Advertisement
ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಸನ್ಯಾಸಾಶ್ರಮ ಸ್ವೀಕರಿಸಿ 80ನೇ ವರ್ಷವಾದ ನಿಮಿತ್ತ ಗುರುವಾರ ಶ್ರೀ ಪೇಜಾವರ ಮಠಕ್ಕೆ ಆಗಮಿಸಿ ಸ್ವಾಮೀಜಿಯವರಿಂದ ಗೌರವ ಸ್ವೀಕರಿಸಿ ಮತ್ತು ಗೌರವ ಸಲ್ಲಿಸಿ ಮಾತನಾಡಿದ ರಾಷ್ಟ್ರಪತಿಗಳು, ಜಗತ್ತಿನಲ್ಲಿ ಮೊದಲು ಮಾನವರ ನಡುವೆ ಪ್ರೀತಿ ಬಾಂಧವ್ಯ ಇನ್ನಷ್ಟು ಗಟ್ಟಿಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಪೇಜಾವರ ಶ್ರೀಗಳು ಮಾತನಾಡಿ, ಶ್ರೀಕೃಷ್ಣ ಜಗತ್ಪತಿ. ರಾಷ್ಟ್ರದ ಪ್ರತಿನಿಧಿ ರಾಷ್ಟ್ರಪತಿ. ಶ್ರೀಕೃಷ್ಣನ ಅನುಗ್ರಹ ರಾಷ್ಟ್ರಪತಿಗಳಿಗಾದರೆ ಅದು ರಾಷ್ಟ್ರಕ್ಕೆ ಅನುಗ್ರಹವಾದಂತೆ. ಗೋವಿಂದ ನಾಮದ ತತ್ಸಮ ರೂಪವಾದ ಕೋವಿಂದರ ಮೂಲಕ ರಾಷ್ಟ್ರದ ಕಲ್ಯಾಣವಾಗಲಿ ಎಂದು ಹಾರೈಸಿದರು.
Related Articles
ಶ್ರೀಕೃಷ್ಣ ಮಠ, ಇಲ್ಲಿನ ವಿಶಿಷ್ಟ ಪರ್ಯಾಯ ಪೂಜಾ ಪದ್ಧತಿ ಮತ್ತು ಮಧ್ವಾಚಾರ್ಯರ ಕುರಿತು ವಿವರಿಸಿದ ಶ್ರೀಗಳು, ಶಂಕರ ಜಯಂತಿಯನ್ನು ತಣ್ತೀಜ್ಞಾನ ದಿನಾಚರಣೆಯಾಗಿ ಘೋಷಿಸಿದಂತೆ ರಾಮಾನುಜ, ಮಧ್ವರ ಜಯಂತಿಯನ್ನು ಭಕ್ತಿ ದಿನಾಚರಣೆಯಾಗಿ ಘೋಷಿಸಬೇಕು. ಮಧ್ವರ ಜನ್ಮಸ್ಥಳವಾದ ಪಾಜಕದಲ್ಲಿ ಆಧ್ಯಾತ್ಮಿಕ, ಲೌಕಿಕ ಶಿಕ್ಷಣವನ್ನು ಒಳಗೊಂಡ ಮಧ್ವಾಚಾರ್ಯ ವಿ.ವಿ. ಸ್ಥಾಪಿಸಬೇಕೆಂದಿದ್ದೇವೆ. ಇದಕ್ಕೆ ಸರ್ವರ ಸಹಕಾರ ಬೇಕು ಎಂದು ಕೋರಿದರು.
ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಕಿರಿಯ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
Advertisement
ಶ್ರೀಗಳು ಶತಾಯುಷಿಗಳಾಗಲಿ
“ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಇನ್ನು 11 ವರ್ಷಗಳಲ್ಲಿ ಶತಾಯುಷಿಯಾಗುವುದನ್ನು ನಾವೆಲ್ಲರೂ ಕಾಣುವಂತಾಗಬೇಕು, ಆ ಸಂಭ್ರಮವನ್ನು ಜನರೂ ಅನುಭವಿಸುವಂತಾಗಬೇಕು’ ಎಂದು ಭಾವತುಂಬಿ ಶುಭ ಹಾರೈಸಿದವರು ರಾಮನಾಥ ಕೋವಿಂದ್. ‘ಶ್ರೀ ಕೃಷ್ಣ ಮಠಕ್ಕೆ ಬರಬೇಕೆಂಬ ಬಹಳ ದಿನಗಳ ಬೇಡಿಕೆ ಇಂದು ಈಡೇರಿರುವುದು ಸಂತೋಷ ತಂದಿದೆ. ಪೇಜಾವರ ಸ್ವಾಮೀಜಿಯವರ ಬಗ್ಗೆ ಕೇಂದ್ರ ಸಚಿವೆ ಉಮಾಭಾರತಿ ತಿಳಿಸಿದ್ದರು. ಇತ್ತೀಚೆಗೆ ಸ್ವಾಮೀಜಿಯವರ ಆರೋಗ್ಯ ಚೆನ್ನಾಗಿರಲಿಲ್ಲವೆಂದೂ ಕೇಳಿದ್ದೆ. ಆದರೆ ಮತ್ತೆ ಆರೋಗ್ಯ ಪೂರ್ಣರಾಗಿ ಚೈತನ್ಯದಿಂದ ಓಡಾಡುತ್ತಿರುವುದು ಸಂತಸ ಮೂಡಿಸಿದೆ. ಅವರ ಧಾರ್ಮಿಕ ಮತ್ತು ಸಾಮಾಜಿಕ ಕೈಂಕರ್ಯಗಳು ಶ್ಲಾಘನಾರ್ಹ ಎಂದರು. ಲಘು ಟಿಪ್ಪಣಿ
ರಾಷ್ಟ್ರದ ಪ್ರಥಮ ಪ್ರಜೆಗೆ ಗೌರವ
ರಾಷ್ಟ್ರಪತಿಯವರನ್ನು ಪೇಜಾವರ ಮಠದೆದುರು ವಿದ್ವಾಂಸರು ವೇದಘೋಷಗಳಿಂದ ಸ್ವಾಗತಿಸಿದರು. ಪೇಜಾವರ ಮಠದಲ್ಲಿ ಪೇಜಾವರ ಸ್ವಾಮೀಜಿಯವರು ಪಟ್ಟದ ದೇವರಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದ ಬಳಿಕ ರಾಷ್ಟ್ರಪತಿಯವರನ್ನು ಅಭಿನಂದಿಸಿದರು. ರಾಷ್ಟ್ರಪತಿಯವರನ್ನು ಯಕ್ಷಗಾನದ ಕಿರೀಟ, ಪಂಚಲೋಹದ ಶ್ರೀಕೃಷ್ಣ ಪ್ರತಿಮೆ ಇರುವ ಅಟ್ಟೆ ಪ್ರಭಾವಳಿ, ಶಾಲಿನೊಂದಿಗೆ ಸಮ್ಮಾನಿಸಲಾಯಿತು. ಪೇಜಾವರ ಶ್ರೀಗಳು ಬರೆದ ಗೀತಾ ಸಾರೋದ್ಧಾರ ಸಹಿತ 12 ಪುಸ್ತಕಗಳನ್ನು ನೀಡಲಾಯಿತು. ರಾಷ್ಟ್ರಪತಿಯವರು ಸ್ವಾಮೀಜಿಯವರಿಗೆ ಶಾಲು ಹೊದೆಸಿ ಗೌರವಿಸಿದರು. ಸವಿತಾ ಕೋವಿಂದ್ ಅವರಿಗೆ ಸೀರೆ, ದೇವರಿಗೆ ಸಮರ್ಪಿಸಿದ ಪುಷ್ಪಗಳನ್ನು ಪ್ರಸಾದ ರೂಪವಾಗಿ ನೀಡಲಾಯಿತು. ಪೇಜಾವರ ಸ್ವಾಮೀಜಿ ಜೀವನ ಸಾಧನೆ ಕುರಿತು ಬೆಂಗಳೂರಿನ ಶೇಷಗಿರಿಯವರು ನಿರ್ಮಿಸಿದ ನಾಲ್ಕು ನಿಮಿಷಗಳ ಸಾಕ್ಷ ಚಿತ್ರವನ್ನು ರಾಷ್ಟ್ರಪತಿಯವರು ವೀಕ್ಷಿಸಿದರು. ಉಡುಪಿಗೆ ಮೊದಲ ಭೇಟಿ
