ಬ್ರೆಸಿಲಿಯಾ: ಕೋವಿಡ್ ಸೋಂಕು ಕಡಿಮೆಯಾಗುವ ಮೊದಲೇ ಲಾಕ್‌ಡೌನ್ ಹಿಂಪಡೆಯುವ ಬಗ್ಗೆ ವಿಶ್ವಸಂಸ್ಥೆಯು ಲ್ಯಾಟಿನ್ ಅಮೆರಿಕ ದೇಶಗಳಿಗೆ ಎಚ್ಚರಿಕೆ ನೀಡಿದ ಬೆನ್ನಿಗೇ, ತಾನು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರ ನಡೆಯುವುದಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸಾನಾರೋ ಬೆದರಿಕೆಯೊಡ್ಡಿದ್ದಾರೆ.
ಕೋವಿಡ್ ಸಾವಿನ ಸಂಖ್ಯೆಯಲ್ಲಿ ಗುರುವಾರ ಇಟೆಲಿಯನ್ನು ಮೀರಿ ಬ್ರಜಿಲ್ ಸಾಗಿದೆ. ಈ ನಡುವೆ ಬ್ರಜಿಲ್‌ನಲ್ಲಿ ಲಾಕ್‌ಡೌನ್ ತೆರವು ಬಗ್ಗೆ ಅಲ್ಲಿನ ಸರಕಾರ ಆಸಕ್ತಿ ಹೊಂದಿದ್ದು, ಆರ್ಥಿಕ ವೆಚ್ಚವು ಸಾರ್ವಜನಿಕ ಆರೋಗ್ಯದ ಅಪಾಯವನ್ನು ದಾಟಿ ಮುಂದುವರಿಯುತ್ತಿದೆ ಎಂದು ಅಧ್ಯಕ್ಷರು ವಾದಿಸುತ್ತಿದ್ದಾರೆ.
ಲ್ಯಾಟಿನ್ ಅಮೆರಿಕ ದೇಶಗಳ ಸಾಲಿನಲ್ಲೇ ಬ್ರಜಿಲ್ ಮತ್ತು ಮೆಕ್ಸಿಕೋದಲ್ಲಿ ಹೆಚ್ಚು ಜನಸಂಖ್ಯೆಯಿದ್ದು, ಅಲ್ಲಿ ಹೊಸ ಸೋಂಕಿತರೂ ಹೆಚ್ಚಾಗುತ್ತಿದ್ದಾರೆ. ಜತೆಗೆ ಪೆರು, ಕೊಲಂಬಿಯಾ, ಚಿಲಿ ಮತ್ತು ಬೊಲಿವಿಯಾದಂತಹ ದೇಶಗಳಲ್ಲಿಯೂ ಹೆಚ್ಚಾಗುತ್ತಿದೆ.
ಸುಮಾರು 1.1 ದಶಲಕ್ಷಕ್ಕೂ ಹೆಚ್ಚು ಲ್ಯಾಟಿನ್ ಅಮೆರಿಕನ್ನರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಆದಕಾರಣವೇ ಕೋವಿಡನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿದ್ದಾರೆ. ಆದರೆ ಬೊಲ್ಸಾನಾರೋ ಮಾತ್ರ ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ವಿಶೇಷವೆಂದರೆ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್‌ಗಳನ್ನು ಬೆಂಬಲಿಸಿದ್ದ ಕೆಲವು ರಾಜಕಾರಣಿಗಳು ಕೂಡ ದೇಶದಲ್ಲಿ ಹಸಿವು ಮತ್ತು ಬಡತನ ಹೆಚ್ಚಾದಂತೆ ಲಾಕ್‌ಡೌನ್ ತೆರವಿನ ಕುರಿತು ಒಲವು ವ್ಯಕ್ತಪಡಿಸುತ್ತಿದ್ದಾರೆ.
ಬ್ರಜಿಲಿಯನ್ನರನ್ನು ಸಾಮಾನ್ಯ ಜ್ವರವೊಂದು ಕೊಲ್ಲುತ್ತಿದೆ ಎಂದು ಸರಕಾರ 100 ದಿನಗಳಿಂದ ಹೇಳುತ್ತಿದೆ ಎಂದು ಬ್ರಜಿಲಿಯನ್ ದಿನಪತ್ರಿಕೆ ಯೊಂದು ಹೇಳಿದೆ. ಜತೆಗೆ ನೀವು ಈ ಸುದ್ದಿಯನ್ನು ಓದುತ್ತಿರುವಾಗ ಮತ್ತೋರ್ವ ಬ್ರಜಿಲ್ ಪ್ರಜೆ ಇದೇ ಕೋವಿಡ್ ನಿಂದ ಸಾವಿಗೀಡಾಗಿರಬಹುದು ಎಂದು ಹೇಳಿದೆ.
ಬ್ರಜಿಲ್ ಕಳೆದು ಮೂರ್‍ನಾಲ್ಕು ದಿನಗಳಿಂದ ಕೋವಿಡ್ ಸಾವಿನ ಸಂಖ್ಯೆಯಲ್ಲಿ ದಿನಂಪ್ರತಿ ಹೊಸ ದಾಖಲೆಯನ್ನು ಬರೆಯುತ್ತಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಹೇಳಿದೆ. ಶುಕ್ರವಾರದ ಅಂಕಿಅಂಶ ಪ್ರಕಾರ ಅಲ್ಲಿ 6,18,554 ಸೋಂಕಿತರು ಮತ್ತು 34,072 ಮಂದಿ ಸಾವಿಗೀಡಾಗಿದ್ದಾರೆ.
ಬ್ರಜಿಲ್‌ನಲ್ಲಿ ಸೋಂಕಿತರು ಮತ್ತು ಸಾವಿನ ಸಂಖ್ಯೆ ದಿನ ದಿಂದ ದಿನಕ್ಕೆ ಹೆಚ್ಚುತ್ತಿ ದ್ದರೂ ಅಲ್ಲಿ ಸಾಮಾ ಜಿಕ ಅಂತರ ಕಾಪಾಡುವ ಹಾಗೂ ಲಾಕ್‌ಡೌನ್ ಆದೇಶ ವನ್ನು ಹಿಂಪಡೆ ಯುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ಮಾರ್ಗರೆಟ್ ಹ್ಯಾರಿಸ್ ಅವರನ್ನು ಕೇಳಿದಾಗ, ಸೋಂಕಿತರ ಸಂಖ್ಯೆ ಕಡಿಮೆ ಯಾಗುವುದೇ ಲಾಕ್‌ಡೌನ್ ಹಿಂಪಡೆಯಲು ಪ್ರಮುಖ ಮಾನದಂಡವಾಗಬೇಕು ಎಂದಿದ್ದಾರೆ.
ಜಿನೀವಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಕ್ರಾಮಿಕ ರೋಗವು ಲ್ಯಾಟಿನ್ ಅಮೆರಿಕದಲ್ಲಿ ತುಂಬಾ ಆಳವಾಗಿ ಬೇರೂರಿದೆ ಎಂದು ಹೇಳಿದರು.