ವಾಷಿಂಗ್ಟನ್: 2020ರ ನವೆಂಬರ್ 3 ರಂದು ನಡೆಯಲಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡುವ ಸಾಧ್ಯತೆಯ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿದ್ದಾರೆ. ಮಾತ್ರವಲ್ಲದೆ ಒಂದು ವೇಳೆ ಮೇಲ್ ಇನ್ ಅಥವಾ ಅಂಚೆ ಮತದಾನ ನಡೆದರೆ 2020ರ ಚುನಾವಣೆಯೂ ಇತಿಹಾಸದಲ್ಲೇ ಅತ್ಯಂತ ವಂಚನೆಯಿಂದ ಕೂಡಿದ ಚುನಾವಣೆಯಾಗುವ ಅಪಾಯವಿದೆ ಎಂದಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ ಟ್ರಂಪ್, “ಯುನಿವರ್ಸಲ್ ಮೇಲ್-ಇನ್ ಮತದಾನದೊಂದಿಗೆ 2020 ಇತಿಹಾಸದಲ್ಲಿ ಅತ್ಯಂತ ಮೋಸದ ಚುನಾವಣೆಯಾಗಿ ಕುಖ್ಯಾತಿ ಪಡೆಯಲಿದೆ. ನಕಲಿ ಮತದಾನ ನಡೆಯುವ ಸಾಧ್ಯತೆ ದಟ್ಟವಾಗಿದೆ. ಇದು ಅಮೆರಿಕಾಕ್ಕೆ ದೊಡ್ಡ ಮುಜುಗರವನ್ನುಂಟು ಮಾಡುತ್ತದೆ. ಕೋವಿಡ್ ವೈರಸ್ ಹರುಡುವುದು ಕಡಿಮೆಯಾದ ಕೂಡಲೇ ಮತ್ತು ಜನರು ಸರಿಯಾಗಿ, ಸುರಕ್ಷಿತರಾಗಿ ಮತ ಚಲಾಯಿಸುವರೆಗೂ ಚುನಾವಣೆಯನ್ನು ಮುಂದೂಡಬಹುದೇ ? ಎಂದು ಪ್ರಶ್ನಿಸಿದ್ದಾರೆ.
ಆದರೇ ಈ ಪ್ರಸ್ಥಾಪವನ್ನು ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಎರಡೂ ಪಕ್ಷದ ಸದಸ್ಯರೂ ತಕ್ಷಣ ತಿರಸ್ಕರಿಸಿದ್ದಾರೆ. ಸದ್ಯ ಅಮೆರಿಕಾದಲ್ಲಿ ಕೋವಿಡ್ ವೈರಸ್ ಗೆ 1.50 ಲಕ್ಷಕ್ಕಿಂತ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಆರ್ಥಿಕತೆ ಕುಸಿದಿದೆ. ವರ್ಣಭೇದ ನೀತಿಯ ವಿರುದ್ದ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆಯುತ್ತಿದೆ. ಇದರ ಬೆನ್ನಲ್ಲೆ ಟ್ರಂಪ್ ಚುನಾವಣೆ ಮುಂದಕ್ಕೆ ಹಾಕುವ ಪ್ರಸ್ತಾಪ ಹಾಕಿರುವುದು ಮಹತ್ವದೆನಿಸಿದೆ.
ಇದೇ ನ. 3ರಂದು ಅಮೆರಿಕಾದ ಅಧ್ಯಕ್ಷೀಯ ಚುನಬಾವಣೆ ನಡೆಯಲಿದ್ದು ಟ್ರಂಪ್ ಅವರು ಡೆಮಾಕ್ರಟಿಕ್ ಪಕ್ಷದ ಜೊ ಬಿಡೆನ್ ಅವರನ್ನು ಎದುರಿಸಲಿದ್ದಾರೆ. ಆದರೇ ಚುನಾವಣೆಯನ್ನು ಮುಂದೂಡುವ ಯಾವುದೇ ಅಧಿಕಾರವನ್ನು ಟ್ರಂಪ್ ಹೊಂದಿಲ್ಲವಾದ್ದರಿಂದ ಚುನಾವಣೆ ಮುಂದಕ್ಕೆ ಹೋಗುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ.