Advertisement

ಹಿಂದಿನ ತುರುಸಿನ ರಾಷ್ಟ್ರಪತಿ ಚುನಾವಣೆ

12:55 AM Jun 11, 2022 | Team Udayavani |

ಬಹು ನಿರೀಕ್ಷಿತ ರಾಷ್ಟ್ರಪತಿ ಚುನಾವಣೆ ದಿನಾಂಕ ಪ್ರಕಟವಾಗಿದೆ. ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ಖಚಿತವಾಗಿಲ್ಲ. ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳು ಸಂಖ್ಯಾ ಬಲ ಇಲ್ಲದೇ ಇದ್ದರೂ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಒಗ್ಗಟ್ಟಿನ ಅಭ್ಯರ್ಥಿ ಕಣಕ್ಕೆ ಇಳಿಸಲು ನಿರ್ಧಾರ ಮಾಡಿವೆ ಮತ್ತು ಚರ್ಚೆಗಳನ್ನು ಆರಂಭಿಸಿವೆ. ಆದರೆ ಹಿಂದಿನ ರಾಷ್ಟ್ರಪತಿ ಚುನಾವಣೆಯಲ್ಲಿ ಯಾವ ರೀತಿ ನಡೆಯಿತು ಎಂಬುದರ ಹಿನ್ನೋಟದತ್ತ ಒಂದು ಗಮನ.

Advertisement

1952ರ ಮೊದಲ ಚುನಾವಣೆ
ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕದ ಮೊದಲ ರಾಷ್ಟ್ರಪತಿ ಚುನಾವಣೆಯಲ್ಲಿ ಡಾ| ಬಾಬು ರಾಜೇಂದ್ರ ಪ್ರಸಾದ್‌ ಆಯ್ಕೆಯಾಗಿದ್ದರು. ಅವರಿಗೆ 5,07,400 ಮತಗಳು ಪ್ರಾಪ್ತವಾಗಿದ್ದವು. ಅವಿರೋಧವಾಗಿ ಆಯ್ಕೆಯಾಗಬಾರದು ಎಂಬ ಕಾರಣಕ್ಕಾಗಿ ಸ್ಪರ್ಧಿಸಿದ್ದ ಚೌಧರಿ ಹರಿರಾಮ್‌ ಅವರಿಗೆ 1,954 ಮತಗಳು ದೊರಕಿದ್ದವು. ಎಡಪಕ್ಷಗಳ ವತಿಯಿಂದ ಸಂವಿಧಾನ ರಚನೆ ಸಮಿತಿಯ ಸದಸ್ಯರಾಗಿದ್ದ ಕೆ.ಟಿ.ಶಾ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ಅವರಿಗೆ 92,827 ಮತಗಳು ದೊರಕಿದ್ದವು.

1957ರಲ್ಲಿ ಮತ್ತೆ ಬಾಬು ಆಯ್ಕೆ
ಎರಡನೇ ಚುನಾವಣೆಯಲ್ಲಿ ಕೇಂದ್ರ ಸರಕಾರ ಡಾ| ಬಾಬು ರಾಜೇಂದ್ರ ಪ್ರಸಾದ್‌ ಅವರನ್ನೇ ಕಣಕ್ಕೆ ಇಳಿಸಿತ್ತು. ಅವರಿಗೆ 4,59,698 ಮತಗಳು ಪ್ರಾಪ್ತಿಯಾಗಿದ್ದವು. ಪ್ರತಿಸ್ಪರ್ಧಿಯಾಗಿದ್ದ ನಾಗೇಂದ್ರ ನಾರಾಯಣ ದಾಸ್‌ ಅವರಿಗೆ 4 ಸಾವಿರ ಮತಗಳು ಮತ್ತು ಚೌಧರಿ ಹರಿರಾಮ್‌ ಅವರಿಗೆ 2,672 ಮತಗಳು ಸಿಕ್ಕಿದ್ದವು.

