ನವದೆಹಲಿ: ಬಿಜೆಪಿ ನೇತೃತ್ವದ ಎನ್.ಡಿ.ಎ. ಸರಕಾರವು ತಮ್ಮ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ದಲಿತ ನಾಯಕ ರಮಾನಾಥ್ ಕೋವಿಂದ್ ಅವರನ್ನು ಆಯ್ಕೆಮಾಡಿರುವುದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಮಾಜೀ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರನ್ನು ತಮ್ಮ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಮೀರಾ ಕುಮಾರ್ ಅವರೂ ಸಹ ದಲಿತ ಅಭ್ಯರ್ಥಿಯನ್ನೇ ಕಣಕ್ಕಿಳಿಸಿರುವುದರಿಂದ ಈ ಬಾರಿಯ ರಾಷ್ಟ್ರಪತಿ ಚುನಾವಣೆ ಇನ್ನಷ್ಟು ರಂಗೇರಿದಂತಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ 17 ವಿಪಕ್ಷಗಳು ಜೊತೆ ಸೇರಿ ಗುರುವಾರ ನಡೆಸಿದ್ದ ಸಭೆಯಲ್ಲಿ ಮೀರಾ ಕುಮಾರ್ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.
ಕಾಂಗ್ರೆಸ್ ಅಧ್ಯಕ್ಕೆ ಶ್ರೀಮತಿ ಸೋನಿಯಾ ಗಾಂಧಿ, ಮಾಜೀ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಆರ್.ಜೆ.ಡಿ. ಮುಖ್ಯಸ್ಥ ಲಾಲೂಪ್ರಸಾದ್ ಯಾದವ್, ಎನ್.ಸಿ.ಪಿ. ಮುಖ್ಯಸ್ಥ ಶರದ್ ಪವಾರ್, ಸಿ.ಪಿ.ಐ.(ಎಂ) ಸೀತಾರಾಂ ಯಚೂರಿ, ಸಿಪಿಐನ ಡಿ.ರಾಜಾ, ಟಿ.ಎಂ.ಸಿ.ಯ ಡ್ಯಾರೆಕ್ ಓ ಬ್ರಿಯಾನ್, ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಬಿ.ಎಸ್.ಪಿ.ಯ ಸತೀಶ್ಚಂದ್ರ ಮಿಶ್ರಾ, ನ್ಯಾಷನಲ್ ಕಾಂಗ್ರೆಸ್ ಪಕ್ಷದ ಒಮರ್ ಅಬ್ದುಲ್ಲಾ ಮುಂತಾದವರು ಇಂದಿನ ಸಭೆಯಲ್ಲಿ ಭಾಗವಹಿಸಿದ ಪ್ರಮುಖರಾಗಿದ್ದರು.
‘ಮೀರಾ ಕುಮಾರ್ ಅವರನ್ನು ನಾವು ಯು.ಪಿ.ಎ.ಯ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಮಾಡಿದ್ದೇವೆ, ಉಳಿದ ಪಕ್ಷಗಳೂ ನಮ್ಮನ್ನು ಬೆಂಬಲಿಸುವ ನಿರೀಕ್ಷೆ ಇದೆ” ಎಂದು ಇದೇ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ಮಾಧ್ಯಮಗಳಿಗೆ ತಿಳಿಸಿದರು.