್‌ ಆಫ್ ಡೆಮಾಕ್ರಟಿಕ್‌ ರಿಫಾಮ್ಸ್‌ì (ಎಡಿಆರ್‌) ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌(ಎನ್‌ಇಡಬ್ಲ್ಯು) ಸಂಸ್ಥೆಗಳು ಮತದಾರರ ಕುರಿತು ಆಳವಾದ ಅಧ್ಯಯನ ನಡೆಸಿವೆ. ಅಧ್ಯಯನದಿಂದ ದೊರೆತ ಅಂಕಿ ಅಂಶಗಳ ಪ್ರಕಾರ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಥಮ ಪ್ರಜೆ ಯಾರಾಗಲಿದ್ದಾರೆ ಎಂಬುದನ್ನು ಕ್ರಿಮಿನಲ್‌ಗ‌ಳು ಹಾಗೂ ಕೋಟ್ಯಾಧಿಪತಿಗಳು ನಿರ್ಧರಿಸುತ್ತಾರೆ!

ಹೌದು. ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದ ಹಕ್ಕು ಚಲಾಯಿಸಲಿರುವ ದೇಶದ 4,896 ಶಾಸಕರು ಹಾಗೂ ಸಂಸದರ ಪೈಕಿ ಶೇ.33 ಮಂದಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗಳಿವೆ. ಶೇ.71 ಜನಪ್ರತಿನಿಧಿಗಳು ಕೋಟ್ಯಧಿಪತಿಗಳಾಗಿದ್ದಾರೆ. ಹಿಂದಿನ ಲೋಕಸಭೆ, ವಿಧಾನಸಭೆ ಚುನಾವಣೆಗಳ ವೇಳೆ ಜನಪ್ರತಿನಿಧಿಗಳು ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಿಂದ ಈ ಎಲ್ಲ ಮಾಹಿತಿ ಲಭ್ಯವಾಗಿವೆ.

ಶೇ.33 ಕ್ರಿಮಿನಲ್‌ ಮತದಾರರು!
ಒಟ್ಟು ಮತದಾರರ ಪೈಕಿ 1,581 ಅಂದರೆ ಶೇ.33 ಮಂದಿ ಮೇಲೆ ಕ್ರಿಮಿನಲ್‌ ಕೇಸುಗಳಿವೆ. ಈ ಪೈಕಿ 993 ಮಂದಿ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ದೇಶದ 184 (ಶೇ.34) ಸಂಸದರು ಮತ್ತು 1,353 ಶಾಸಕರು (ಶೇ.33), 231 ರಾಜ್ಯಸಭೆ ಸದಸ್ಯರ ಪೈಕಿ 44 ಮಂದಿ (ಶೇ.19) ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದಾರೆ.

ಶೇ.71 ಕೋಟ್ಯಧಿಪತಿಗಳು!
ಲೋಕಸಭೆ ಸಂಸದರ ಪೈಕಿ 445 (ಶೇ.82) ಮಂದಿ ಕೋಟಿಗೆ ಬಾಳುತ್ತಾರೆ. 4078 ಶಾಸಕರ ಪೈಕಿ 2721 (ಶೇ.68) ಕೋಟ್ಯಧಿಪತಿಗಳಿದ್ದು, ರಾಜ್ಯಸಭೆಯ 194 ಸದಸ್ಯರು (ಶೇ.84) ಕೋಟ್ಯಂತರ ರೂ. ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ. ಅದರಲ್ಲೂ ಕರ್ನಾಟಕ ಅತಿ ಹೆಚ್ಚು ಸಂಖ್ಯೆಯ ಕೋಟ್ಯಾಧೀಶ ಮತದಾರರನ್ನು ಹೊಂದಿದೆ.

