Advertisement

ಪ. ಜಾತಿ ಮತ್ತು ಪಂಗಡದ ಸರಕಾರಿ ನೌಕರರ ಭಡ್ತಿ ಮೀಸಲಿಗೆ ಅಂಕಿತ

06:00 AM Jun 16, 2018 | Team Udayavani |

ಬೆಂಗಳೂರು: ಸುಪ್ರೀಂ ಕೋರ್ಟ್‌ ಭಡ್ತಿ ಮೀಸಲು ರದ್ದುಗೊಳಿಸಿದ್ದರಿಂದ ಹಿಂಭಡ್ತಿಗೆ ಒಳಗಾಗಿದ್ದ ಪ. ಜಾತಿ ಮತ್ತು ಪಂಗಡದ ಸರಕಾರಿ ನೌಕರರು, ಅಧಿಕಾರಿಗಳಿಗೆ ಇದು ಸಿಹಿ ಸುದ್ದಿ. ಹಾಗೆಯೇ ಮುಂಭಡ್ತಿಯ ಕನಸು ಕಂಡಿದ್ದ ಸಾವಿರಾರು ಸಾಮಾನ್ಯ ವರ್ಗದ ನೌಕರರಿಗೆ ಆಘಾತಕಾರಿ ಸುದ್ದಿಯೂ ಹೌದು. ಕಾರಣ ಇಷ್ಟೆ, ಈ ಸಂಬಂಧ ರಾಜ್ಯ ಸರಕಾರದ “ಮೀಸಲು ಆಧಾರದ ಮೇಲೆ ಭಡ್ತಿ ಹೊಂದಿರುವ ಸರಕಾರಿ ನೌಕರರಿಗೆ ತತ್ಪರಿಣಾಮವಾದ ಜ್ಯೇಷ್ಠತೆ ವಿಸ್ತರಿಸುವ ಮಸೂದೆ -2017’ಕ್ಕೆ ರಾಷ್ಟ್ರಪತಿ ಅಂಕಿತ ಬಿದ್ದಿದೆ. ಈ ಬೆಳವಣಿಗೆಯಿಂದಾಗಿ ಸುಪ್ರೀಂ ತೀರ್ಪಿನನ್ವಯ ಹಿಂಭಡ್ತಿಯ ಆತಂಕ ಹೊಂದಿದ್ದ ಪ. ಜಾತಿ ಮತ್ತು ಪಂಗಡದ ಸಾವಿರಾರು ನೌಕರರು ನಿರುಮ್ಮಳರಾಗಲಿದ್ದು, ಹಾಲಿ ಸ್ಥಾನದಲ್ಲೇ ಉಳಿಯಲಿದ್ದಾರೆ. ಭಡ್ತಿ ಮೀಸಲು ಕಾಯ್ದೆ ರದ್ದುಗೊಳಿಸಿ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದ್ದ ರಿಂದ ಹಿಂಭಡ್ತಿ ಆತಂಕ ಹೊಂದಿದ್ದ ಈ ಸಮುದಾಯದ ನೌಕರರ ಹಿತ ಕಾಪಾಡಲು ಸರಕಾರ ಈ ಮಸೂದೆಗೆ ವಿಧಾನ ಮಂಡಲದಲ್ಲಿ ಒಪ್ಪಿಗೆ ಪಡೆದಿತ್ತು.

