Advertisement

ರಾಷ್ಟ್ರಪತಿ ಸ್ಥಾನಕ್ಕೆ ಸರ್ವಾನುಮತದ ಆಯ್ಕೆ ನಡೆಯಲಿ

12:27 AM Jun 23, 2022 | Team Udayavani |

ದೇ‌ಶದ ನೂತನ ರಾಷ್ಟ್ರಪತಿ ಆಯ್ಕೆಯ ಪ್ರಕ್ರಿಯೆ ಈಗಾಗಲೇ ಆರಂಭ ಗೊಂಡಿದೆ. ಕೇಂದ್ರದಲ್ಲಿನ ಆಡಳಿತಾರೂಢ ಎನ್‌ಡಿಎ ತನ್ನ ಅಭ್ಯರ್ಥಿ ಯನ್ನಾಗಿ ಬುಡಕಟ್ಟು ಜನಾಂಗಕ್ಕೆ ಸೇರಿದ ಬಿಜೆಪಿಯ ಹಿರಿಯ ನಾಯಕಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿದೆ. ಇದೇ ವೇಳೆ ಕಾಂಗ್ರೆಸ್‌ ಸಹಿತ ವಿಪಕ್ಷಗಳು ತಮ್ಮ ಅಭ್ಯರ್ಥಿಯಾಗಿ ಹಿರಿಯ ನಾಯಕ ಯಶವಂತ್‌ ಸಿನ್ಹಾ ಅವರನ್ನು ಆಯ್ಕೆ ಮಾಡಿವೆ. ಇತ್ತಂಡಗಳೂ ಸಾಕಷ್ಟು ಸಮಾಲೋಚನೆ, ಚರ್ಚೆಗಳ ಬಳಿಕ ರಾಜಕೀಯ ಲೆಕ್ಕಾಚಾರಗಳನ್ನು ಮಾಡಿಯೇ ಅಳೆದೂ ತೂಗಿ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ.

Advertisement

ಸದ್ಯ ಬಿಜೆಪಿ ಮತ್ತದರ ಮಿತ್ರಪಕ್ಷಗಳು ಸಂಸತ್‌ನಲ್ಲಿ ಬಹುಮತ ಹೊಂದಿರುವುದರಿಂದ ಮತ್ತು ಹೆಚ್ಚಿನ ರಾಜ್ಯಗಳಲ್ಲಿ ಅಧಿಕಾರದಲ್ಲಿ ರುವುದರಿಂದ ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆದದ್ದೇ ಆದಲ್ಲಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದು ಎನ್‌ಡಿಎ ಪಾಳಯಕ್ಕೆ ದೊಡ್ಡ ಸವಾಲೇನಲ್ಲ. ರಾಷ್ಟ್ರಪತಿ ಎಲೆಕ್ಟ್ರೋರಲ್‌ ಪ್ರಕಾರ ಸದ್ಯದ ಲೆಕ್ಕಾಚಾರದಲ್ಲಿ ಎನ್‌ಡಿಎಗೆ ಶೇ. 1.2ರಷ್ಟು ಅಂದರೆ ಸುಮಾರು 13,000 ಮತಗಳ ಕೊರತೆ ಬೀಳುತ್ತದೆ. ಇದನ್ನು ಕಲೆ ಹಾಕುವುದು ಬಿಜೆಪಿ ಪಾಲಿಗೆ ಅಷ್ಟೇನೂ ತ್ರಾಸದಾ ಯಕವಲ್ಲ. ಇವೆಲ್ಲದರ ಹೊರತಾಗಿಯೂ ಬಿಜೆಪಿ ಒಡಿಶಾದ ಬುಡಕಟ್ಟು ನಾಯಕಿ ಯಾಗಿರುವ ದ್ರೌಪದಿ ಮುರ್ಮು(64) ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಯನ್ನಾಗಿಸುವ ನಿರ್ಧಾರ ಕೈಗೊಂಡಿದೆ. ಮುರ್ಮು ಅವರ ಸಮಾಜಸೇವೆ, ಆಡಳಿತ ಅನುಭವ ಇವೆಲ್ಲವನ್ನೂ ಪರಿಗಣಿಸಿಯೇ ಬಿಜೆಪಿ ನಾಯಕರು ಈ ತೀರ್ಮಾನ ಕೈಗೊಂಡಿರುವರಾದರೂ ಇದರ ಹಿಂದೆ ರಾಜಕೀಯ ಲೆಕ್ಕಾಚಾರವಿದೆ ಮತ್ತು ತನ್ನ ಅಭ್ಯರ್ಥಿಯನ್ನು ಸುಲಭವಾಗಿ ಜಯಶಾಲಿಯನ್ನಾಗಿಸುವ ಕಾರ್ಯತಂತ್ರ ಅಡಗಿದೆ ಎನ್ನುವುದು ಸುಳ್ಳಲ್ಲ.