1962ರಲ್ಲಿ ಏನಾಯಿತು
ಅಂದಿನ ಕಾಂಗ್ರೆಸ್‌ ಸರಕಾರ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಅವರನ್ನು ಕಣಕ್ಕೆ ಇಳಿಸಿತ್ತು. ಆ ಸಂದರ್ಭದಲ್ಲಿ ಅವರು ಉಪರಾಷ್ಟ್ರಪತಿಯಾಗಿದ್ದರು. ರಾಧಾಕೃಷ್ಣನ್‌ ಅವರಿಗೆ 5,53,067 ಮತಗಳು ಪ್ರಾಪ್ತಿಯಾಗಿದ್ದವು. ಪ್ರತಿಸ್ಪರ್ಧಿಯಾಗಿದ್ದ ಚೌಧರಿ ಹರಿರಾಮ್‌ ಅವರಿಗೆ 6,341, ಯಮುನಾ ಪ್ರಸಾದ್‌ ತ್ರಿಸೂಲಿಯಾ ಅವರಿಗೆ 3,537 ಮತಗಳು ದೊರಕಿದ್ದವು.

1967ರ ರಾಷ್ಟ್ರಪತಿ ಚುನಾವಣೆ
ಕಾಂಗ್ರೆಸ್‌ ಅಭ್ಯರ್ಥಿಯಾಗಿ ಉಪ ರಾಷ್ಟ್ರಪತಿಯಾಗಿದ್ದ ಜಾಕಿರ್‌ ಹುಸೇನ್‌ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ಅವರಿಗೆ ಪ್ರತಿಸ್ಪರ್ಧಿಯಾಗಿದ್ದ ಕೋಟಾ ಸುಬ್ಬ ರಾವ್‌ ವಿರುದ್ಧ 4,71,244 ಮತಗಳು ಸಿಕ್ಕಿದ್ದವು.
ಸುಬ್ಬ ರಾವ್‌ ಅವರು ಆ ಅವಧಿಯಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

Advertisement

1969ರಲ್ಲಿ ರಾಷ್ಟ್ರಪತಿ
ಜಾಕಿರ್‌ ಹುಸೇನ್‌ ನಿಧನ
ರಾಷ್ಟ್ರಪತಿಯಾಗಿದ್ದ ಜಾಕಿರ್‌ ಹುಸೇನ್‌ ನಿಧನ ಹೊಂದಿದ ಕಾರಣ ಆ ಹುದ್ದೆಗೆ ಚುನಾವಣೆ ನಡೆಸುವ ಸ್ಥಿತಿ ಉಂಟಾಗಿತ್ತು. ಸಂವಿಧಾನದ 65 (1)ನೇ ವಿಧಿಯ ಪ್ರಕಾರ ಇಂಥ ಅಪರೂಪದ ಪ್ರಕರಣಗಳಲ್ಲಿ ಉಪ ರಾಷ್ಟ್ರಪತಿ ಯವರನ್ನು ಹಂಗಾಮಿ ರಾಷ್ಟ್ರಪತಿಯನ್ನಾಗಿ ನೇಮಿಸಲಾಗಿತ್ತು. ಅದರಂತೆ ಆಗ ಉಪರಾಷ್ಟ್ರಪತಿಯಾಗಿದ್ದ ವರಾಹ ವೆಂಕಟಗಿರಿ ಹಂಗಾಮಿ ರಾಷ್ಟ್ರಪತಿಯಾಗಿದ್ದರು. ಆದರೆ ಜುಲೈ 1969ರಲ್ಲಿ ಉಪರಾಷ್ಟ್ರಪತಿ ಮತ್ತು ಹಂಗಾಮಿ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್‌ನ ಕೆಲವು ಹಿರಿಯ ಮುಖಂಡರು “ಸಿಂಡಿಕೇಟ್‌’ ಎಂಬ ಪ್ರತ್ಯೇಕ ಗುಂಪಿನ ಜತೆಗೆ ಗುರುತಿಸಿಕೊಂಡಿದ್ದರು. ಆ ಭಿನ್ನಮತೀಯರ ಗುಂಪು ಒಂದು ಹಂತಕ್ಕೆ ಪ್ರವರ್ಧಮಾನಕ್ಕೆ ಬಂದಾಗ ನೀಲಂ ಸಂಜೀವ ರೆಡ್ಡಿ ಅವರನ್ನು ರಾಷ್ಟ್ರಪತಿ ಹುದ್ದೆಗೆ ಕಣಕ್ಕೆ ಇಳಿಸಲಾಯಿತು. ಅದಕ್ಕೆ ತಿರುಗೇಟು ಎಂಬಂತೆ ಇಂದಿರಾ ಗಾಂಧಿಯವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಗಿರಿ ಅವರಿಗೆ ಬೆಂಬಲ ನೀಡಿದ್ದರು. ಇಂದಿರಾ ಅವರು ಕಾಂಗ್ರೆಸ್‌ ಶಾಸಕರನ್ನು ಮತ್ತು ಸಂಸದರನ್ನು ಭೇಟಿಯಾಗಿ ಆತ್ಮಸಾಕ್ಷಿಯ ಮತವನ್ನು ಚಲಾಯಿಸುವಂತೆ ಮನವಿ ಮಾಡಿದ್ದರು. ಆ ಚುನಾವಣೆಯಲ್ಲಿ ವೆಂಕಟ ಗಿರಿಯವರು 4,01,515 ಮತಗಳನ್ನು ಪಡೆದು ಗೆದ್ದಿದ್ದರು. ನೀಲಂ ಸಂಜೀವ ರೆಡ್ಡಿಯವರಿಗೆ 3,13,548 ಮತಗಳು ಸಿಕ್ಕಿದ್ದವು. ಈ ಘಟನೆಯ ಅನಂತರ ಕಾಂಗ್ರೆಸ್‌ ಇಬ್ಭಾಗವಾಗಿತ್ತು. ಆಗ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಸಿದ್ದವನಹಳ್ಳಿ ನಿಜಲಿಂಗಪ್ಪ ಇಂದಿರಾ ಗಾಂಧಿಯವರನ್ನು ಪಕ್ಷದಿಂದ ಉಚ್ಛಾಟಿಸಿದ್ದರು.

12 ಮಂದಿ ಸ್ಪರ್ಧಿಗಳು
ರಾಷ್ಟ್ರಪತಿಯಾಗಬೇಕು ಎಂದು ಹುರಿಯಾಳುಗಳಾಗಿ ಸ್ವತಂತ್ರ ಪಾರ್ಟಿ ಮತ್ತು ಜನಸಂಘದ ಸಂಯುಕ್ತ ಅಭ್ಯರ್ಥಿಯಾಗಿ ಸಿ.ಡಿ.ದೇಶ್‌ಮುಖ್‌ ಸೇರಿದಂತೆ 12 ಮಂದಿ ಸ್ಪರ್ಧಿಸಿದ್ದರು. ಇದರಿಂದಾಗಿ ಹುದ್ದೆಯ ಗಂಭೀರತೆ ಕಾಪಾಡುವ ನಿಟ್ಟಿನಲ್ಲಿ ಸ್ಪರ್ಧಿಸಲು ಕಠಿನ ನಿಯಮಗಳನ್ನು ಜಾರಿ ಮಾಡಲಾಯಿತು.

1974ರ ಹೋರಾಟ
ಫಕ್ರುದ್ದೀನ್‌ ಅಲಿ ಅಹ್ಮದ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ರೆವೊಲ್ಯೂಷನರಿ ಸೋಶಿಯಲಿಸ್ಟ್ ಪಾರ್ಟಿಯ ಮುಖಂಡ ತ್ರಿದಿಪ್‌ ಚೌಧರಿ ವಿಪಕ್ಷಗಳ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಕಾಂಗ್ರೆಸ್‌ ಅಭ್ಯರ್ಥಿಗೆ 7,65,587 ಮತಗಳುಪ್ರಾಪ್ತಿಯಾದರೆ, ಚೌಧರಿ ಅವರಿಗೆ 1,89,196 ಮತಗಳು ಸಿಕ್ಕಿದ್ದವು.

1977ರಲ್ಲಿ ರಾಷ್ಟ್ರಪತಿ
ಫಕ್ರುದ್ದೀನ್‌ ಅಲಿ ಅಹ್ಮದ್‌ ನಿಧನ
ರಾಷ್ಟ್ರಪತಿಯಾಗಿದ್ದ ಫಕ್ರುದ್ದೀನ್‌ ಅಲಿ ಅಹ್ಮದ್‌ ಅವರು ನಿಧನ ಹೊಂದಿದರು. ಹೀಗಾಗಿ ಉಪರಾಷ್ಟ್ರಪತಿಯಾಗಿದ್ದ ಬಿ.ಡಿ. ಜತ್ತಿ ಅವರು ಹಂಗಾಮಿ ರಾಷ್ಟ್ರಪತಿಯಾದರು. ಅನಂತರ ನಡೆದ ಚುನಾವಣೆಯಲ್ಲಿ 37 ಮಂದಿ ಸ್ಪರ್ಧಿಗಳು ಕಣದಲ್ಲಿದ್ದರು. ನಾಮಪತ್ರ ಪರಿಶೀಲನೆ ವೇಳೆ ಅವುಗಳನ್ನು ಕ್ರಮಬದ್ಧವಾಗಿಲ್ಲ ಎಂಬ ಕಾರಣಕ್ಕಾಗಿ 36 ತಿರಸ್ಕೃತಗೊಂಡವು. ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ನೀಲಂ ಸಂಜೀವ ರೆಡ್ಡಿ ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾದರು.

1982ರ ಚುನಾವಣೆ
ಗ್ಯಾನಿ ಜೈಲ್‌ ಸಿಂಗ್‌ ಅವರು ಕಾಂಗ್ರೆಸ್‌ನ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಅವರಿಗೆ 7,54,113 ಮತಗಳು ಪ್ರಾಪ್ತಿಯಾದರೆ, ಒಂಬತ್ತು ವಿಪಕ್ಷಗಳ ಒಕ್ಕೂಟದ ಪ್ರತಿಸ್ಪರ್ಧಿಯಾಗಿದ್ದ ಎಚ್‌.ಆರ್‌. ಖನ್ನಾ ಅವರಿಗೆ 2,82, 685 ಮತಗಳು ಪ್ರಾಪ್ತಿಯಾಗಿದ್ದವು. ಸುಪ್ರೀಂ ಕೋರ್ಟ್‌ ನ ನ್ಯಾಯಮೂರ್ತಿಯಾಗಿದ್ದ ಅವರು 1977ರಲ್ಲಿ ನ್ಯಾ.ಎಂ.ಎಚ್‌.ಬೇಗ್‌ ಅವರನ್ನು ಮುಖ್ಯ ನ್ಯಾಯ ಮೂರ್ತಿಯನ್ನಾಗಿ ಮಾಡಿದ್ದಕ್ಕೆ ಪ್ರತಿಭಟಿಸಿ ರಾಜೀನಾಮೆ ನೀಡಿದ್ದರು. ಇಷ್ಟು ಮಾತ್ರವಲ್ಲ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರುವ ನಿಟ್ಟಿನಲ್ಲಿ ಸಂವಿಧಾನದ 21ನೇ ವಿಧಿಯನ್ನು ತಾತ್ಕಾಲಿಕವಾಗಿ ರದ್ದು ಮಾಡುವ ಬಗ್ಗೆ ಸುಪ್ರೀಂ ಕೋರ್ಟ್‌ ನಲ್ಲಿ ವಿಚಾರಣೆ ನಡೆದಿದ್ದ ವೇಳೆ, ಪ್ರತಿರೋಧವನ್ನು ವ್ಯಕ್ತಪಡಿಸಿ ಪ್ರಚಾರಕ್ಕೆ ಬಂದಿದ್ದರು.

1987- ಕೃಷ್ಣ ಅಯ್ಯರ್‌ ಆರ್‌.ವಿ.
ಆ ವರ್ಷ ನಡೆದಿದ್ದ ರಾಷ್ಟ್ರಪತಿ ಚುನಾವಣೆಗೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಾಗಿದ್ದ ವಿ.ಆರ್‌. ಕೃಷ್ಣ ಅಯ್ಯರ್‌ ಅವರನ್ನು ಎಡಪಕ್ಷಗಳು ರಾಮಸ್ವಾಮಿ ವೆಂಕಟರಾಮನ್‌ ವಿರುದ್ಧ ಕಣಕ್ಕೆ ಇಳಿಸಿದ್ದವು. ಉಪರಾಷ್ಟ್ರಪತಿಯಾಗಿದ್ದ ವೆಂಕಟರಾಮನ್‌ ರಾಷ್ಟ್ರಪತಿ ಚುನಾವಣೆಯಲ್ಲಿ 7,40,148 ಮತಗಳನ್ನು ಪಡೆದಿದ್ದರು. ಅಯ್ಯರ್‌ ಅವರಿಗೆ 2,81,550 ಮತಗಳು ಪ್ರಾಪ್ತವಾಗಿದ್ದವು. ಆಗ ರಾಷ್ಟ್ರಪತಿಯಾಗಿದ್ದ ಗ್ಯಾನಿ ಜೈಲ್‌ ಸಿಂಗ್‌ ಮತ್ತು ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿ ನಡುವಿನ ಬಾಂಧವ್ಯ ತೀರಾ ಹದಗೆಟ್ಟಿತ್ತು. ಹೀಗಾಗಿ ರಾಜಕೀಯ ಕಾರಣಗಳಿಗೂ ಈ ಚುನಾವಣೆ ಕುತೂಹಲಕಾರಿಯಾಗಿತ್ತು.ಇದರಿಂದಾಗಿ ಮತ್ತೂಮ್ಮೆ ಸ್ಪರ್ಧೆಗೆ ಅವಕಾಶ ಸಿಗದೇ ಇದ್ದ ಕಾರಣ ಜೈಲ್‌ ಸಿಂಗ್‌ ಅವರನ್ನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಾಂಗ್ರೆಸ್‌ನ ಕೆಲವು ಭಿನ್ನಮತೀಯರು ಲೋಕದಳ (ಬಿ) ಪಕ್ಷದ ಮುಖಂಡ ದೇವಿಲಾಲ್‌ ಪ್ರಚೋದಿಸಿದರು. ಆದರೆ, ಜೈಲ್‌ ಸಿಂಗ್‌ ಆ ಪ್ರಸ್ತಾವ ತಿರಸ್ಕರಿಸಿದ್ದರು.