Advertisement

ಆತಂಕದಲ್ಲಿದ್ದರು ನೌಕರರು
ವಿವಿಧ ಇಲಾಖೆಗಳ 30 ಸಾವಿರಕ್ಕೂ ಹೆಚ್ಚು ಎಸ್‌ಸಿ, ಎಸ್‌ಟಿ ನೌಕರರು ಹಿಂಭಡ್ತಿಯ ಆತಂಕ ಹೊಂದಿದ್ದರು. ಈ ಪೈಕಿ ಶೇ. 80 ಮಂದಿಗೆ ಹಿಂಭಡ್ತಿ ನೀಡಿದ್ದು, ಶೇ. 20ರಷ್ಟು ಮಂದಿಗೆ ಹಿಂಭಡ್ತಿ ಬಾಕಿ ಇತ್ತು. ಈಗ ಮಸೂದೆಗೆ ಅಂಕಿತ ಬಿದ್ದಿರುವುದರಿಂದ ಈಗಾಗಲೇ ಹಿಂಭಡ್ತಿ ಪಡೆದವರು ತಾವು ಹಿಂದೆ ಇದ್ದ ಸ್ಥಾನಗಳಿಗೆ ಮರಳಲಿದ್ದಾರೆ. ಇದರ ಬೆನ್ನಲ್ಲೇ ಅರ್ಹತೆ ಆಧಾರದ ಮೇಲೆ ಭಡ್ತಿ ಹೊಂದಲು ಕಾತರರಾಗಿದ್ದ ಸಾವಿರಾರು ಮಂದಿ ಸಾಮಾನ್ಯ, ಹಿಂದುಳಿದ ಮತ್ತು ಅಲ್ಪಸಂಖ್ಯಾಕ ಸಮುದಾಯದ ನೌಕರರಿಗೆ ನಿರಾಶೆಯಾಗಿದೆ. ಈಗಾಗಲೇ ಭಡ್ತಿ ಪಡೆದವರು ಕೆಲವೇ ದಿನಗಳಲ್ಲಿ ಮತ್ತೆ ತಮ್ಮ ಹಿಂದಿನ ಸ್ಥಾನಕ್ಕೆ ತೆರಳಬೇಕಾಗುತ್ತದೆ.

ಸರಕಾರ ಸಿದ್ಧಪಡಿಸಿದ್ದ ಮಸೂದೆಗೆ ಮಂಗಳವಾರ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು, ಈ ಕುರಿತ ಮಾಹಿತಿಯನ್ನು ಸಂಸದೀಯ ವ್ಯವಹಾರಗಳ ಇಲಾಖೆಗೆ ಕಳುಹಿಸಿಕೊಟ್ಟಿದ್ದಾರೆ. ಅದರಂತೆ ಸರಕಾರ ಇನ್ನು ಕರ್ನಾಟಕ ಮೀಸಲು ಆಧಾರದ ಮೇಲೆ ಭಡ್ತಿ ಹೊಂದಿರುವ ಸರಕಾರಿ ನೌಕರರಿಗೆ ತತ್ಪರಿಣಾಮವಾದ ಜ್ಯೇಷ್ಠತೆಯನ್ನು ವಿಸ್ತರಿಸುವ ಕಾಯ್ದೆ ರೂಪಿಸಿ ಅದಕ್ಕೆ ನಿಯಮಾವಳಿಗಳನ್ನು ಸಿದ್ಧಪಡಿಸಬೇಕಾಗಿದೆ. ಅನಂತರ ಕಾಯ್ದೆ ಜಾರಿಯಾಗಲಿದೆ.

ಏನಿದು ವಿವಾದ?
ರಾಜ್ಯ ಸರಕಾರ 1978ರಿಂದಲೂ ಮೀಸಲಾತಿಯಡಿ ಭಡ್ತಿ ನೀಡುತ್ತಾ ಬಂದಿದ್ದು, ಇದನ್ನು ಕಾನೂನುಬದ್ಧಗೊಳಿಸುವ ಉದ್ದೇಶದಿಂದ 2002ರಲ್ಲಿ ಕಾಯ್ದೆ ಜಾರಿಗೊಳಿಸಿತ್ತು. ಆದರೆ ಬಿ.ಕೆ. ಪವಿತ್ರಾ ಮತ್ತಿತರರು ಇದನ್ನು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ್ದು, 2017ರ ಫೆ. 9ರಂದು ಸುಪ್ರೀಂ ಕೋರ್ಟ್‌ ಈ ಕಾಯ್ದೆ ರದ್ದುಗೊಳಿಸಿತ್ತು. ಭಡ್ತಿ ಮೀಸಲಾತಿಯಡಿ ನೀಡಿರುವ ಮೀಸಲು ಭಡ್ತಿಯನ್ನು ವಾಪಸ್‌ ಪಡೆದು ಅಂಥವರಿಗೆ ಹಿಂಭಡ್ತಿ ನೀಡಬೇಕು, ಮುಂಭಡ್ತಿಗೆ ಅರ್ಹರಾದವರ ಪಟ್ಟಿ ಸಿದ್ಧಪಡಿಸಿ ಭಡ್ತಿ ನೀಡಬೇಕು ಎಂದು ಆದೇಶಿಸಿತ್ತು.

