ಬೆಂಗಳೂರು: ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕೆಂಡ ಕಾರುತ್ತಿರುವುದರ ಮಧ್ಯೆಯೇ ಸಿಎಂ ಸಿದ್ದರಾಮಯ್ಯ ಬುಧವಾರ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು “ಸೌಜನ್ಯ”ದ ಭೇಟಿ ಮಾಡಲಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಸಿದ್ದರಾಮಯ್ಯ ಭೇಟಿ ಮಾಡುವರು.
ಸುದ್ದಿಗಾರರ ಜತೆ ಮಾತನಾಡಿರುವ ಅವರು, ತಮ್ಮ ದೆಹಲಿ ಪ್ರವಾಸದ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಷ್ಟ್ರಪತಿಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತಿದ್ದು, ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ಕೇಂದ್ರ ಆಹಾರ ಸಚಿವರನ್ನು ಭೇಟಿ ಮಾಡಿ ಅಕ್ಕಿ ನೀಡುವಂತೆ ಮನವಿ ಮಾಡಲಿದ್ಧಾರೆಂದು ತಿಳಿಸಿದರು. ಪ್ರಧಾನಿ ಮೋದಿ ಭೇಟಿಗೂ ಸಿಎಂ ಕಾರ್ಯಾಲಯದಿಂದ ಪತ್ರ ಬರೆಯಲಾಗಿತ್ತು. ಆದರೆ ಪ್ರಧಾನಿ ವಿದೇಶ ಪ್ರವಾಸದ ಹಿನ್ನೆಲೆಯಲ್ಲಿ ಸಮಯಾವಕಾಶ ಲಭಿಸಿಲ್ಲ.
ಅಕ್ಕಿ ಖರೀದಿಗೆ ಪ್ರಯತ್ನ, ವಿತರಣೆ ವಿಳಂಬ ಸಾಧ್ಯತೆ: ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ಛತ್ತೀಸಗಢ ರಾಜ್ಯದೊಂದಿಗೆ ಅಕ್ಕಿ ಖರೀದಿ ಬಗ್ಗೆ ಚರ್ಚಿಸಲಾಗಿದೆ. ರಾಜ್ಯಕ್ಕೆ 2,28,000 ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಬೇಕಾಗಿದೆ. ಛತ್ತೀಸಗಢದಿಂದ ಅಕ್ಕಿ ಖರೀದಿಸಿದರೆ ಸಾಗಾಣಿಕೆಯೂ ಸೇರಿ, ಎಫ್ಸಿಐಗಿಂತ ಹೆಚ್ಚು ಹಣ ನೀಡಬೇಕಾಗುತ್ತದೆ. ತೆಲಂಗಾಣದಲ್ಲಿ ಅಕ್ಕಿ ದಾಸ್ತಾನು ಲಭ್ಯವಿಲ್ಲವೆಂದು ತಿಳಿಸಿದ್ದು, ಆಂಧ್ರಪ್ರದೇಶದೊಂದಿಗೆ ನಮ್ಮ ರಾಜ್ಯದ ಅಧಿಕಾರಿಗಳು ಚರ್ಚಿಸುತ್ತಿದ್ಧಾರೆ. ಭಾರತ ಸರ್ಕಾರದ ಮೂರು ಸಂಸ್ಥೆಗಳಾದ ಎನ್‌ಸಿಸಿಎಫ್, ನಾಫೆಡ್ ಹಾಗೂ ಕೇಂದ್ರ ಭಂಡಾರಗಳಿಂದ ಅಕ್ಕಿ ಖರೀದಿಗೆ ದರಪಟ್ಟಿ ಕರೆಯಲಾಗಿದೆ. ಅಕ್ಕಿ ಖರೀದಿ ಬಗ್ಗೆ ಎಫ್ಸಿಐ ಗೆ ಜೂನ್ 9 ರಂದು ಪತ್ರ ಬರೆಯಲಾಗಿದ್ದು, ಅವರು ತಮ್ಮಲ್ಲಿ 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಇದ್ದು, ರಾಜ್ಯಕ್ಕೆ ಸರಬರಾಜು ಮಾಡಲಾಗುವುದು ಎಂದು ಜೂನ್ 12 ರಂದು ತಿಳಿಸಿದ್ದರು. ಆದರೆ ಈಗ ನಿರಾಕರಿಸಿದ್ದಾರೆ ಎಂದು ಆರೋಪಿಸಿದರು.
ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿದ್ದೇವೆ. ನಾವು ಕೊಟ್ಟೇ ಕೊಡುತ್ತೇವೆ. ಸ್ವಲ್ಪ ವಿಳಂಬವಾಗಬಹುದು ಅಷ್ಟೇ ಎಂದರು.
ಇದು ದ್ವೇಷದ ರಾಜಕಾರಣ, ಬಡವರ ವಿರೋಧಿ ಕ್ರಮ. ದ್ವೇಷದ ರಾಜಕಾರಣ ಮಾಡುವ ಇವರಿಗೆ ಮಾನವೀಯತೆ ಇದೆಯೇ? ಕೇಂದ್ರದ ಈ ನಡೆಯನ್ನು ಖಂಡಿಸಿ ನಮ್ಮ ಪಕ್ಷದಿಂದ ಎಲ್ಲೆಡೆ ಪ್ರತಿಭಟನೆ ಮಾಡಲಾಗಿದೆ. ದುರುದ್ದೇಶದಿಂದ ಈ ಕೆಲಸ ಮಾಡಿದ್ಧಾರೆ. ಹಣ ನೀಡಿ ಅಕ್ಕಿಯನ್ನು ಪಡೆಯುತ್ತೇವೆ. ನಾವು ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆಂದು ಪ್ರಧಾನಿ ನರೇಂದ್ರ ಮೋದಿಯವರು ಯಾವಾಗಲೂ ಹೇಳುತ್ತಾರೆ. ಇದೇ ಇವರ ಸಹಕಾರಿ ಒಕ್ಕೂಟ ವ್ಯವಸ್ಥೆಯೇ? ಎಂದು ಪ್ರಶ್ನಿಸಿದರು.
ಮಾತೆತ್ತಿದರೆ ಆಹಾರ ಭದ್ರತಾ ಕಾಯ್ದೆ ಎನ್ನುವ ಕೇಂದ್ರ ಸರ್ಕಾರ, ಈ ಕಾಯ್ದೆಯನ್ನು ಜಾರಿಗೆ ತಂದಿದ್ದು ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಎನ್ನುವುದನ್ನು ಮರೆಯುತ್ತಿದೆ. ಈ ಕಾಯ್ದೆ ಬಂದಿದ್ದರಿಂದ 5 ಕೆಜಿ ಅಕ್ಕಿ ಕೊಡುವುದು ಮುಂದುವರಿದಿದೆ. ಅಕ್ಕಿ ಕೊಡಿ ಎಂದು ಕೇಳಿದ್ದೇವೆ. ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿದ್ದೇವೆ. ನಾವು ಕೊಟ್ಟೇ ಕೊಡುತ್ತೇವೆ. ಸ್ವಲ್ಪ ವಿಳಂಬವಾಗಬಹುದು ಅಷ್ಟೇ ಎಂದರು.