ನವದೆಹಲಿ: ನಿರೀಕ್ಷೆಯಂತೆ ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಅವರು ಆಯ್ಕೆಯಾಗಿದ್ದಾರೆ. ಎನ್ ಡಿಎ ಬೆಂಬಲಿತ ಅಭ್ಯರ್ಥಿ ರಾಮನಾಥ ಕೋವಿಂದ್ ಅವರು 7,02,644 ಮತಗಳನ್ನು ಪಡೆದು ಭರ್ಜರಿ ಜಯಗಳಿಸಿದ್ದಾರೆ.
ಯುಪಿಎ ಅಭ್ಯರ್ಥಿ ಮೀರಾಕುಮಾರ್ ಅವರು 3,67,314 ಮತಗಳನ್ನು ಪಡೆದು ಪರಾಜಯಗೊಂಡಿದ್ದಾರೆ. ಏತನ್ಮಧ್ಯೆ ರಾಮನಾಥ ಕೋವಿಂದ್ ಅವರ ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
3,34,730 ಮತಗಳ ಅಂತರದಿಂದ ಗೆಲುವು ಸಾಧಿಸಿರುವುದಾಗಿ ಕೇಂದ್ರ ಚುನಾವಣಾ ಆಯೋಗ ಗುರುವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಅಧಿಕೃತವಾಗಿ ಘೋಷಿಸಿತು.
ದೇಶದ ಮೊದಲ ಪ್ರಜೆಯ ಆಯ್ಕೆಯ ಮತಎಣಿಕೆ ಗುರುವಾರ ಬೆಳಗ್ಗೆ 11ಗಂಟೆಗೆ ಆರಂಭವಾಗಿದ್ದು, ಸಂಜೆ ವೇಳೆ ಮುಕ್ತಾಯವಾಗಿತ್ತು. ಆರಂಭ ಮತಎಣಿಕೆಯಲ್ಲಿಯೇ ರಾಮನಾಥ ಕೋವಿಂದ್ ಅವರು ಭರ್ಜರಿ ಮುನ್ನಡೆ ಸಾಧಿಸಿದ್ದರು.
ಸಂಸದರು, ಶಾಸಕರ ಒಟ್ಟು ಮತಗಳ ಮೌಲ್ಯ 10, 98. 903. ದೆಹಲಿಯ ಸಂಸತ್ ಭವನದಲ್ಲಿ ಮತಎಣಿಕೆ ಪ್ರಕ್ರಿಯೆ ನಡೆದಿತ್ತು.
ಅಭಿನಂದನೆಗಳ ಮಹಾಪೂರ:
ನೂತನವಾಗಿ ದೇಶದ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಮನಾಥ ಕೋವಿಂದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಗಣ್ಯಾತಿಗಣ್ಯರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.