Advertisement

ಮಹಿಳಾ ಮತದಾರರು
4,852 ಮತದಾರರ ಪೈಕಿ ಮಹಿಳೆಯರ ಸಂಖ್ಯೆ ಕೇವಲ 451 (ಶೇ.9). ಲೋಕಸಭೆಯಲ್ಲಿ 65 ಸಂಸದೆಯರು, ದೇಶಾದ್ಯಂತ 363 ಶಾಸಕಿಯರಿದ್ದು, ರಾಜ್ಯಸಭೆಯಲ್ಲಿ 23 ಮಹಿಳೆಯರಿದ್ದಾರೆ. ಪಶ್ಚಿಮ ಬಂಗಾಳ ಅತಿ ಹೆಚ್ಚು ಶಾಸಕಿಯರನ್ನು (41) ಹೊಂದಿದೆ.
ಒಟ್ಟು ಮತದಾರರು- 4,896
ಸಂಸದರು- 776
ಶಾಸಕರು- 4120
ಕ್ರಿಮಿನಲ್‌ ಹಿನ್ನೆಲೆಯವರು- 1,581
ಕೋಟ್ಯಾಧಿಪತಿಗಳು- 3360

ರಾಜ್ಯದಲ್ಲೇ ಮತ ಚಲಾಯಿಸಲು ದೀದಿ ಸೂಚನೆ; ಸಂಸದರಿಗೆ ಅತೃಪ್ತಿ
ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನ ಆಗಬಹುದು ಎಂಬ ಭೀತಿಯಿಂದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ತನ್ನೆಲ್ಲ ಸಂಸದರಿಗೂ ರಾಜ್ಯದಲ್ಲೇ ಮತ ಚಲಾಯಿಸುವಂತೆ ಸೂಚಿಸಿದ್ದಾರೆ. ಜು.1ರಂದೇ ಈ ಕುರಿತು ಸಂಸದರಿಗೆ ಎಸ್ಸೆಮ್ಮೆಸ್‌ ಸಂದೇಶ ರವಾನಿಸಿರುವ ದೀದಿ, “ಸಂಸದರೆಲ್ಲ ಕೋಲ್ಕತ್ತಾದಲ್ಲೇ ಹಕ್ಕು ಚಲಾಯಿಸಬೇಕು. ಚುನಾವಣಾ ಆಯೋಗ ಕಳುಹಿಸಿರುವ ಅರ್ಜಿಯಲ್ಲಿ ಮತ ಚಲಾಯಿಸುವ ಸ್ಥಳವನ್ನು ಕೋಲ್ಕತ್ತಾ ಎಂದೇ ಉಲ್ಲೇಖೀಸಿ ಮಣಿಕ್‌ ದಾ(ಮಮತಾ ಅವರ ಕಾರ್ಯದರ್ಶಿ ಮತ್ತು ನಂಬಿಕಸ್ಥ ಬಂಟ) ಅವರಿಗೆ ಕಳುಹಿಸಿಕೊಡಬೇಕು’ ಎಂದು ಹೇಳಿದ್ದರು. ಅದರಂತೆ, ಸುಗತಾ ಬೋಸ್‌, ಕೆ.ಡಿ.ಸಿಂಗ್‌ ಸೇರಿದಂತೆ ಮೂವರು ಸಂಸದರನ್ನು ಹೊರತುಪಡಿಸಿ ಉಳಿದ ಎಲ್ಲರೂ ಕೋಲ್ಕತ್ತಾದಲ್ಲೇ ಮತ ಚಲಾಯಿಸಲಿದ್ದಾರೆ. ಈ ಕುರಿತು ಮಾತನಾಡಿರುವ ಹೆಸರು ಹೇಳಲಿಚ್ಛಿಸದ ಸಂಸದರೊಬ್ಬರು, “ನಾವು ತುಂಬಿದ ಅರ್ಜಿಗಳನ್ನು ತಮ್ಮ ಕಾರ್ಯಾಲಯಕ್ಕೆ ತರಿಸಿಕೊಂಡು, ಅಲ್ಲಿಂದ ಆಯೋಗಕ್ಕೆ ಕಳುಹಿಸಿಕೊಡಲಾಗಿದೆ. ಮಮತಾ ಅವರಿಗೆ ನಮ್ಮಲ್ಲಿ ನಂಬಿಕೆ ಇಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ’ ಎಂದಿದ್ದಾರೆ. ಇನ್ನೊಬ್ಬರು, “ಮಮತಾ ಅವರು ನಾವು ಮತ ಚಲಾಯಿಸಿದ ಬಳಿಕ ಮತಪತ್ರಗಳನ್ನೂ ತಮಗೆ ತೋರಿಸಬೇಕು ಎಂದು ಹೇಳಿದರೂ ಆಶ್ಚರ್ಯವಿಲ್ಲ,’ ಎನ್ನುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next