Advertisement

ವರ್ಷದ ಬಳಿಕ ತಮಿಳುನಾಡಿಗೆ ಪೂರ್ಣ ರಾಜ್ಯಪಾಲರ ನೇಮಕ​​​​​​​

06:45 AM Oct 01, 2017 | |

ಹೊಸದಿಲ್ಲಿ: ರಾಜಕೀಯವಾಗಿ ತೂಗುಯ್ನಾಲೆಯಲ್ಲಿರುವ ತಮಿಳುನಾಡಿಗೆ ಬರೋಬ್ಬರಿ ಒಂದು ವರ್ಷದ ಬಳಿಕ ಪೂರ್ಣ ಪ್ರಮಾಣದ ರಾಜ್ಯಪಾಲರನ್ನು ನೇಮಿಸಲಾಗಿದೆ. ಈಶಾನ್ಯ ರಾಜ್ಯ ಅಸ್ಸಾಂ ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ರನ್ನು ದಕ್ಷಿಣ ರಾಜ್ಯ ತಮಿಳುನಾಡಿಗೆ ವರ್ಗಾಯಿಸಲಾಗಿದೆ.  ಸದ್ಯ ಮಹಾರಾಷ್ಟ್ರ ರಾಜ್ಯಪಾಲ ಸಿ.ಎಚ್‌.ವಿದ್ಯಾಸಾಗರ ರಾವ್‌ ತಮಿಳುನಾಡಿನ ಪ್ರಭಾರ ರಾಜ್ಯಪಾಲರಾಗಿದ್ದಾರೆ. 

Advertisement

ಜತೆಗೆ ಬಿಹಾರ, ಅರುಣಾಚಲ ಪ್ರದೇಶ, ಮೇಘಾಲಯ, ಅಸ್ಸಾಂಗೆ ರಾಜ್ಯ ಪಾಲರನ್ನು ಮತ್ತು ಕೇಂದ್ರಾಡಳಿತ ಪ್ರದೇಶ ವಾಗಿರುವ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹಕ್ಕೆ ನಿವೃತ್ತ ಅಡ್ಮಿ¾ರಲ್‌ ದೇವೇಂದ್ರ ಕುಮಾರ್‌ ಜೋಶಿ ಅವರನ್ನು ಲೆಫ್ಟಿನೆಂಟ್‌ ಗವರ್ನರ್‌ ಆಗಿ ನೇಮಕ ಮಾಡಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಆದೇಶ ಹೊರಡಿಸಿದ್ದಾರೆ.

ತಮಿಳುನಾಡು ಸಿಎಂ ಜಯ ಲಲಿತಾ ಆಸ್ಪತ್ರೆಗೆ ದಾಖಲಾಗಿ, ನಿಧನ ಹೊಂದಿದ ಸಂದರ್ಭದಲ್ಲಿಯೇ ಅಲ್ಲಿನ ರಾಜ್ಯಪಾಲರ ಹುದ್ದೆ ತೆರವಾಗಿತ್ತು. ರಾಜ್ಯಪಾಲರಾಗಿದ್ದ ಕೊನಿಜೇಟಿ ರೋಸಯ್ಯ 2016ರ ಆ.30ರಂದು ಹುದ್ದೆಯಿಂದ ನಿವೃತ್ತರಾದ ಬಳಿಕ ಹೊಸ ನೇಮಕ ಆಗಿರಲಿಲ್ಲ. ಕರ್ನಾಟಕದ ಬಿಜೆಪಿ ನಾಯಕ ಡಿ.ಎಚ್‌.ಶಂಕರಮೂರ್ತಿ ಯವರನ್ನು ಆ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗುತ್ತದೆ ಎಂದು ಬಿಜೆಪಿ ವಲಯದಲ್ಲಿಯೇ ವದಂತಿ ಹಬ್ಬಿತ್ತು. 

ಆದರೆ ಮಹಾರಾಷ್ಟ್ರ ರಾಜ್ಯಪಾಲ ಸಿ.ಎಚ್‌.ವಿದ್ಯಾಸಾಗರ ರಾವ್‌ರನ್ನು ಪ್ರಭಾರಿಯಾಗಿ ನೇಮಿಸಲಾಗಿತ್ತು. ಜಯಲಲಿತಾ ನಿಧನಾ ನಂತರ ಉಂಟಾ ಗಿರುವ ರಾಜಕೀಯ ತೂಗುಯ್ನಾಲೆಯ ಹಿನ್ನೆಲೆಯಲ್ಲಿ ಆ ರಾಜ್ಯಕ್ಕೆ ಪೂರ್ಣ ಪ್ರಮಾಣದ ರಾಜ್ಯಪಾಲರನ್ನು ನೇಮಕ ಮಾಡಬೇಕು ಎಂದು ರಾಜಕೀಯ ಪಕ್ಷಗಳು ಪದೇ ಪದೆ ಒತ್ತಾಯ ಮಾಡುತ್ತಿದ್ದುದರಿಂದ ಅಸ್ಸಾಂ ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ರನ್ನು ದಕ್ಷಿಣದ ರಾಜ್ಯಕ್ಕೆ ನೇಮಿಸಲಾಗಿದೆ.