1992 ಶರ್ಮಾ ಗಿಲ್ಬರ್ಟ್‌
ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಡಾ| ಶಂಕರ ದಯಾಳ್‌ ಶರ್ಮಾ ಮತ್ತು ಲೋಕಸಭೆಯ ಮಾಜಿ ಉಪಸಭಾಧ್ಯಕ್ಷರಾಗಿದ್ದ ಜಾರ್ಜ್‌ ಗಿಲ್ಬರ್ಟ್‌ ಸ್ವೆಲ್‌ ನಡುವೆ ಹಣಾಹಣಿ ಉಂಟಾಗಿತ್ತು. ಶರ್ಮಾ 6,75,804 ಮತಗಳನ್ನು ಪಡೆದು ಗೆದ್ದರೆ, ಗಿಲ್ಬರ್ಟ್‌ 3,46,485 ಮತಗಳನ್ನು ಪಡೆದು ಸೋತರು. ಮೇಘಾಲಯದ ಬುಡಕಟ್ಟು ಜನಾಂಗದ ಮುಖಂಡರಾಗಿದ್ದ ಗಿಲ್ಬರ್ಟ್‌ ಸ್ಪರ್ಧೆಗೆ ಮಾಜಿ ಪ್ರಧಾನಿ ವಿ.ಪಿ.ಸಿಂಗ್‌ ಸಲಹೆ ಮಾಡಿದ್ದರು. ಖ್ಯಾತ ವಕೀಲ ರಾಮ್‌ ಜೇಠ್ಮಲಾನಿ ಕೂಡ ಸ್ಪರ್ಧಿಸಿ 2,704 ಮತಗಳನ್ನು ಪಡೆದಿದ್ದರು.

1997 ಕೆ.ಆರ್‌.ನಾರಾಯಣನ್‌ಗೆ ಬಿಜೆಪಿ ಬೆಂಬಲ
ಆಗ ಅಧಿಕಾರದಲ್ಲಿದ್ದ ಯುನೈಟೆಡ್‌ ಫ್ರಂಟ್‌ ಸರಕಾರ ಕೆ.ಆರ್‌.ನಾರಾಯಣನ್‌ ಅವರನ್ನು ಕಣಕ್ಕೆ ಇಳಿಸಿತ್ತು. ಅವರಿಗೆ ಕಾಂಗ್ರೆಸ್‌, ವಿಪಕ್ಷದಲ್ಲಿದ್ದ ಬಿಜೆಪಿ ಬೆಂಬಲ ನೀಡಿತ್ತು. ಮುಖ್ಯ ಚುನಾವಣ ಆಯುಕ್ತರಾಗಿ ನಿವೃತ್ತರಾಗಿದ್ದ ಟಿ.ಎನ್‌. ಶೇಷನ್‌ ಅವರೂ ಕಣದಲ್ಲಿದ್ದರು. ಅವರಿಗೆ ಶಿವಸೇನೆ ಮತ್ತು ಕೆಲವು ಸ್ವತಂತ್ರ ಶಾಸಕರು ಬೆಂಬಲ ನೀಡಿದ್ದರು. ಕೆ.ಆರ್‌.ನಾರಾಯಣನ್‌ ಅವರಿಗೆ 9,56, 290 ಮತಗಳು ಸಿಕ್ಕಿದ್ದರೆ, ಶೇಷನ್‌ ಅವರಿಗೆ 50, 361 ಮತಗಳು ಬಂದಿದ್ದವು.

