ವಿಧಾನಸಭೆ: ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ (ತಿದ್ದುಪಡಿ) ವಿಧೇಯಕ 2020 ಸೇರಿ 6 ವಿಧೇಯಕಗಳನ್ನು ಮಂಗಳವಾರ ಸದನದಲ್ಲಿ ಮಂಡಿಸಲಾಗಿದ್ದು, ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ. ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ವಿಧೇಯಕ ಮಂಗಳವಾರ ಮಂಡನೆಯಾಗಿದೆ.
ಲಿಖೀತವಾಗಿ ದಾಖಲಿಸಬೇಕಾದ ಯಾವುದೇ ಪ್ರಕರಣ, ದೂರು, ವಿಷಯ ಆಲಿಸಲು, ವಿಲೇ ವಾರಿ ಮಾಡಲು ಸೂಕ್ತವಲ್ಲವೆಂದು ಲೋಕಾ ಯುಕ್ತರು ಅಭಿಪ್ರಾಯಪಡುವ ಪ್ರಕರಣಗಳನ್ನು ಇಬ್ಬರು ಉಪ ಲೋಕಾಯುಕ್ತರ ಪೈಕಿ ಒಬ್ಬರಿಗೆ ವಹಿಸುವ ಮೂಲಕ ಲೋಕಾಯುಕ್ತರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲು ತಿದ್ದುಪಡಿ ವಿಧೇಯಕ ಮಂಡನೆಯಾಗಿದೆ.
ಸುಧಾರಿತ ನಾವೀನ್ಯತಾ ಉತ್ಪನ್ನ, ಸೇವೆ ನಿಯಂತ್ರಣ ಆಡಳಿತ ಕ್ರಮಗಳ ಮಾನದಂಡಗಳ ವ್ಯಾಪ್ತಿಗೆ ಬರುವುದಿಲ್ಲ. ನಾವೀನ್ಯತೆ ಬಲವರ್ಧನೆ ಗೊಳಿಸಿ ಒಂದು ಕಾನೂನು ಚೌಕಟ್ಟು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ನಿಯಂತ್ರಣ ತಾಂತ್ರಿಕ ವೇದಿಕೆ ರಚಿಸುವುದನ್ನು ಬೆಂಬಲಿಸಲು ಕರ್ನಾಟಕ ನಾವೀನ್ಯತಾ ಪ್ರಾಧಿಕಾರ ಸ್ಥಾಪಿಸಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದ್ದು, ಅದಕ್ಕೆ ಪೂರಕವಾಗಿ ಕರ್ನಾಟಕ ನಾವೀನ್ಯತಾ ಪ್ರಾಧಿಕಾರ ವಿಧೇಯಕ ಮಂಡಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ ಮಂಡನೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕುವುದು. ಬಿಬಿಎಂಪಿ ವ್ಯಾಪ್ತಿಯಲ್ಲಿ ಅಳವಡಿಸಲಾದ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್ಸಿ) ಸೇರಿ ಕೇಬಲ್ ಶೂಲ ಹಾಗೂ ವಾರ್ಷಿಕ ಟ್ರ್ಯಾಕ್ ಬಾಡಿಗೆ ವಿಧಿಸುವ ಅಂಶವೂ ವಿಧೇಯಕದಲ್ಲಿ ಸೇರಿದೆ.
1 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಕಾಮಗಾರಿ ಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆಯಡಿ ಟೆಂಡರ್ ಆಹ್ವಾನಿಸಿ ಕೈಗೊಳ್ಳಬೇಕಿದೆ. ಈ ಮಿತಿಯನ್ನು 5 ಲಕ್ಷ ರೂ.ವರೆಗೆ ಹೆಚ್ಚಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ ಮಂಡನೆ ಯಾಗಿದೆ. ಹಾಗೆಯೇ ಕರ್ನಾಟಕ ರಾಜಭಾಷಾ (ತಿದ್ದುಪಡಿ) ವಿಧೇಯಕ ಮಂಡನೆಯಾಗಿದೆ.
ರಾಷ್ಟ್ರೀಯ ಕಾನೂನು ವಿದ್ಯಾಲಯ ವಿಧೇಯಕ: ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿದ್ಯಾಲಯದಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25 ಸೀಟು ಕಾಯ್ದಿರಿಸುವ ಸಂಬಂಧ ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ (ತಿದ್ದುಪಡಿ) ವಿಧೇಯಕ ಮಂಗಳವಾರ ಮಂಡನೆಯಾಗಿದೆ. ಕೆಲ ರಾಜ್ಯಗಳ ರಾಷ್ಟ್ರೀಯ ಕಾನೂನು ವಿದ್ಯಾಲಯಗಳಲ್ಲಿ ಆಯಾ ರಾಜ್ಯದ ವಿದ್ಯಾರ್ಥಿಗಳಿಗೆ ಈಗಾಗಲೇ ಮೀಸಲಾತಿ ಕಲ್ಪಿಸಲಾಗಿದೆ.
ಅದೇ ರೀತಿಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೂ ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆ ಇದೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಕಾನೂನು ವಿದ್ಯಾಲಯದಲ್ಲಿ ಶೇ.50 ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಡಬೇಕೆಂಬ ವಿಧೇಯಕವನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಇದೀಗ ಬಿಜೆಪಿ ಸರ್ಕಾರ ಶೇ.25 ಮೀಸಲಾತಿಗೆ ಅವಕಾಶ ಕೋರಿ ತಿದ್ದುಪಡಿ ವಿಧೇಯಕ ಮಂಡಿಸಿದೆ.