ಲೋಕಸಭೆ ಮಾಜಿ ಸಂಸದ, ಬಿಜೆಪಿ ನಾಯಕ ಸತ್ಯಪಾಲ್‌ ಮಲಿಕ್‌ರನ್ನು ಬಿಹಾರದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಹಾಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿದ್ದುದರಿಂದ ಹುದ್ದೆಗೆ  ರಾಜೀನಾಮೆ ನೀಡಿದ್ದರು. ಮಲಿಕ್‌ ಬಿಜೆಪಿಯ ಕಿಸಾನ್‌ ಮೋರ್ಚಾದ ನಾಯಕರಾಗಿದ್ದರು. 1980-1984 ಮತ್ತು 1986- 1989ರ  ಅವಧಿಯಲ್ಲಿ ರಾಜ್ಯಸಭೆ ಸದಸ್ಯರಾಗಿದ್ದರು. ಏ.21 1990ರಿಂದ ನ.10, 1990ರ ವರೆಗೆ ಕೇಂದ್ರ ಪ್ರವಾಸೋದ್ಯಮ ಖಾತೆ ಸಹಾಯಕ ಸಚಿವರಾಗಿದ್ದರು. 

Advertisement

ಬಿಹಾರ ವಿಧಾನ ಪರಿಷತ್‌ನ ಮಾಜಿ ಸದಸ್ಯ ಗಂಗಾ ಪ್ರಸಾದ್‌ರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. 1994ರಿಂದ ಸತತವಾಗಿ 18 ವರ್ಷಗಳ ಕಾಲ ಎಂಎಲ್‌ಸಿಯಾಗಿದ್ದಾರೆ. ಬಿಹಾರ ಪರಿಷತ್‌ನ ವಿಪಕ್ಷ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 

ದಿಲ್ಲಿ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದ ಜಗದೀಶ್‌ ಮುಖೀ ಅಸ್ಸಾಂನ ನೂತನ ರಾಜ್ಯಪಾಲ. ದಿಲ್ಲಿ ವಿಧಾನಸಭೆಯ ವಿಪಕ್ಷ ನಾಯಕ ಮತ್ತು ಹಣಕಾಸು ಸಚಿವರಾಗಿದ್ದರು. 2008ರಲ್ಲಿ ಶಿಕ್ಷಣ ಸಚಿವರಾಗಿದ್ದ ವೇಳೆ ಎಂಟು ತಿಂಗಳಲ್ಲಿ ಗುರು ಗೋವಿಂದ ಸಿಂಗ್‌ ಇಂದ್ರಪ್ರಸ್ತ ವಿವಿಯನ್ನು ಆರಂಭಿಸಿದ್ದರು. ದಿಲ್ಲಿಯ ಜನಕಪುರಿ ವಿಧಾನಸಭಾ ಕ್ಷೇತ್ರದಿಂದ 7 ಬಾರಿ ಆಯ್ಕೆಯಾಗಿದ್ದರು. 

ನೌಕಾಪಡೆಯ ಮುಖ್ಯಸ್ಥರಾಗಿ 2012 ರಿಂದ 2014ರ ವರೆಗೆ ಸೇವೆ ಸಲ್ಲಿಸಿದ್ದ ಅಡ್ಮಿರಲ್‌ ದೇವೇಂದ್ರ ಕುಮಾರ್‌ ಜೋಷಿ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಸಮೂಹದ ಲೆಫ್ಟಿನೆಂಟ್‌ ಗವರ್ನರ್‌ ಆಗಿ ನೇಮಕಗೊಂಡಿದ್ದಾರೆ. ಐಎನ್‌ಎಸ್‌ ಸಿಂಧೂರತ್ನದಲ್ಲಿ ಅಗ್ನಿ ಆಕಸ್ಮಿಕ ಉಂಟಾದಾಗ ರಾಜೀನಾಮೆ ನೀಡಿದ್ದರು. ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯ ಹಳೆ ವಿದ್ಯಾರ್ಥಿಯಾಗಿರುವ ಅವರಿಗೆ ಪರಮ್‌ ವಿಶಿಷ್ಟ್ ಸೇವಾ ಮೆಡಲ್‌ (ಪಿವಿಎಸ್‌ಎಂ), ಅತಿ ವಿಶಿಷ್ಟ್ ಸೇವಾ ಮೆಡಲ್‌ (ಎವಿಎಸ್‌ಎಂ), ಯುದ್ಧ ಸೇವಾ ಮೆಡಲ್‌, ನೌ ಸೇನಾ ಮೆಡಲ್‌ ಸೇರಿದಂತೆ ಹಲವು ಗೌರವಗಳು ದೊರೆತಿವೆ.

ಹೈಜಾಕ್‌ ತಡೆಯಲು ರಚನೆ ಮಾಡಲಾಗಿರುವ ವಿಶೇಷ ಕಾರ್ಯಪಡೆಯ ಕಮಾಂಡೋ ಆಗಿದ್ದ ನಿವೃತ್ತ ಬ್ರಿಗೇಡಿಯರ್‌ ಡಾ| ಬಿ.ಡಿ.ಮಿಶ್ರಾ ಅರುಣಾಚಲ ಪ್ರದೇಶದ ಹೊಸ ರಾಜ್ಯಪಾಲರಾಗಲಿದ್ದಾರೆ. 1993ರಲ್ಲಿ ಇಂಡಿಯನ್‌ ಏರ್‌ಲೈನ್ಸ್‌ ವಿಮಾನ ಅಪಹರಣಗೊಂಡಿದ್ದಾಗ ಅವರು ಗುರುತರವಾಗಿ ಕಾರ್ಯನಿರ್ವಹಿಸಿದ್ದರು. ಸೇವಾ ನಿವೃತ್ತಿಯ ಬಳಿಕ ಕಾರ್ಗಿಲ್‌ ಕಾರ್ಯಾಚರಣೆಯಲ್ಲಿಯೂ ಅವರು ಸ್ವಯಂ ಪ್ರೇರಿತವಾಗಿ ಕಾರ್ಯನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next