Advertisement

ಧೀ ಶಕ್ತಿ ಮಹಿಳೆಯರ ವೀರಮಣಿ ಕಾಳಗ

07:29 PM Jul 11, 2019 | Team Udayavani |

ಕು|ಅಮೃತಾ ಅಡಿಗ ಭಾಗವತಿಕೆ ಕು| ಅನನ್ಯಾ ಅಡಿಗ ಮದ್ದಲೆ. ಕು| ಅಪೂರ್ವಾ ಚೆಂಡೆ ವಾದನ

Advertisement

ವರ್ಣಮಯ ವೇದಿಕೆ, ಕರ್ಣಾನಂದಕರವಾದ ಅದ್ಭುತ ಚೆಂಡೆ, ಒಂದೊಮ್ಮೆ ಮುಗುಳುನಗೆಯ ನಗುತ್ತಾ ಮಗದೊಮ್ಮೆ ರೋಷಾವೇಶದಿಂದ ಹೂಂಕರಿಸುತ್ತಾ ಮಾತನಾಡುವ ಸೌಮ್ಯ ಮುಖದ ಸ್ತ್ರೀ ಅರ್ಥಧಾರಿಗಳು, ಪುರುಷ ಧ್ವನಿಗೆ ಸರಿಸಾಟಿಯಾದ ಕಂಚಿನ ಕಂಠದ ಭಾಗವತಿಕೆ, ತಬಲಾವಾದನದಲ್ಲಿ ಆಗಷ್ಟೇ ರಂಗ ಪ್ರವೇಶವಾದ ಬಾಲೆಯ ಕೈಚಳಕ ಹೀಗೆ ಹತ್ತು ಹಲವು ವಿಶೇಷತೆಗಳಿಂದ ಕೂಡಿದ ವೇದಿಕೆಯಲ್ಲಿ ಧೀ ಶಕ್ತಿ ಮಹಿಳಾ ಬಳಗ, ಪುತ್ತೂರು ಇವರ “ವೀರಮಣಿ ಕಾಳಗ’ ಎಂಬ ತಾಳಮದ್ದಳೆ ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಸಂಪನ್ನ ಗೊಂಡಿತು. ಸುವರ್ಣ ಕಲಾ ಶ್ರೀ ಯಕ್ಷಮಿತ್ರರು ಎಂಬ ಸಂಸ್ಥೆಯ ರೂವಾರಿ,ಪ್ರಸಂಗ ಕರ್ತರಾದ ದಿನೇಶ್‌ ಸುವರ್ಣರವರು ತಮ್ಮ ಸಂಸ್ಥೆಯ ಪಂಚಮ ವರುಷದ ಸಂಭ್ರಮದಲ್ಲಿ ಪುತ್ತೂರಿನ ಪ್ರಸಿದ್ಧ ಧೀ ಶಕ್ತಿ ಮಹಿಳಾ ತಾಳಮದ್ದಳೆ ತಂಡದ ಕಾರ್ಯಕ್ರಮವನ್ನು ಆಯೋಜಿಸಿ ತಾಳಮದ್ದಳೆಯ ರಸದೌತಣವನ್ನು ಕಲಾಸಕ್ತರಿಗೆ ನೀಡಿತು.

