Advertisement
ಪ್ರಚಲಿತ ಯಕ್ಷಗಾನ ಪ್ರದರ್ಶನದ “ಟ್ರೆಂಡ್’ಗೆ ವಿಮುಖವಾಗಿ ಉಡುಪಿಯ ಯಕ್ಷಕಲಾರಂಗ ಏರ್ಪಡಿಸಿದ ಆಖ್ಯಾನ “ಆತ್ಮಾನಂ ಮಾನುಷಂ ಮನ್ಯೇ’. ಶಾಂತ, ಕರುಣ ರಸವೇ ಪ್ರಧಾನವಾಗಿ ವ್ಯಂಜಿಸಲ್ಪಡಬೇಕಾದ ಕಥಾ ಹಂದರವುಳ್ಳ ಶ್ರೀರಾಮನ ಬದುಕಿನ ಉತ್ತರಾರ್ಧದ ಅನಾವರಣ ತೆಂಕಣ ಮಟ್ಟು ಯಕ್ಷಗಾನ ರೂಪದಲ್ಲಿ ಪ್ರದರ್ಶನಗೊಂಡಿತು. ಗಮನಿಸಬೇಕಾದ ಅಂಶಗಳಲ್ಲೊಂದೆಂದರೆ – ತೆಂಕುತಿಟ್ಟು ಯಕ್ಷಗಾನ ಪ್ರದರ್ಶನಗಳಲ್ಲಿ ಅನಿವಾರ್ಯವೆಂದು ಭಾವಿಸಲ್ಪಟ್ಟ ಚೆಂಡೆಯ ಬಳಕೆಯನ್ನು ಸೀಮಿತವಾಗಿ ಮಾಡಿ ಮದ್ದಳೆಯೇ ಪ್ರಧಾನವಾದ ಹಿನ್ನೆಲೆ ವಾದ್ಯವಾಗಿ ಬಳಸಲ್ಪಟ್ಟ ಕಥಾ ಸಂವಿಧಾನದ ಆಯ್ಕೆ. ಇಂತಹ ನಡೆಯ ಪ್ರಸಂಗದ ಆಯ್ಕೆಗೂ ಧೈರ್ಯ ಬೇಕು. ಉಡುಪಿಯ ಸಹೃದಯಿ ಪ್ರೇಕ್ಷಕರ ಮುಂದೆ ಆತ್ಮಾನಂ ಮಾನುಷಂ ಮನ್ಯೆ ಗೆದ್ದಿದೆ.
Related Articles
Advertisement
ಕೇವಲ ರಾಮಕೇಂದ್ರಿತ ಕತೆಯಾದರೂ ಪೋಷಕ ಪಾತ್ರಗಳಾದ ಲಕ್ಷ್ಮಣ, ಭರತ, ಹನುಮಂತ , ಸೀತೆ, ಊರ್ಮಿಳೆ, ಕುಶ-ಲವ ಇತ್ಯಾದಿಗಳಿಗೂ ಪಾತ್ರ ಪ್ರಭಾವ ಇದ್ದು ರಾಮನ ಮಾನನಿಧಿತ್ವ ಅಥವಾ ಔನ್ನತ್ಯವನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾದವು. ಅನಗತ್ಯ ವಾಕ್ಯಗಳು ಸಂಭಾಷಣೆಯಲ್ಲಿ ಇರದೆ ಆಖ್ಯಾನ ಅರ್ಥಗರ್ಭಿತವೂ ಆಗಿತ್ತು. ಇಲ್ಲಿ ಎತ್ತಿಕೊಂಡ ಸನ್ನಿವೇಶಗಳು ಸ್ವಯಂ ಪ್ರತ್ಯೇಕವಾದ ಆಖ್ಯಾನವಾಗಿಯೂ ಮಂಡಿಸಬಹುದಾಗಿರುವಂತದ್ದು. ತಾಳಮದ್ದಳೆಗೂ ಅತ್ಯಂತ ಹೊಂದುವಂತಹದ್ದು.
ಕಥಾ ಸಂವಿಧಾನ ಕೇವಲ ಮುಮ್ಮೇಳಕ್ಕೆ ಮಾತ್ರ ಸೀಮಿತವಾಗದೆ ಹಿಮ್ಮೇಳಕ್ಕೂ ಅನ್ವಯಿಸಿತ್ತು. ಪ್ರಸಂಗ ಪಠ್ಯದಲ್ಲಿ ಪ್ರತಿಪದ್ಯಕ್ಕೂ ಇದೇ ರೀತಿಯಲ್ಲಿ ಪದ ಹೇಳಬೇಕು. ದೃಶ್ಯ ಇಷ್ಟೇ ಸಮಯದಲ್ಲಿ ಮುಗಿಯತಕ್ಕದ್ದು ,ಅಷ್ಟು ಮಾತ್ರವಲ್ಲದೆ ಪದ್ಯದಲ್ಲಿ ಅತಿ ಆಲಾಪನೆ ಬೇಡ ಎಂಬುದೂ ಸೂಚಿತವಾಗಿತ್ತು. ಇದನ್ನು ಭಾಗವತರೆಲ್ಲರೂ ಒಪ್ಪಿ ಮನ್ನಿಸಿ ಅದೇ ರೀತ್ಯಾ ಹಾಡಿ¨ªಾರೆಂಬುದು ಗಮನಿಸಬೇಕಾದದ್ದು. ಸುರಿಕುಮೇರಿ ಗೋವಿಂದ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಕೈರಂಗಳ ಕೃಷ್ಣ ನಾಯ್ಕ, ಉಬರಡ್ಕ ಉಮೇಶ ಶೆಟ್ಟಿ, ರಾಮಕೃಷ್ಣ ಮಯ್ಯ ಸಿರಿಬಾಗಿಲು,ಅಂಬಾ ಪ್ರಸಾದ್ ಪಾತಾಳ, ದಿನಕರ ಗೋಖಲೆ, ರವಿಚಂದ್ರ ಕನ್ನಡಿಕಟ್ಟೆ, ಬಳ್ಳಮಂಜ ಶ್ರೀನಿವಾಸ, ಮುರಾರಿ ಕಡಂಬಳಿತ್ತಾಯ ಇತ್ಯಾದಿ ಕಲಾವಿದರಿದ್ದ ತಂಡ ತಮ್ಮ ವೈಯಕ್ತಿಕವಾದ ಪ್ರಭಾವಳಿಯನ್ನು ಪ್ರದರ್ಶಿಸದೆ ಪ್ರಸಂಗ ಕೃತಿಯ ಪ್ರಧಾನ ಭಾವವನ್ನು ವ್ಯಂಜಿಸುವಲ್ಲಿ ತಮ್ಮನ್ನು ತೊಡಗಿಸಿದ್ದಾರೆ. ಉಡುಪಿಯ ಕಲಾರಂಗದ ಅಭಿರುಚಿ ಮಾದರಿಯಾಗುವಂತಹದ್ದು.
ಕೃಷ್ಣಪ್ರಕಾಶ ಉಳಿತ್ತಾಯ