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇದೇ ಮೊದಲ ಬಾರಿಗೆ ಉಡುಪಿಗೆ ಆಗಮಿಸಿದರು. ಆದಿ ಉಡುಪಿ ಹೆಲಿಪ್ಯಾಡ್‌ಗೆ ಆಗಮಿಸಿದ ರಾಷ್ಟ್ರಪತಿಗಳನ್ನು ಕರ್ನಾಟಕ ರಾಜ್ಯಪಾಲ ವಜೂಭಾ ವಾಲಾ, ನಾಗಾಲ್ಯಾಂಡ್ ರಾಜ್ಯಪಾಲ ಪದ್ಮನಾಭ ಆಚಾರ್ಯ, ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮತ್ತಿತರರು ಸ್ವಾಗತಿಸಿದರು. ಬಾರದ ಉಮಾ ಭಾರತಿ
ರಾಷ್ಟ್ರಪತಿಯವರ ಕಾರ್ಯಕ್ರಮವನ್ನು ನಿಗದಿಪಡಿಸಿದ್ದು ಪೇಜಾವರ ಸ್ವಾಮೀಜಿಯವರ ಶಿಷ್ಯೆ, ಕೇಂದ್ರ ಸಚಿವೆ ಉಮಾ ಭಾರತಿ. ಅವರೂ ಗುರುವಾರ ಉಡುಪಿಗೆ ಬರುವುದೆಂದು ನಿಗದಿಯಾಗಿದ್ದರೂ ಕೊನೆಗೆ ರದ್ದಾಯಿತು. “ನಿನ್ನೆ ರಾತ್ರಿ ಉಮಾ ಭಾರತಿಯವರು ಲೋಕಸಭೆ ಅಧಿವೇಶನದ ಕಾರಣದಿಂದ ಬರಲಾಗದ ಬಗ್ಗೆ ತಿಳಿಸಿದರು’ ಎಂದು ರಾಷ್ಟ್ರಪತಿಯವರು ಪೇಜಾವರ ಶ್ರೀಗಳಿಗೆ ತಿಳಿಸಿದರು. ಅವರ ಗೈರು ಎದ್ದು ಕಾಣುತ್ತಿತ್ತು. ಲೋಕಸಭೆ ಕಲಾಪ ಕಾರಣ
ಉಮಾ ಭಾರತಿಯವರ ಗೈರಿಗೆ ಲೋಕಸಭೆ ಕಲಾಪ ಮತ್ತು ವಿಪ್ ಕಾರಣ.ಇದನ್ನು ತಿಳಿಸಿದ ಪೇಜಾವರ ಶ್ರೀಗಳು, “ಲೋಕಸಭೆ ಅಧಿವೇಶನದಲ್ಲಿ ತಲಾಖ್ ಕುರಿತ ಮಹತ್ವದ ಮಸೂದೆ ಚರ್ಚೆಗೆ ಬರುತ್ತಿರುವುದರಿಂದ ಅವರು ಬರಲಿಲ್ಲ’ ಎಂದರು. ಸನ್ಯಾಸಾಶ್ರಮದ 80ನೇ ವರ್ಧಂತಿ ಸಂದರ್ಭ ರಾಷ್ಟ್ರಪತಿಯವರು ಅಭಿನಂದಿಸಿದ್ದಕ್ಕೆ ಏನನ್ನಿಸುತ್ತಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ “ನಮಗೇನೂ ಅಪೇಕ್ಷೆ ಇರಲಿಲ್ಲ. ಉಮಾಶ್ರೀ ಭಾರತಿಯವರು ಇದನ್ನು ಏರ್ಪಡಿಸಿದರು’ ಎಂದರು. ಮಸೂದೆಗೆ ಸಂಬಂಧಿಸಿ ಮತದಾನ ನಡೆಯುವ ಕಾರಣ ವಿಪ್ ಜಾರಿಗೊಳಿಸಲಾಗಿತ್ತು. ಹೀಗಾಗಿ ಉಮಾ ಭಾರತಿ ಮತ್ತು ಸ್ಥಳೀಯ ಸಂಸದೆ ಶೋಭಾ ಕರಂದ್ಲಾಜೆ ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಹುರಿದ ಬಾದಾಮಿ, ಗೇರುಬೀಜ
ರಾಷ್ಟ್ರಪತಿಯವರಿಗೆ ಪೇಜಾವರ ಮಠದಲ್ಲಿ ಚಹಾ, ಕಾಫಿ, ಹುರಿದ ಬಾದಾಮಿ ಮತ್ತು ಗೇರುಬೀಜ, ಬಾಳೆಕಾಯಿ ಚಿಪ್ಸ್‌ಗಳನ್ನು ವ್ಯವಸ್ಥೆಗೊಳಿಸಲಾಗಿತ್ತು. ಶಿಷ್ಟಾಚಾರ ಪ್ರಕಾರ ರಾಷ್ಟ್ರಪತಿಯವರ ಭದ್ರತಾ ಸಿಬಂದಿ ಪರೀಕ್ಷಿಸಿದ್ದರು. ಸ್ವಾಮೀಜಿಯವರು ತಂಗುವ ಕೋಣೆಯನ್ನು ಬುಧವಾರ ರಾತ್ರಿಯೇ ರಾಷ್ಟ್ರಪತಿಯವರಿಗಾಗಿ ಬಿಟ್ಟುಕೊಡಲಾಗಿತ್ತು. ಐಬಿಗೆ ಹೋಗದ ರಾಷ್ಟ್ರಪತಿ
ರಾಷ್ಟ್ರಪತಿಯವರಿಗಾಗಿ ಪ್ರವಾಸಿ ಮಂದಿರವನ್ನು ಸಿದ್ಧಗೊಳಿಸಲಾಗಿದ್ದರೂ ಅವರು ಅಲ್ಲಿಗೆ ಭೇಟಿ ಕೊಡಲಿಲ್ಲ. ಆದರೆ ಐಬಿಗೆ ಸುಣ್ಣ ಬಣ್ಣ ಬಳಿದು ಸಿಬಂದಿ ಸುಂದರಗೊಳಿಸಿದ್ದರು.