ಇನ್ನು ವಿಪಕ್ಷ ಅಭ್ಯರ್ಥಿ ಯಶವಂತ್‌ ಸಿನ್ಹಾ (84) ಅವರು ಅತ್ಯಂತ ಅನುಭವಿ ಮತ್ತು ಹಿರಿಯ ರಾಜಕಾರಣಿಯಾಗಿದ್ದಾರೆ. ರಾಜಕೀಯ ಮತ್ತು ಆಡಳಿತದ ಎಲ್ಲ ಒಳ-ಹೊರಗುಗಳನ್ನು ಬಲ್ಲ ಇವರನ್ನು ವಿಪಕ್ಷಗಳು ಜಂಟಿಯಾಗಿ ತಮ್ಮ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿವೆ. ಸದ್ಯ ಸಕ್ರಿಯ ರಾಜಕೀಯದಿಂದ ದೂರ ಉಳಿದಿರುವರಾದರೂ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಬಲ ಟೀಕಾಕಾರರಾಗಿ ಗುರುತಿಸಿಕೊಂಡಿರುವ ಕಾರಣದಿಂದಾಗಿಯೇ ವಿಪಕ್ಷಗಳು ತಮ್ಮದೇ ಆದ ಲೆಕ್ಕಾಚಾರದಲ್ಲಿ ಸಿನ್ಹಾ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಿವೆ.

ರಾಜಕೀಯ ಲೆಕ್ಕಾಚಾರಗಳೇನೇ ಇರಲಿ ಈ ಬಾರಿಯ ರಾಷ್ಟ್ರಪತಿ ಚುನಾ ವಣೆಗೆ ಮಹತ್ವವಿದೆ. ದೇಶ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರ ಮದ ವೇಳೆ ದೇಶದ ಪ್ರಥಮ ಪ್ರಜೆಯ ಆಯ್ಕೆಗಾಗಿ ನಡೆಯುತ್ತಿರುವ ಈ ಚುನಾವಣೆ ಸ್ಮರಣೀಯ ಎನಿಸಿಕೊಳ್ಳಲಿದೆ. ಇಂಥ ಸುಸಂದರ್ಭದಲ್ಲಿ ರಾಷ್ಟ್ರಾಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದಲ್ಲಿ ಈ ಹುದ್ದೆಯ ಘನತೆ ಹೆಚ್ಚಲಿದೆ ಎಂಬ ಮಾತು ಕೇಳಿಬರತೊಡಗಿದೆ. ಈ ಸಲಹೆಯನ್ನು ಪಕ್ಷಗಳು ಗಂಭೀರವಾಗಿ ಪರಿಗಣಿಸುವುದು ಉತ್ತಮ. ಯಾವುದೇ ಚುನಾ ವಣೆಯಲ್ಲಿ ಸೋಲು-ಗೆಲುವು ಸಹಜ. ಆದರೆ “ಸ್ಪರ್ಧೆಗಾಗಿ ಸ್ಪರ್ಧೆ’ ಎಂಬಂತಾದರೆ ಆ ಚುನಾವಣೆಗೂ ಒಂದು ಬೆಲೆ ಇರಲಾರದು. ಈ ಹಿನ್ನೆಲೆ ಯಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಹಿಂದುಳಿದ ಕುಟುಂಬದಿಂದ ಬಂದ ಸಮರ್ಥ ಮಹಿಳಾ ನಾಯಕಿ ದ್ರೌಪದಿ ಮುರ್ಮು ಅವರನ್ನು ದೇಶದ ಅತ್ಯುನ್ನತ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದ್ದೇ ಆದಲ್ಲಿ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ಎಂದು ಗುರುತಿಸಿಕೊಳ್ಳುವ ಭಾರತದ ಹಿರಿಮೆಯ ಕಿರೀಟಕ್ಕೆ ಇನ್ನೊಂದು ಗರಿ ಸೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next