Advertisement

ಕಣ್ಣಾಲಿ ತುಂಬಿಸಿದ ನಿರಾಲ ಬಲಿದಾನ​​​​​​​

06:00 AM Jan 27, 2018 | |

ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಅಶೋಕ ಚಕ್ರ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಭಾವುಕರಾದದ್ದು ಕಂಡುಬಂತು.

Advertisement

ಕಾರ್ಪೋರಲ್‌ ಜ್ಯೋತಿ ಪ್ರಕಾಶ್‌ ನಿರಾಲ ಅವರಿಗೆ ಮರಣೋತ್ತರವಾಗಿ ಅಶೋಕ ಚಕ್ರ ಪ್ರದಾನ ಮಾಡಲಾಯಿತು. ವಾಯುಸೇನೆ ಗರುಡ ಕಮಾಂಡೋ ಆಗಿದ್ದ ಜ್ಯೋತಿ ಪ್ರಕಾಶ್‌, ಕಳೆದ ನವೆಂಬರ್‌ನಲ್ಲಿ ಬಂಡಿಪೋರಾದಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯುವ ವೇಳೆ ಹುತಾತ್ಮರಾಗಿದ್ದಾರೆ. ನಿರಾಲರ ಪತ್ನಿ ಹಾಗೂ ತಾಯಿಗೆ ಪ್ರಶಸ್ತಿಯನ್ನು ಹಸ್ತಾಂತರಿಸುವ ವೇಳೆ ರಾಷ್ಟ್ರಪತಿ ಕೋವಿಂದ್‌ ಕಣ್ಣುಗಳು ತುಂಬಿಕೊಂಡವು. ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ತಮ್ಮ ಕಣ್ಣಗಳನ್ನು ಒರೆಸಿಕೊಂಡಿದ್ದು ಗೋಚರಿಸಿತು.

ಬೆಂಗಳೂರಿನ ಪ್ರದೀಪ್‌ಗೆ ಶೌರ್ಯಚಕ್ರ:
ಕಳೆದ ವರ್ಷ ಮೇಯಲ್ಲಿ ಲಷ್ಕರ್‌ ಎ ತೊಯ್ಬಾ ಉಗ್ರರ ಒಳನುಸುಳುವಿಕೆಯನ್ನು ಜಮ್ಮು ಕಾಶ್ಮೀರದಲ್ಲಿ ತಡೆದು ಅಪೂರ್ವ ಸಾಹಸಗೈದ ಬೆಂಗಳೂರಿನ ಪ್ರದೀಪ್‌ ಶೌರಿ ಆರ್ಯ ಅವರಿಗೆ ಈ ಬಾರಿ ಶೌರ್ಯ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಐಆರ್‌ಎಸ್‌ ಅಧಿಕಾರಿಯಾಗಿರುವ ಅವರು 2014ರಲ್ಲಿ ಬೆಂಗಳೂರಿನಲ್ಲಿ ಆದಾಯ ತೆರಿಗೆಯ ಜಂಟಿ ಕಮಿಷನರ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಈಗ ಜಮ್ಮು ಕಾಶ್ಮೀರದಲ್ಲಿ ಪ್ಯಾರಾಚೂಟ್‌ ರೆಜಿಮೆಂಟ್‌ನ 4ನೇ ಬೆಟಾಲಿಯನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರು ಉಗ್ರರು ಚಬುಕ್‌ ಪ್ರದೇಶದಲ್ಲಿ ತಡರಾತ್ರಿ ಒಳನುಸುಳಲು ಪ್ರಯತ್ನಿಸಿದ ಸುಳಿವು ಲಭ್ಯವಾಗುತ್ತಿದ್ದಂತೆಯೇ ಪ್ರದೀಪ್‌ ನೇತೃತ್ವದ ಪಡೆ ಸಕ್ರಿಯಗೊಂಡಿತ್ತು. ಹುಣ್ಣಿಮೆಯಲ್ಲಿ ಚಂದ್ರನ ಬೆಳಕಿನಲ್ಲಿ ತಪ್ಪಿಸಿಕೊಳ್ಳುವ ಸಾಧ್ಯತೆ ಇದ್ದುದರಿಂದ, ಉಗ್ರರನ್ನು ಸುತ್ತುವರಿಯಲು ಈ ಪಡೆ ಆರಂಭಿಸಿತ್ತು. ಈ ಮಧ್ಯೆ ಬಿದ್ದಿದ್ದ ಮರವೊಂದರ ಕೆಳಗೆ ಉಗ್ರರು ಅವಿತುಕೊಂಡಿದ್ದು ಕಾಣಿಸುತ್ತಿದ್ದಂತೆಯೇ, ಪ್ರದೀಪ್‌ ತನ್ನ ಪ್ರಾಣ ಒತ್ತೆಯಿಟ್ಟು ದಾಳಿ ನಡೆಸಿ, ಉಗ್ರರನ್ನು ಸದೆಬಡಿದರು.

