ಹೊಸದಿಲ್ಲಿ : ಎನ್‌ಡಿಎ ಅಭ್ಯರ್ಥಿಯಾಗಿ ರಾಮನಾಥ್ ಕೋವಿಂದ್ ಮತ್ತು ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಮೀರಾ ಕುಮಾರ್ ಅವರು ಕಣದಲ್ಲಿರುವ ರಾಷ್ಟ್ರಪತಿ ಚುನಾವಣೆ ಇಂದು ಸೋಮವಾರ ಮುಗಿದಿದ್ದು ಇದೇ ಜು.20ರ ಗುರುವಾರದಂದು ಫಲಿತಾಂಶ ಹೊರಬೀಳಲಿದೆ.
ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ “ಎಲ್ಲ ಟಿಎಂಸಿ ಶಾಸಕರು ಜಂಟಿ ವಿಪಕ್ಷ ಅಭ್ಯರ್ಥಿ ಮೀರಾ ಕುಮಾರ್ ಅವರಿಗೆ ಮತ ಹಾಕುವ ಮೂಲಕ ದೇಶದಲ್ಲಿ ನಡೆಯುತ್ತಿರುವ ಎಲ್ಲ ಅಹಿತಕರ ವಿದ್ಯಮಾನಗಳಿಗೆ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ’ ಎಂದು ಹೇಳಿದರು.
”ಮೀರಾ ಕುಮಾರ್ ಅವರಿಗೆ ಪಶ್ಚಿಮ ಬಂಗಾಲದಿಂದ ಗರಿಷ್ಠ ಮತಗಳು ಸಿಗಲಿವೆ; ಟಿಎಂಸಿಯ ಎಲ್ಲ ಸಂಸದರು, ಶಾಸಕರು ಅವರಿಗೇ ಮತ ಹಾಕಿದ್ದಾರೆ” ಎಂದು ಮಮತಾ ಹೇಳಿದರು.
ಇದೇ ವೇಳೆ ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಅವರು ಮಾತನಾಡಿ, “ಎನ್‌ಸಿಪಿ ಸಂಸದರು ಮತ್ತು ಶಾಸಕರು ಎನ್‌ಡಿಎ ಅಭ್ಯರ್ಥಿ ಪರವಾಗಿ ಅಡ್ಡ ಮತದಾನ ಮಾಡಿದ್ದಾರೆ ಎಂಬ ವದಂತಿ ಸುಳ್ಳು; ನಾವೆಲ್ಲರೂ ಮೀರಾ ಕುಮಾರ್ ಅವರಿಗೇ ಮತ ಹಾಕಿದ್ದೇವೆ’ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು “ಎನ್‌ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ನಿರಾಯಾಸವಾಗಿ ಗೆಲವು ಸಾಧಿಸುವರು” ಎಂದು ವಿಶ್ವಾಸದಿಂದ ಹೇಳಿದ್ದಾರೆ.
”ಸಿಕ್ಕಿಂ ವಿಧಾನಸಭೆಯ 32 ಮಂದಿ ಶಾಸಕರ ಪೈಕಿ 30 ಮಂದಿ ಶಾಸಕರು ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ” ಎಂದು ನಿರ್ವಚನಾಧಿಕಾರಿ ಎಲ್ ಎಂ ಪ್ರಧಾನ್ ಹೇಳಿದ್ದಾರೆ. ಇಬ್ಬರು ಶಾಸಕರು ಅನಿವಾರ್ಯ ಕಾರಣಗಳಿಂದ ಮತದಾನ ಮಾಡಿಲ್ಲ ಎಂದವರು ತಿಳಿಸಿದ್ದಾರೆ.