ಮಂಡ್ಯ : ಕಾಂಗ್ರೆಸ್‌ನ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ಮೂಲಕ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ತೆರಳಿ ಧರಣಿ ನಡೆಸಿದರು. ಡಿಕೆಶಿ ಬಿಡುಗಡೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲಿಸಿದರು.
ದ್ವೇಷದ ರಾಜಕಾರಣ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಸಮಯದಿಂದಲೂ ಸಾಂವಿಧಾನಿಕ ಸಂಸ್ಥೆಗಳಾದ ಇಡಿ, ಐಟಿ ಹಾಗೂ ಸಿಬಿಐ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ನಾಯಕರು ಹಾಗೂ ವಿರೋಧ ಪಕ್ಷಗಳ ಮುಖಂಡರನ್ನು ಹಲವಾರು ಪ್ರಕರಣಗಳಲ್ಲಿ ಸಿಲುಕಿಸುತ್ತಿದೆ. ಅವರನ್ನು ಬಂಧನಕ್ಕೊಳಪಡಿಸುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಪಕ್ಷವನ್ನು ದೇಶದ ಏಕೈಕ ಪಕ್ಷವಾಗಿ ಬೆಳೆಸುವ ಗುರಿಯೊಂದಿಗೆ ಎಲ್ಲಾ ಪಕ್ಷಗಳನ್ನು ನಾಶ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.
ಪ್ರಜಾಪ್ರಭುತ್ವ ವಿರೋಧಿ ನೀತಿ: ದೇಶ ಈಗಾಗಲೇ ಜಿಡಿಪಿ ಕುಸಿತ, ಆರ್ಥಿಕ ಹಿಂಜರಿತ, ನಿರುದ್ಯೋಗ ಸಮಸ್ಯೆ, ಹಣಕಾಸಿನ ಸಂಕಷ್ಟದಿಂದ ಉದ್ಯಮಗಳು ಮುಚ್ಚುತ್ತಿವೆ. ದೇಶದಲ್ಲಿ ಹಲವಾರು ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರ ಸೂಚಿಸದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ದೇಶದಲ್ಲಿ ಹಿಟ್ಲರ್ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶಿಸಿದರು.
ಈಗಾಗಲೇ 4 ದಿನ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆಗೆ ಎಲ್ಲ ರೀತಿ ಸಹಕಾರ ನೀಡಿದ್ದರೂ, ರಾಜಕೀಯ ಹಗೆ ಸಾಧಿಸಲು ಬಂಧನಕ್ಕೊಳಪಡಿಸಿರುವುದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ. ಆದ್ದರಿಂದ ಕೂಡಲೇ ಡಿ.ಕೆ.ಶಿವಕುಮಾರ್ ಅವರನ್ನು ಬಿಡುಗಡೆ ಮಾಡಬೇಕು. ಬಿಜೆಪಿ ದ್ವೇಷ ರಾಜ ಕಾರಣ ಬಿಡಬೇಕು ಎಂದು ಆಗ್ರಹಿಸಿದರು.
ನ್ಯಾಯಸಮ್ಮತ ಆಡಳಿತ ನೀಡಿ: ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿ ರಾಜಕೀಯ ಶಕ್ತಿ ಕುಂದಿಸುವ ಮೂಲಕ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ಆಧಿಪತ್ಯ ಸ್ಥಾಪನೆಗೆ ಮುಂದಾಗಿದೆ. ಇದು ನಡೆಯದ ಮಾತು. ಹಿಂದೆ ಬಿಜೆಪಿ ಚಿತ್ರದುರ್ಗ ಶಾಸಕರೊಬ್ಬರನ್ನು 25 ಕೋಟಿ ರೂ.ಗಳಿಗೆ ಖರೀದಿಸುವ ಬಗ್ಗೆ ಆಡಿಯೋವನ್ನು ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಿದ್ದರು. ಅದನ್ನು ತನಿಖೆಗೆ ವಹಿಸಿದ್ದರೆ, ಇಂದು ಬಿ.ಎಸ್.ಯಡಿಯೂರಪ್ಪಜೈಲಿಗೆ ಹೋಗಬೇಕಾಗಿತ್ತು. ಆದ್ದರಿಂದ ಇಂಥ ದ್ವೇಷ ರಾಜಕಾರಣ ಬಿಟ್ಟು, ನ್ಯಾಯ ಸಮ್ಮತವಾಗಿ ಆಡಳಿತ ನಡೆಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾಶ್ರೀಕಾಂತ್, ಮುಖಂಡರಾದ ಪಿ.ರವಿಕುಮಾರ್, ರಶ್ಮಿ ಶಿವಕುಮಾರ್, ನಗರಸಭೆ ಸದಸ್ಯರಾದ ಟಿ.ಕೆ.ರಾಮಲಿಂಗಯ್ಯ, ನಯೀಂ, ಶ್ರೀಧರ್, ಬಿ.ಪಿ.ಪ್ರಕಾಶ್, ರಾಮಲಿಂಗಯ್ಯ ಸೇರಿದಂತೆ ಮಹಿಳಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.