2002- ವಿಜ್ಞಾನಿ ರಾಷ್ಟ್ರಪತಿ
ಡಾ| ಎ.ಪಿ.ಜೆ.ಅಬ್ದುಲ್‌ ಕಲಾಂ ಅವರನ್ನು ರಾಷ್ಟ್ರಪತಿ ಚುನಾವಣೆ ಕಣಕ್ಕೆ ಇಳಿಸಬೇಕು ಎಂಬ ಬಿಜೆಪಿಯ ಪ್ರಸ್ತಾವ‌ಕ್ಕೆ ಕಾಂಗ್ರೆಸ್‌ ಸೇರಿದಂತೆ ಎಲ್ಲ ಪಕ್ಷಗಳು ಬೆಂಬಲ ನೀಡಿದ್ದವು. ಆದರೆ ಎಡಪಕ್ಷಗಳು ಲಕ್ಷ್ಮೀ ಸೆಹೆಗಲ್‌ ಅವರನ್ನು ಕಣಕ್ಕೆ ಇಳಿಸಿದ್ದವು. ಕಲಾಂ ಅವರಿಗೆ 9,22,884 ಮತಗಳು ಬಂದಿದ್ದರೆ, ಸೆಹೆಗಲ್‌ ಅವರಿಗೆ 1,07,366 ಮತಗಳು ಸಿಕ್ಕಿದ್ದವು.

2007- ಪ್ರತಿಭಾ ಪಾಟೀಲ್‌ಗೆ ಶಿವಸೇನೆ ಬೆಂಬಲ
ಯುಪಿಎ ಮತ್ತು ಎಡಪಕ್ಷಗಳ ಅಭ್ಯರ್ಥಿಯಾಗಿದ್ದ ಪ್ರತಿಭಾ ಪಾಟೀಲ್‌ ಅವರಿಗೆ 6,38,116 ಮತಗಳು ಬಂದಿದ್ದವು. ಅವರು ರಾಷ್ಟ್ರಪತಿಯಾಗುವ ಮೂಲಕ ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರರಾದರು. ಬಿಜೆಪಿ ವತಿಯಿಂದ ಭೈರೋನ್‌ ಸಿಂಗ್‌ ಶೆಖಾವತ್‌ ಸ್ಪರ್ಧಿಸಿ 3,31,306 ಮತಗಳನ್ನು ಪಡೆದುಕೊಂಡರು. ಪ್ರತಿಭಾ ಪಾಟೀಲ್‌ ಮಹಾರಾಷ್ಟ್ರದವರು ಎಂಬ ಕಾರಣಕ್ಕೆ ಶಿವಸೇನೆ ಅವರಿಗೆ ಬೆಂಬಲ ನೀಡಿತ್ತು. ಆ ಸಂದರ್ಭದಲ್ಲಿ ಶಿವಸೇನೆ ಎನ್‌ಡಿಎ ಜತೆಗಿತ್ತು.

2012- ಪ್ರಣಬ್‌ Vs ಸಂಗ್ಮಾ
ಯುಪಿಎ ಅಭ್ಯರ್ಥಿಯಾಗಿ ಪ್ರಣಬ್‌ ಮುಖರ್ಜಿ ಅವರನ್ನು ಕಣಕ್ಕೆ ಇಳಿಸಿತ್ತು. ಅವರಿಗೆ 7,13,763 ಮತಗಳು ಬಂದಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ಪಿ.ಎ. ಸಂಗ್ಮಾ ಅವರಿಗೆ 3,15,987 ಮತಗಳು ದೊರಕಿದ್ದವು.

2017- ಕೋವಿಂದ್‌ Vs ಮೀರಾ
ಎನ್‌ಡಿಎ ಅಭ್ಯರ್ಥಿಯಾಗಿ ರಾಮನಾಥ್‌ ಕೋವಿಂದ್‌ ಕಣದಲ್ಲಿದ್ದರು. ಅವರಿಗೆ 7,02,044 ಮತಗಳು ಸಿಕ್ಕಿದ್ದರೆ, ಯುಪಿಎ ಅಭ್ಯರ್ಥಿಯಾಗಿದ್ದ ಮೀರಾ ಕುಮಾರ್‌ ಅವರಿಗೆ 3,67,314 ಮತಗಳು ಪ್ರಾಪ್ತಿಯಾಗಿದ್ದವು. ಮೀರಾ ಕುಮಾರ್‌ ಅವರಿಗೆ 17 ಪಕ್ಷಗಳ ಬೆಂಬಲ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next