ಬೆಂಗಳೂರು: ಕಳೆದ ನಾಲ್ಕು ಸಚಿವ ಸಂಪುಟ ಸಭೆಗೆ ಗೈರು ಹಾಜರಾಗಿದ್ದ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ
ಸೋಮವಾರದ ಸಂಪುಟ ಸಭೆಗೆ ಹಾಜರಾಗಿದ್ದರು. ಆದರೆ, ಸಂಪುಟ ಸಭೆಯ ನಡುವೆಯೇ ಮುಖ್ಯಮಂತ್ರಿಯವರ ಮಾತಿನಿಂದ ಅಸಮಾಧಾನಗೊಂಡು ಅರ್ಧಕ್ಕೇ ಎದ್ದು ಹೋದರು.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬೆಲ್ಲ ವದಂತಿಗಳು ಹರಡಿದ್ದವು. ಕಬ್ಬು ಬೆಳೆಗಾರರ ಬಾಕಿ ಪಾವತಿ ವಿಚಾರ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ನಿಮ್ಮ ಕಾರ್ಖಾನೆಯಿಂದಲೂ ರೈತರಿಗೆ ಹಣ ಪಾವತಿಯಾಗಬೇಕಿದೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿ ನೀವು ರೈತರ ಪ್ರತಿಭಟನೆ ತಡೆಯಬಹುದಿತ್ತು.ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬಹುದಿತ್ತು ಎಂದು ಹೇಳಿದರು. ಇದರಿಂದ ಬೇಸರಗೊಂಡ ರಮೇಶ ಜಾರಕಿಹೊಳಿ ಸಂಪುಟ ಸಭೆಯಿಂದ ನಿರ್ಗಮಿಸಿದರು. ನಂತರ ತಮ್ಮ ರಾಜೀನಾಮೆ ಪತ್ರ ನೀಡಿದ್ದಾರೆಂಬ ಮಾತುಗಳು ಕೇಳಿಬಂದವು. ಆದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಮೇಶ ಜಾರಕಿಹೊಳಿ ರಾಜೀನಾಮೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ರಮೇಶ ಜಾರಕಿಹೊಳಿ ಸಹ ನಾನ್ಯಾಕೆ ರಾಜೀನಾಮೆ ನೀಡಲಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು. ಮೂಲಗಳ ಪ್ರಕಾರ ಕಳೆದ ನಾಲ್ಕು ಸಂಪುಟ ಸಭೆಗೆ ರಮೇಶ್ ಜಾರಕಿಹೊಳಿ ಗೈರು ಹಾಜರಾಗಿದ್ದರು. ಸತತ ಐದು ಬಾರಿ ಗೈರು ಹಾಜರಾದರೆ ಸಂಪುಟದಿಂದ ತೆಗೆಯಲು ಅವಕಾಶವಿದೆ. ಆರ್‌ಟಿಐ ಕಾರ್ಯಕರ್ತರೊಬ್ಬರು ಈ ಬಗ್ಗೆ ಮಾಹಿತಿ ಸಹ ಪಡೆದು ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದರು.
ಹೀಗಾಗಿ, ಸೋಮವಾರದ ಸಭೆಗೆ ರಮೇಶ ಜಾರಕಿಹೊಳಿ ಹಾಜರಾದರು. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಸಂಪುಟ ಸಭೆಗೆ ಹಾಜರಾಗುವಂತೆ ಸೂಚಿಸಿದ್ದರು ಎನ್ನಲಾಗಿದೆ.