Advertisement
ಭಾರೀ ಪ್ರಮಾಣದ ಅಡ್ಡಮತ ಪೂರ್ಣ ಫಲಿತಾಂಶ ಬಂದ ಮೇಲೆ ಸಿಕ್ಕಿರುವ ಅಂಕಿ ಅಂಶಗಳ ಪ್ರಕಾರ, ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು, ವಿಪಕ್ಷಗಳಿಗೆ ಸೇರಿದ 125 ಶಾಸಕರು ಮತ್ತು 17 ಮಂದಿ ಸಂಸದರಿಂದ ಮತ ಪಡೆದಿದ್ದಾರೆ. ರಾಜ್ಯವಾರು ಲೆಕ್ಕಾಚಾರದಲ್ಲಿ ಹೇಳುವುದಾದರೆ, ಅಸ್ಸಾಂನಲ್ಲಿ ಅತೀ ಹೆಚ್ಚು ಮಂದಿ ಕ್ರಾಸ್‌ವೋಟಿಂಗ್ ಮಾಡಿದ್ದಾರೆ. ಅಲ್ಲಿನ ಕಾಂಗ್ರೆಸ್ ಶಾಸಕರು ಮುರ್ಮು ಅವರಿಗೆ ಮತ ಹಾಕಿದ್ದಾರೆ. ಅಲ್ಲದೆ, ಒಟ್ಟಾರೆಯಾಗಿ ಎಂಟು ರಾಜ್ಯಗಳಲ್ಲಿ ಹೆಚ್ಚು ಕ್ರಾಸ್‌ವೋಟಿಂಗ್ ಆಗಿದೆ ಎಂದು ಹೇಳಲಾಗುತ್ತಿದೆ.
ರಾಷ್ಟ್ರಪತಿ ಚುನಾವಣೆ ಇನ್ನೂ ಒಂದು ತಿಂಗಳಿಗಿಂತ ಹೆಚ್ಚಿರುವಾಗಲೇ ವಿಪಕ್ಷ ಗಳು ಸಭೆ ಸೇರಿ ಯಶವಂತ ಸಿನ್ಹಾ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ದ್ದವು. ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ರಾವ್ ಅವರು ಮುಂಚೂಣಿಯಲ್ಲಿ ನಿಂತು ವಿಪಕ್ಷಗಳನ್ನು ಒಗ್ಗೂಡಿಸುವ ಕೆಲಸ ಮಾಡಿದ್ದರು. ಬಳಿಕ ಎನ್‌ಸಿಪಿ ನಾಯಕ ಶರದ್ ಪವಾರ್ ಅವರ ಪ್ರವೇಶವಾಯಿತು. ವಿಶೇಷ ವೆಂದರೆ, ಇಲ್ಲಿ ಕಾಂಗ್ರೆಸ್ ಅನ್ನು ಗಣನೆಗೆ ತೆಗೆದುಕೊಂಡಿದ್ದೇ ಅನಂತರದ ದಿನಗಳಲ್ಲಿ. ಮೊದಲಿಗೆ ಶರದ್ ಪವಾರ್, ಫಾರೂಕ್ ಅಬ್ದುಲ್ಲಾ ಮತ್ತು ಗೋಪಾಲಕೃಷ್ಣ ಗಾಂಧಿ ಅವರನ್ನು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿ ಎಂದು ವಿಪಕ್ಷಗಳು ಕೇಳಿಕೊಂಡಿದ್ದವು. ಆದರೆ ಈ ಮೂವರೂ ಒಪ್ಪದ ಕಾರಣ ಟಿಎಂಸಿಯಲ್ಲಿದ್ದ, ಬಿಜೆಪಿಯ ಮಾಜಿ ನಾಯಕ ಯಶವಂತ ಸಿನ್ಹಾ ಅವರನ್ನು ಕಣಕ್ಕೆ ಇಳಿಸಿದ್ದವು. ಎಲ್ಲಿ ಎಷ್ಟು ಅಡ್ಡಮತ?
ಅಸ್ಸಾಂನಲ್ಲಿ 22, ಬಿಹಾರ ಮತ್ತು ಛತ್ತೀಸ್‌ಗಢದಲ್ಲಿ ತಲಾ 6,ಗೋವಾದಲ್ಲಿ ನಾಲ್ಕು, ಪಶ್ಚಿಮ ಬಂಗಾಲದಲ್ಲಿ ಒಬ್ಬರು, ಗುಜರಾತ್‌ನಲ್ಲಿ 10,ಮಧ್ಯ ಪ್ರದೇಶ 19, ಮಹಾರಾಷ್ಟ್ರದಲ್ಲಿ 16, ಮೇಘಾಲಯ 7, ಪಂಜಾಬ್‌ನಲ್ಲಿ 2,
ಒಡಿಶಾ ಮತ್ತು ರಾಜಸ್ಥಾನದಲ್ಲಿ ತಲಾ 1, ಉತ್ತರಪ್ರದೇಶದಲ್ಲಿ 12, ಉತ್ತರಾಖಂಡದಲ್ಲಿ ಇಬ್ಬರು ಮುರ್ಮು ಅವರಿಗೆ ಆತ್ಮಸಾಕ್ಷಿ ಮತ ಚಲಾಯಿಸಿದ್ದಾರೆ. ಕೇರಳದಲ್ಲಿಯೂ ಒಬ್ಬರು ಮುರ್ಮು ಅವರ ಪರವಾಗಿ ಮತ ಹಾಕಿದ್ದಾರೆ.
Related Articles
ವಿಪಕ್ಷಗಳ ಈ ಒಗ್ಗಟ್ಟಿನ ಮಂತ್ರದ ನಡುವೆಯೇ, ಕೇಂದ್ರದಲ್ಲಿ ಆಡಳಿತದಲ್ಲಿರುವ ಎನ್‌ಡಿಎ ಬೇರೊಂದು ರೀತಿಯ ಸ್ಕೆಚ್ ಹಾಕಿತು. ಝಾರ್ಖಂಡ್‌ನ ಮಾಜಿ ರಾಜ್ಯಪಾಲರು ಮತ್ತು ಒಡಿಶಾ ಮೂಲದ ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತು. ಇವರ ಅಭ್ಯರ್ಥಿತನವೇ ವಿಪಕ್ಷಗಳ ಪಾಲಿಗೆ ನುಂಗಲಾರದ ತುತ್ತಾಯಿತು. ಏಕೆಂದರೆ ಉತ್ತಮ ಇಮೇಜ್ ಇರಿಸಿಕೊಂಡಿರುವ ಮತ್ತು ದೇಶದ ಪ್ರಮುಖ ಹಿಂದುಳಿದ ಸಮುದಾಯ ಎಸ್‌ಟಿಗೆ ಸೇರಿದ ಮುರ್ಮು ಅವರನ್ನು ವಿರೋಧಿಸುವುದು ಕೆಲವು ರಾಜಕೀಯ ಪಕ್ಷಗಳಿಗೆ ಕಷ್ಟಕರವಾಯಿತು. ಹೀಗಾಗಿಯೇ ವಿಪಕ್ಷ ಅಭ್ಯರ್ಥಿ ಯಶವಂತ ಸಿನ್ಹಾ ಅವರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದ್ದ ಝಾರ್ಖಂಡ್ ಮುಕ್ತಿ ಮೋರ್ಚಾದ ಹೇಮಂತ್ ಸೊರೆನ್ ಅನಿವಾರ್ಯವಾಗಿ ಮುರ್ಮು ಅವರ ಅಭ್ಯರ್ಥಿತನವನ್ನು ಒಪ್ಪಿಕೊಳ್ಳಬೇಕಾಯಿತು.
Advertisement
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಏನಾಗಬಹುದು?ರಾಷ್ಟ್ರಪತಿ ಚುನಾವಣೆಯೇ ಬೇರೆ, ಉಪರಾಷ್ಟ್ರಪತಿ ಚುನಾವಣೆಯೇ ಬೇರೆ. ರಾಷ್ಟ್ರಪತಿ ಚುನಾವಣೆಗೆ ಲೋಕಸಭೆ, ರಾಜ್ಯಸಭೆ ಮತ್ತು ವಿಧಾನಸಭೆಗಳ ಸದಸ್ಯರು ಮತ ಹಾಕುತ್ತಾರೆ. ಆದರೆ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಕೇವಲ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಮಾತ್ರ ಮತ ಚಲಾಯಿಸುತ್ತಾರೆ. ಈಗಾಗಲೇ ಎನ್‌ಡಿಎ ಕಡೆಯಿಂದ ಜಗದೀಪ್ ಧನ್ಕರ್ ಮತ್ತು ವಿಪಕ್ಷಗಳ ಕಡೆಯಿಂದ ಮಾರ್ಗರೆಟ್ ಆಳ್ವ ಅವರು ಸ್ಪರ್ಧಿಸಿದ್ದಾರೆ. ಈಗಿನ ಲೆಕ್ಕಾಚಾರಗಳ ಪ್ರಕಾರ, ಎನ್‌ಡಿಎ ಅಭ್ಯರ್ಥಿಗೆ ಗೆಲುವು ಸುಲಭ. ಇದಕ್ಕೆ ಕಾರಣ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಎನ್‌ಡಿಎ ಸ್ಪಷ್ಟ ಬಹುಮತ ಹೊಂದಿದೆ. ಆದರೆ ಈಗ ವಿಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲೇ ಒಡಕು ಮೂಡಿದೆ. ತಮ್ಮನ್ನು ಕೇಳದೇ ಮಾರ್ಗರೆಟ್ ಆಳ್ವ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿರುವ ಟಿಎಂಸಿ, ಮತದಾನದಿಂದಲೇ ದೂರ ಉಳಿಯುವುದಾಗಿ ಹೇಳಿದೆ. ಈ ಮೂಲಕ ವಿಪಕ್ಷಗಳಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಇದು ಬಹಿರಂಗಪಡಿಸಿದೆ.