ಗಾಂಧಿನಗರ: ದೇಶದ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಯನ್ನು ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ “ಆಯುಷ್ಮಾನ್ ಭವ’ ಶಿಬಿರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಿದರು.
ಗುಜರಾತ್‌ನ ಗಾಂಧಿನಗರದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ವರ್ಚುಯಲ್ ಮೂಲಕ ಆಯುಷ್ಮಾನ್ ಭವ ಪೋರ್ಟಲ್ ಅನ್ನು ಇದೇ ವೇಳೆ ಲೋಕಾರ್ಪಣೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಹುಟ್ಟಿದ ದಿನ ಸೆ.17ರಿಂದ ಅ.2ನೇ ತಾರೀಕಿನ ವರೆಗೆ ದೇಶಾದ್ಯಂತ ಆರೋಗ್ಯ ಮೇಳ, ಆರೋಗ ಶಿಬಿರಗಳನ್ನು ಆಯೋಜಿಸಲಾಗುವುದು. ಇದರ ಜತೆಗೆ ರಕ್ತದಾನ ಶಿಬಿರ, ಅಂಗಾಂಗ ದಾನ ಪ್ರತಿಜ್ಞಾ ಶಿಬಿರಗಳನ್ನು ಆಯೋಜಿಸಲಾಗುತ್ತದೆ.
ಕೇಂದ್ರ ಸರ್ಕಾರದ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಘೋಷಣೆಯಂತೆ ಬಡವರು, ಕಾರ್ಮಿಕರು ಸೇರಿದಂತೆ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ “ಆಯುಷ್ಮಾನ್ ಭವ’ ಶಿಬಿರ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ ಪ್ರತಿ ಗ್ರಾಮದಲ್ಲಿ ಈಗಾಗಲೇ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಪ್ರತಿ ಕುಟುಂಬವು ಆರೋಗ್ಯ ಸೇವೆಯನ್ನು ಪಡೆಯುತ್ತಿದೆ. “ಆಯುಷ್ಮಾನ್ ಭವ’ ಶಿಬಿರಗಳ ಮೂಲಕ ಆರೋಗ್ಯ ಸೇವೆಯನ್ನು ಮನೆ ಮನೆಗೆ ಕಂಡೊಯ್ಯುವುದು ಉದ್ದೇಶವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನಸುಖ ಮಾಂಡವಿಯಾ ಹೇಳಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಬಾಯ್ ಪಟೇಲ್ ಸೇರಿದಂತೆ ವಿವಿಧ ರಾಜ್ಯಗಳ ರಾಜ್ಯಪಾಲರು, ಸಚಿವರು ಉಪಸ್ಥಿತರಿದ್ದರು.