ಕು|ಅಮೃತಾ ಅಡಿಗ ತನ್ನ ಪ್ರಬುದ್ಧ ಸುಶ್ರಾವ್ಯ ಭಾಗವತಿಕೆಯಿಂದ ಮನಗೆದ್ದರೆ,ಮದ್ದಳೆಯಲ್ಲಿ ಸಾಥ್‌ ನೀಡಿದ್ದು ಸಹೋದರಿ ಕು|ಅನನ್ಯಾ ಅಡಿಗ.ಇತ್ತೀಚೆಗಷ್ಟೆ ರಂಗ ಪ್ರವೇಶ ಮಾಡಿರುವ ಈಕೆ ಸ್ವಲ್ಪ ಹೊತ್ತು ಮದ್ದಳೆ ಬಾರಿಸಿದರೆ ಅವರಿಗೆ ಸಹಕಾರ ನೀಡಿದ್ದು ತಂದೆ ಸತ್ಯನಾರಾಯಣ ಅಡಿಗರವರು. ಕಲಾಭಿಮಾನಿಗಳ ಉಸಿರು ಬಿಗಿ ಹಿಡಿಯುವಂತೆ ಚೆಂಡೆ ವಾದನದಲ್ಲಿ ತನ್ನ ಕಲಾ ಪ್ರೌಢಿಮೆ ಮೆರೆದ ಕು| ಅಪೂರ್ವಾ ಸುರತ್ಕಲ್‌ರವರ ಕೈ ಚಳಕ ಅಪೂರ್ವವಾಗಿತ್ತು.ಮುಮ್ಮೇಳದಲ್ಲಿ ಹನುಮಂತನ ಪಾತ್ರಧಾರಿಯಾಗಿ ಸ್ವಲ್ಪ ಗಾಂಭೀರ್ಯ,ಇನ್ನೂ ಸ್ವಲ್ಪ ಕುಚೋದ್ಯ,ಮತ್ತೂ ಸ್ವಲ್ಪ ವ್ಯಂಗ್ಯ ಮಿಶ್ರಿತ ಮಾತುಗಳೊಂದಿಗೆ ಲೌಕಿಕ ಹಾಗು ಅಲೌಕಿಕ ಸಂಗತಿಗಳ ಸಮ್ಮಿಲನದೊಂದಿಗೆ ಈ ಕಥಾನಕವನ್ನು ಪ್ರೇಕ್ಷಕರ ಮನ ಮುಟ್ಟುವಂತೆ ,ಬಹುಕಾಲ ಮನದಲ್ಲಿ ನೆನಪು ಉಳಿಯುವಂತೆ ಮಾಡುವಲ್ಲಿ ಯಶಸ್ವಿಯಾದವರು,ಧೀ ಶಕ್ತಿ ಸಂಚಾಲಕಿ ಪದ್ಮ ಆಚಾರ್‌.ಅವರ ಮಾತುಗಳಿಗೆ ತಕ್ಕ ಪ್ರತಿ ಮಾತುಗಳನ್ನಾಡುತ್ತಾ ಪ್ರಸಂಗದ ಪ್ರಕರಣಗಳಿಗೆ ಸಾಣೆ ಹಿಡಿದವರು ವೀರಮಣಿ ಅರ್ಥದಾರಿ ಜಯಲಕ್ಷ್ಮೀ ವಿ. ಭಟ್‌.ಅಂತೆಯೇ ವೀಣಾ ನಾಗೇಶ್‌ ತಂತ್ರಿಯವರು ಶತ್ರುಘ್ನ ಹಾಗು ರಾಮನಾಗಿ ತೂಕದ ಮಾತುಗಳನ್ನಾಡುತ್ತಾ ಸಾವಕಾಶವಾಗಿ,ಸ್ಪಷ್ಟವಾಗಿ, ಸರಳವಾಗಿ ವಿಷಯ ಪ್ರಸ್ತಾಪಿಸಿ ಪ್ರಸಂಗಕ್ಕೆ ಕಳೆ ನೀಡಿದರು. ರಾಮಭಕ್ತ ಹನುಮಂತನ ತಾತ್ಸಾರದ ಮಾತುಗಳಿಗೆ ತನ್ನದೇ ಧಾಟಿಯಲ್ಲಿ ಪ್ರತ್ಯುತ್ತರ ನೀಡುತ್ತಾ ಸೂಕ್ತ ಏರಿಳಿತದ ಧ್ವನಿಯಲ್ಲಿ ಮಾತಿನ ಚಟಾಕಿ ಹಾರಿಸಿ ಭೇಷ್‌ ಎನಿಸಿಕೊಂಡವರು ಶಂಕರನಾಗಿ ಪಾತ್ರ ನಿರ್ವಹಿಸಿದ ಆಶಾಲತಾ ಕಲ್ಲೂರಾಯ.

ಪೂರ್ಣಿಮಾ ಜನಾರ್ದನ್‌ ಕೊಡವೂರು

Advertisement

Udayavani is now on Telegram. Click here to join our channel and stay updated with the latest news.

Next