Advertisement
ಸದ್ಯದ ಮಟ್ಟಿಗೆ ಸರ್ವಸಮ್ಮತ ಅಭ್ಯರ್ಥಿಯ ಬಗ್ಗೆಯೇ ಸಾಕಷ್ಟು ಚರ್ಚೆಗಳಾಗುತ್ತಿವೆ. ಇದು ಶುಕ್ರವಾರ ಹೆಚ್ಚು ಕಡಿಮೆ ಗೊತ್ತಾಗಲಿದೆ. ರಾಷ್ಟ್ರಪತಿ ಚುನಾವಣಾ ಸಂಧಾನಕ್ಕಾಗಿಯೇ ನಿಯೋಜಿತವಾಗಿರುವ ಬಿಜೆಪಿ ಸಮಿತಿಯ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಮತ್ತು ವೆಂಕಯ್ಯನಾಯ್ಡು ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.
ಸದ್ಯ ಅರುಣ್ ಜೇಟ್ಲಿ ಅವರು ವಿದೇಶ ಪ್ರವಾಸದಲ್ಲಿದ್ದು, ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ. ಆದರೆ ರಾಜನಾಥ್ ಸಿಂಗ್ ಮತ್ತು ವೆಂಕಯ್ಯ ನಾಯ್ಡು ಅವರು ಮೊದಲ ಸುತ್ತಿನ ಮಾತುಕತೆ ಆರಂಭಿಸಿದ್ದಾರೆ. ಎನ್‌ಸಿಪಿಯ ಪ್ರಫುಲ್ಲ ಪಟೇಲ್ ಮತ್ತು ಬಿಎಸ್ಪಿಯ ಸತೀಶ್ ಚಂದ್ರ ಶರ್ಮ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ವೇಳೆ ಇಬ್ಬರೂ ನಾಯಕರು ಎನ್‌ಡಿಎ ಅಭ್ಯರ್ಥಿಯ ಬಗ್ಗೆ ನೋಡಿಕೊಂಡು ನಂತರ ತಮ್ಮ ಆಯ್ಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
Related Articles
ಇದುವರೆಗೆ ಆಗಿರುವ ವಿದ್ಯಮಾನಗಳ ಬಗ್ಗೆ ವೆಂಕಯ್ಯ ನಾಯ್ಡು ಮತ್ತು ರಾಜನಾಥ್ ಸಿಂಗ್ ಅವರು ಪ್ರಧಾನಿ ಮೋದಿ ಅವರಿಗೆ ವಿವರಣೆ ನೀಡಿದ್ದಾರೆ ಎಂದು ಹೇಳಲಾಗಿದೆ. ಜೂ 25 ರಿಂದ ಎರಡು ದಿನ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮುನ್ನವೇ ಅಭ್ಯರ್ಥಿಯ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ವಿಪಕ್ಷ ನಾಯಕರು ಗಾಂಧೀಜಿ ಅವರ ಮೊಮ್ಮೊಗ ಗೋಪಾಲಕೃಷ್ಣ ಗಾಂಧಿ ಅವರ ಹೆಸರನ್ನು ತೇಲಿಬಿಟ್ಟಿದ್ದಾರೆ ಎಂದು ಹೇಳಲಾಗಿದ್ದು, ಈ ಹೆಸರಿಗೆ ಸರ್ಕಾರದ ಕಡೆಯಿಂದ ಒಪ್ಪಿಗೆ ಸಿಕ್ಕಿಲ್ಲ. ಹೀಗಾಗಿ, ಒಂದು ವೇಳೆ ಚುನಾವಣೆ ನಡೆದರೂ, ಅದು ಗೋಪಾಲ ಕೃಷ್ಣ ಗಾಂಧಿ ಮತ್ತು ಎನ್‌ಡಿಎ ಅಭ್ಯರ್ಥಿ ನಡುವೆಯೇ ನಡೆಯಲಿದೆ ಎನ್ನಲಾಗಿದೆ.
Advertisement
ಸದ್ಯದ ಮಟ್ಟಿಗೆ ಎನ್‌ಡಿಎ ಪಾಲಿಗೆ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಕಷ್ಟವೇನಲ್ಲ. ಈಗಿರುವ ನಂಬರ್ ಪ್ರಕಾರ, ಸರ್ಕಾರದ ಪಾಲಿಗೆ ಕೇವಲ 11 ಸಾವಿರ ಮತ ಬೇಕು. ಅಲ್ಲದೆ ಎನ್‌ಡಿಎ ಮೈತ್ರಿಕೂಟದಲ್ಲಿರುವ ಎಲ್‌ಜೆಪಿ ಈಗಾಗಲೇ ಮೋದಿ ಅವರು ಆರಿಸುವ ಅಭ್ಯರ್ಥಿಗೇ ಮತ ಎಂದು ಸ್ಪಷ್ಟವಾಗಿ ಹೇಳಿದೆ. ಶಿವಸೇನೆ ಕೈಕೊಟ್ಟರೂ, ಟಿಆರ್‌ಎಸ್ ಮತ್ತು ವೈಎಸ್‌ಆರ್ ಕಾಂಗ್ರೆಸ್ ಮೇಲೆ ಎನ್‌ಡಿಎ ಕಣ್ಣಿಟ್ಟಿದೆ.