Advertisement

ಕೋವಿಡ್ ವೈರಸ್‌ ಪ್ರಶ್ನೆ ಚೀನಕ್ಕೇ ಕೇಳಿ ; ಪತ್ರಕರ್ತೆ ವಿರುದ್ಧ ಹರಿಹಾಯ್ದು ಟ್ರಂಪ್

08:41 AM May 14, 2020 | Hari Prasad |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸೋಮವಾರ ಪತ್ರಕರ್ತರ ಮೇಲೆ ಸಿಡಿಮಿಡಿಗೊಂಡು ಕೋವಿಡ್ ವೈರಸ್‌ ಕುರಿತಾಗಿ ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಶ್ವೇತಭವನದಿಂದ ತೆರಳಿದ ಘಟನೆ ನಡೆದಿದೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಸಿಬಿಎಸ್‌ ನ್ಯೂಸ್‌ನ ವರದಿಗಾರ್ತಿಯೊಬ್ಬಳು ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು, ಸಾವಿನ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಅಧ್ಯಕ್ಷರು, ‘ಕೋವಿಡ್ ವೈರಸ್ ಕಾರಣದಿಂದಲೇ ಎಲ್ಲಾ ಕಡೆ ಜನ ಸಾಯುತ್ತಿದ್ದಾರೆ. ಈ ರೀತಿಯ ಪ್ರಶ್ನೆಯನ್ನು ನನ್ನ ಬಳಿ ಕೇಳಬೇಡಿ. ಚೀನಾದ ಬಳಿ ನೀವು ಇಂತಹ ಪ್ರಶ್ನೆ ಕೇಳಬೇಕು’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ತನ್ನ ಪ್ರಶ್ನೆಗೆ ಸಮರ್ಪಕ ಉತ್ತರ ಸಿಗದಿದ್ದಾಗ ವರದಿಗಾರ್ತಿ, ‘ಸರ್‌,ನೀವು ಇದನ್ನು ನನಗೇಕೆ ಹೇಳುತ್ತೀರಿ’ ಎಂದರು. ಇದಕ್ಕೆ ಟ್ರಂಪ್‌, ‘ನೀವು ನನಗೆ ಕಿರಿಕಿರಿ ಉಂಟು ಮಾಡುವ ಪ್ರಶ್ನೆ ಕೇಳುತ್ತೀದ್ದಿರಿ. ಯಾರೇ ಆಗಲಿ, ನನಗೆ ಕಿರಿಕಿರಿ ಉಂಟು ಮಾಡುವ ಪ್ರಶ್ನೆ ಕೇಳಿದರೆ, ನನ್ನ ಉತ್ತರ ಹೀಗೆಯೇ ಇರಲಿದೆ’ ಎನ್ನುತ್ತಾ ಇನ್ನೊಬ್ಬ ವರದಿಗಾರ್ತಿಗೆ ಪ್ರಶ್ನೆ ಕೇಳಲು ಸೂಚಿಸಿದರು.

ಈ ಮಧ್ಯೆ, ಸಿಬಿಎಸ್‌ ನ್ಯೂಸ್‌ನ ವರದಿಗಾರ್ತಿ ವೀಜಿಯಾ ಜಿಯಾಂಗ್‌, ತಮ್ಮ ಪ್ರಶ್ನೆಗೆ ಉತ್ತರಿಸುವಂತೆ ಮತ್ತೆ, ಮತ್ತೆ ಕೋರಿದಾಗ ಸಿಡಿಮಿಡಿಗೊಂಡ ಟ್ರಂಪ್‌, ಪತ್ರಿಕಾಗೋಷ್ಠಿಯನ್ನು ಅರ್ಧಕ್ಕೇ ಮೊಟಕುಗೊಳಿಸಿ ಅಲ್ಲಿಂದ ತೆರಳಿದರು. ಜಿಯಾಂಗ್‌ ಅವರು ಟ್ವೀಟರ್‌ನಲ್ಲಿ ತಮ್ಮನ್ನು ‘ಚೀನಾ ಮೂಲದ ವೆಸ್ಟ್‌ ವರ್ಜೀನಿಯನ್‌’ ಎಂದು ಪರಿಚಯಿಸಿಕೊಂಡಿದ್ದಾರೆ.

ಸಂಶೋಧನೆ ಮೇಲೆ ಚೀನ ಹ್ಯಾಕರ್ಸ್‌ ಕಣ್ಣು
ಅಮೆರಿಕ ನಡೆಸುತ್ತಿರುವ ಕೋವಿಡ್ ಲಸಿಕೆ ಸಂಶೋಧನೆಗಳನ್ನು ಚೀನಾದ ಹ್ಯಾಕರ್ಸ್‌ಗಳು ಕದಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅಲ್ಲಿನ ತನಿಖಾ ಸಂಸ್ಥೆಗಳು ಬಲವಾಗಿ ನಂಬಿವೆ. ಯುಎಸ್‌ ಫೆಡೆರಲ್‌ ಬ್ಯುರೊ ಆಫ್ ಇನ್ವೆಸ್ಟಿಗೇಶನ್‌ ಹಾಗೂ ಸೈಬರ್‌ ಸೆಕ್ಯುರಿಟಿ ತಜ್ಞರು ಈ ಮಾಹಿತಿಯನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಿವಿಗೂ ಮುಟ್ಟಿಸಿದ್ದಾರೆ.

Advertisement

ವಾಲ್‌ ಸ್ಟ್ರೀಟ್‌ ಜರ್ನಲ್‌’ ಮತ್ತು ‘ದ ನ್ಯೂಯಾರ್ಕ್‌ ಟೈಮ್ಸ್‌’ನಲ್ಲಿರುವ ವರದಿ ಪ್ರಕಾರ ಕೋವಿಡ್ ಪರೀಕ್ಷೆ ಮತ್ತು ಚಿಕಿತ್ಸೆಗಳ ಕುರಿತ ಬೌದ್ಧಿಕ ಆಸ್ತಿಯನ್ನು ಚೀನಾ ಗುರಿಯಾಗಿಸಿಕೊಂಡಿದೆ. ಚೀನಾ, ಇರಾನ್‌, ಉತ್ತರ ಕೊರಿಯಾ, ರಷ್ಯಾಗಳಲ್ಲಿರುವ ಚೀನೀ ಹ್ಯಾಕರ್‌ಗಳು ಈ ದುಷ್ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದಾರೆ ಎಂದು ಹೇಳಿವೆ. ಇದೇ ವೇಳೆ ಚೀನಾದೊಂದಿಗೆ ಪುನಃ ವ್ಯಾಪಾರವನ್ನು ಆರಂಭಿಸಲು ಮುಂದಾಗಿದೆ ಎಂಬ ಸುದ್ದಿಯನ್ನು ಟ್ರಂಪ್‌ ಅಲ್ಲಗಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next