ಹೊಸದಿಲ್ಲಿ: 17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಆಡಳಿತ ಪಕ್ಷದ ಅಭ್ಯರ್ಥಿಯನ್ನು ನೋಡಿಕೊಂಡು, ವಿಪಕ್ಷಗಳು ನಿರ್ಧಾರ ತೆಗೆದು ಕೊಳ್ಳುವ ಸಾಧ್ಯತೆ ಇದೆ. ಈ ನಡುವೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ಅಭ್ಯರ್ಥಿ ಆಯ್ಕೆ, ಎನ್‌ಡಿಎ ಅಂಗಪಕ್ಷಗಳು ಮತ್ತು ಇತರ ಪಕ್ಷಗಳ ಜತೆಗೆ ಮಾತುಕತೆ ನಡೆಸುವ ಸಂಬಂಧ ಮೂವರು ಸದಸ್ಯರ ಸಮಿತಿ ರಚಿಸಿದ್ದಾರೆ. ಅತ್ತ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಗುಂಪು ಸಹ 10 ಮಂದಿಯ ಸಮಿತಿ ರಚನೆ ಮಾಡಿದ್ದು, ಇದೂ ಅಭ್ಯರ್ಥಿಯ ಆಯ್ಕೆ ಮತ್ತು ಪಕ್ಷಗಳ ಮನವೊಲಿಕೆ ಕಾರ್ಯನಡೆಸಲಿದೆ.
ಸದ್ಯಕ್ಕೆ ರಾಷ್ಟ್ರಪತಿ ಆಯ್ಕೆ ಅವಿರೋಧವಾಗಿ ಆಗುತ್ತದೆಯೋ ಅಥವಾ ಚುನಾವಣೆ ಮೂಲಕವೇ ಆಗುತ್ತದೆಯೋ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಒಂದು ವೇಳೆ ಎನ್‌ಡಿಎ ಹಿಂದುತ್ವ ಮೂಲದ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ವಿಪಕ್ಷಗಳು ತಮ್ಮದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲಿವೆ. ವಿಪಕ್ಷಗಳ ಜತೆಗೆ ಚರ್ಚಿಸಿ ಎಲ್ಲರೂ ಒಪ್ಪುವಂಥ ಅಭ್ಯರ್ಥಿಯನ್ನು ಎನ್‌ಡಿಎ ಆರಿಸಿದರೆ ಆಗ ಚುನಾವಣೆ ಇಲ್ಲದೇ ರಾಷ್ಟ್ರಪತಿ ಆಯ್ಕೆ ಮುಗಿಯುತ್ತದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಇದು ಕಷ್ಟಸಾಧ್ಯ ಎಂದೇ ಹೇಳಲಾಗುತ್ತಿದೆ.
ಮೂರು ಮಂದಿ ಸಮಿತಿ: ಆಡಳಿತ ಪಕ್ಷ ಬಿಜೆಪಿಯಲ್ಲಿ ರಾಷ್ಟ್ರಪತಿ ಚುನಾವಣೆ ಈಗ ಬಿರುಸು ಪಡೆದಿದೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ಹಿರಿಯ ಸಚಿವರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಮತ್ತು ವೆಂಕಯ್ಯ ನಾಯ್ಡು ಅವರನ್ನೊಳಗೊಂಡ ಸಮಿತಿ ರಚಿಸಿದ್ದಾರೆ. ಎಲ್ಲರೊಂದಿಗೆ ಮಾತನಾಡಿ ಮನವೊಲಿಕೆ ಮಾಡುವ ಜವಾಬ್ದಾರಿ ಈ ಸಮಿತಿ ಮೇಲಿದೆ.
10 ಮಂದಿ ಸಮಿತಿ: ಈಗಾಗಲೇ ರಾಷ್ಟ್ರಪತಿ ಚುನಾವಣೆ ಸಂಬಂಧ ಹಲವಾರು ಸುತ್ತಿನ ಮಾತುಕತೆ ನಡೆಸಿರುವ ವಿಪಕ್ಷಗಳ ಸಾಲಿನ ನಾಯಕರು, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಬುಧವಾರ ವಿಪಕ್ಷಗಳ 10 ಮಂದಿ ಸದಸ್ಯರು ಪ್ರಣವ್ ಭೇಟಿ ಮಾಡಿ, ಚರ್ಚಿಸಲಿದ್ದಾರೆ. ಆಡಳಿತ ಮತ್ತು ವಿಪಕ್ಷಗಳಿಗೆ ಒಪ್ಪಿಗೆಯಾಗುವ ರೀತಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂಬಂಧ ಅವರೊಂದಿಗೆ ಈ ಸದಸ್ಯರು ಚರ್ಚಿಸಲಿದ್ದಾರೆ.
ಮೋದಿ, ಶಾರಿಂದ ಅಂತಿಮ ನಿರ್ಧಾರ
ಬಿಜೆಪಿ ಮೂಲಗಳ ಪ್ರಕಾರ ಶಾ ರಚಿಸಿರುವ ಮೂವರು ಹಿರಿಯ ಸದಸ್ಯರನ್ನು ಒಳಗೊಂಡಿರುವ ಸಮಿತಿ ಎಲ್ಲ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸಲಿದೆ. ಅಂತಿಮವಾಗಿ ಇಲ್ಲಿ ಸಂಗ್ರಹಿಸಲಾದ ಮಾಹಿತಿಗಳನ್ನು ಒಳಗೊಂಡ ವರದಿಯನ್ನು ಶಾ ಅವರಿಗೆ ನೀಡಲಾಗುತ್ತದೆ. ಆ ಬಳಿಕ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.