ಗ್ರನೆಡಿಯರ್ಸ್‌ ರೆಜಿಮೆಂಟ್‌ನ ಮೇಜರ್‌ ಅಖೀಲ್‌ ರಾಜ್‌ ಆರ್‌ವಿ, ರಜಪೂತ ರೆಜಿಮೆಂಟ್‌ನ ಕ್ಯಾ. ರೋಹಿತ್‌ ಶುಕ್ಲಾ, ಪ್ಯಾರಾಚೂಟ್‌ ರೆಜಿಮೆಂಟ್‌ನ ಕ್ಯಾ. ಅಭಿನವ್‌ ಶುಕ್ಲಾ, ಗ್ರೆನೆಡಿಯರ್ಸ್‌ ರೆಜಿಮೆಂಟ್‌ನ ಹವಲ್ದಾರ್‌ ಮುಬಾರಕ್‌ ಅಲಿ, ಗೋರ್ಘಾ ರೈಫ‌ಲ್ಸ್‌ನ ಹವಲ್ದಾರ್‌ ರವೀಂದ್ರ ಥಾಪಾ, ಪ್ಯಾರಾಚೂಟ್‌ ರೆಜಿಮೆಂಟ್‌ನ ನಾಯಕ್‌ ನರೇಂದರ್‌ ಸಿಂಗ್‌, ಜಮ್ಮು ಕಾಶ್ಮೀರ ನೈಟ್‌ ಇನ್‌ಫ್ಯಾಂಟ್ರಿಯ ಲ್ಯಾನ್ಸ್‌ನಾಯಕ್‌ ಬಧೇರ್‌ ಹುಸೇನ್‌ ಹಾಗೂ ಪ್ಯಾರಾಚೂಟ್‌ ರೆಜಿಮೆಂಟ್‌ನ ಪರತ್‌ರೂಪರ್‌ ಮಂಚುಗೆ ಶೌರ್ಯಚಕ್ರ ಪುರಸ್ಕಾರ ನೀಡಲಾಗಿದೆ.

ಫೀಲ್ಡ್‌ ಮಾರ್ಷಲ್‌ ಕೆ ಎಂ ಕಾರ್ಯಪ್ಪಗೆ ರಾಷ್ಟ್ರಪತಿ ಪದಕ
ಕರ್ನಾಟಕದ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಸೇರಿದಂತೆ ಸಶಸ್ತ್ರ ಸೀಮಾ ಬಲದ 14 ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕದ ಗೌರವವನ್ನು ಗಣರಾಜ್ಯೋತ್ಸವದಂದು ಪ್ರದಾನ ಮಾಡಲಾಗಿದೆ. ಸಶಸ್ತ್ರ ಸೀಮಾ ಬಲಕ್ಕೆ 1989ರಲ್ಲಿ ಕಾರ್ಯಪ್ಪ ಸೇರ್ಪಡೆಗೊಂಡಿದ್ದರು. ನೇಪಾಳ ಹಾಗೂ ಭೂತಾನ್‌ ಗಡಿಯಲ್ಲಿನ ಇವರ ಸಾಧನೆಗೆ ಈ ಪುರಸ್ಕಾರ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next