ಇದರಿಂದ ಪಾರಾಗಲು ರಾಜ್ಯ ಸರಕಾರ ಕರ್ನಾಟಕ ಮೀಸಲು ಆಧಾರದ ಮೇಲೆ ಭಡ್ತಿ ಹೊಂದಿರುವ ಸರಕಾರಿ ನೌಕರರಿಗೆ ತತ್ಪರಿಣಾಮವಾದ ಜ್ಯೇಷ್ಠತೆಯನ್ನು ವಿಸ್ತರಿಸುವ ಮಸೂದೆ-2017 ರೂಪಿಸಿತ್ತು. ಈಗಾಗಲೇ ಮೀಸಲಿನಡಿ ಭಡ್ತಿ ಹೊಂದಿದವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಲು ಅವಕಾಶ ಕಲ್ಪಿಸುವುದು ಹಾಗೂ ನಿಯಮ ಬಾಹಿರವಾಗಿ ಭಡ್ತಿ ಸಿಕ್ಕಿದ್ದರೆ ಅಂಥವರನ್ನು ಸೂಪರ್‌ ನ್ಯೂಮರರಿ (ಸಂಖ್ಯಾಧಿಕ) ಕೋಟಾದಡಿ ಅದೇ ಹು¨ªೆಯಲ್ಲಿ ಮುಂದುವರಿಸುವ ಬಗ್ಗೆ ಮಸೂದೆಯಲ್ಲಿ ಪ್ರಸ್ತಾವಿಸಲಾಗಿತ್ತು.

Advertisement

ಮಸೂದೆಯನ್ನು ಸರಕಾರ ರಾಜ್ಯಪಾಲರಿಗೆ ಕಳುಹಿಸಿತ್ತಾದರೂ ಅವರದನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟಿದ್ದರು. ರಾಷ್ಟ್ರಪತಿಗಳ ಅಂಕಿತ ಬೀಳದೆ ಅದು ನನೆಗುದಿಗೆ ಬಿದ್ದಿತ್ತು. ಈ ಮಧ್ಯೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿತ್ತು. ಆ ಸಂದರ್ಭದಲ್ಲಿ ಸರಕಾರಕ್ಕೆ ಚಾಟಿ ಬೀಸಿದ್ದ ನ್ಯಾಯಾಲಯ ತನ್ನ ಆದೇಶ ಪಾಲಿಸಲು ಗಡುವು ವಿಧಿಸಿತ್ತು.

ಭಡ್ತಿ ಮೀಸಲಿನ ಮೂಲ ಕಾಯ್ದೆಯೇ ರದ್ದಾಗಿರು ವುದರಿಂದ ಪೂರಕ ಕಾಯ್ದೆ ರೂಪಿ ಸಲು ಅಸಾಧ್ಯ. ಹೀಗಾಗಿ ರಾಜ್ಯ ಸರಕಾರದ ಭಡ್ತಿ ಮೀಸಲು ಕುರಿತ ಹೊಸ ಕಾಯ್ದೆಯನ್ನೂ ಕೋರ್ಟ್‌ ನಲ್ಲಿ ಪ್ರಶ್ನಿಸಲಾಗುವುದು.
ಎಂ. ನಾಗರಾಜ್‌, ಅಲ್ಪಸಂಖ್ಯಾಕ, ಹಿಂದುಳಿದ, ಸಾಮಾನ್ಯ (ಅಹಿಂಸಾ) ವರ್ಗದ ನೌಕರರ ಸಂಘದ ಅಧ್ಯಕ್ಷ

ರಾಷ್ಟ್ರಪತಿ ಅಂಕಿತವನ್ನು ಸ್ವಾಗತಿಸುತ್ತೇನೆ. ಹಿಂದಿನ ಸರಕಾರದ ಅವಧಿಯಲ್ಲಿ ಉಭಯ ಸದನಗಳಲ್ಲಿ ಚರ್ಚಿಸಿ, ಅಂಗೀಕರಿಸಿ ರಾಷ್ಟ್ರಪತಿಗೆ ಕಳುಹಿಸಲಾಗಿತ್ತು.
ಡಾ| ಜಿ. ಪರಮೇಶ್ವರ್‌, ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next