Advertisement

ಕಾಮಗಾರಿ ಆರಂಭದ ಮೊದಲು ವ್ಯವಸ್ಥಿತ ಯೋಜನೆ ರೂಪಿಸಿ

11:02 PM Mar 21, 2021 | Team Udayavani |

ಮಂಗಳೂರು ನಗರದಲ್ಲಿ ಪ್ರಸ್ತುತ ಕಾಂಕ್ರೀಟ್‌ ಕಾಮಗಾರಿ ಕೈಗೊಂಡಿರುವ ರಸ್ತೆಗಳಲ್ಲಿ ಬಹುತೇಕ ಕಡೆ ವ್ಯವಸ್ಥಿತ ಕಾರ್ಯಯೋಜನೆ ಅಥವಾ ಸರಿಯಾದ ತಾಂತ್ರಿಕ ಸಲಹೆಗಳಿಲ್ಲದೆ, ಸರಕಾರದ ಅನುದಾನ ವಿನಿ ಯೋಗಿ ಸುವ ತರಾತುರಿಯಲ್ಲಿ ಕಾಮಗಾರಿಗಳನ್ನು ನಡೆಸುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಕೋಟ್ಯಂತರ ರೂ. ಖರ್ಚು ಮಾಡಿ ರಸ್ತೆ ವಿಸ್ತರಣೆ, ಚರಂಡಿ ಕಾಮಗಾರಿ, ಫುಟ್‌ಪಾತ್‌ ನಿರ್ಮಾಣ ಸಹಿತ ಹಲವಾರು ರೀತಿಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ವಿಪರ್ಯಾಸವೆಂದರೆ, ಕಾಂಕ್ರೀಟ್‌ ಹಾಕಲಾದ ರಸ್ತೆಯನ್ನು ಒಂದೆರಡು ವಾರಗಳಲ್ಲೇ ಅಗೆದು ಜನರ ತೆರಿಗೆ ಹಣವನ್ನು ವ್ಯರ್ಥಗೊಳಿಸಲಾಗುತ್ತಿದೆ.

Advertisement

ಇದಕ್ಕೆ ಮುಖ್ಯ ಕಾರಣ ವ್ಯವಸ್ಥಿತ ಕಾರ್ಯ ಯೋಜನೆ ಇಲ್ಲದಿರುವುದು, ಇಲಾಖೆಗಳ ನಡುವಿನ ಸಮನ್ವಯದ ಕೊರತೆ, ಕಾಮಗಾರಿ ಕೈಗೆತ್ತಿಕೊಳ್ಳುವ ಮೊದಲು ಸರಿಯಾದ ತಾಂತ್ರಿಕ ಸಲಹೆಗಳನ್ನು ಪಡೆದುಕೊಳ್ಳದಿರುವುದು. ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಬೇಕಾದರೆ, ಆ ಭಾಗದಲ್ಲಿ ಹಾದು ಹೋಗಿರುವ ಯುಟಿಲಿಟಿ ಕಾಮಗಾರಿಗಳನ್ನು ಕಡೆಗಣಿಸಿರುವುದು. ಮುಖ್ಯವಾಗಿ ನೀರು ಸರಬರಾಜು ಕೊಳವೆಗಳು, ಒಳಚರಂಡಿ ವ್ಯವಸ್ಥೆಗಳ ದುರಸ್ತಿ, ವಿದ್ಯುತ್‌ ಕಂಬ, ತಂತಿಗಳು, ಒಳಚರಂಡಿ ಮುಂತಾದವುಗಳನ್ನು ರಸ್ತೆ ಮಧ್ಯದಲ್ಲೇ ಉಳಿಸಿಕೊಂಡು ಕಾಮಗಾರಿ ನಡೆಸಲಾಗಿದೆ. ಈ ಯುಟಿಲಿಟಿ ಸೇವೆಗಳಲ್ಲಿ ಸಮಸ್ಯೆ ಎದುರಾದಾಗ ಕಾಂಕ್ರೀಟ್‌ ಒಡೆದು ಇವುಗಳನ್ನು ಸರಿಪಡಿಸಬೇಕಾದ ಸ್ಥಿತಿಯಿದೆ. ಎಲ್ಲೆಡೆ ಆಯಾಭಾಗದಲ್ಲಿ ಹಾದು ಹೋಗಿರುವ ಯುಟಿಲಿಟಿ ಸೇವೆಗಳನ್ನು ವ್ಯವಸ್ಥಿತ ರೀತಿ ಸ್ಥಳಾಂತರಿಸಿದ ಬಳಿಕ ಕಾಂಕ್ರೀಟ್‌ ರಸ್ತೆಯನ್ನು ನಿರ್ಮಿಸಬೇಕು. ಆದರೆ ಪರಿಸ್ಥಿತಿ ಹೇಗಿದೆ ಅಂದರೆ, ಹೊಸದಾಗಿ ಕಾಂಕ್ರೀಟ್‌ ಹಾಕಿದ ಒಂದು ರಸ್ತೆಯಲ್ಲಿ ಒಳಚರಂಡಿ ಸಮಸ್ಯೆ ಎದುರಾದರೆ, ಒಂದರ ಅನಂತರ ಒಂದರಂತೆ ಪ್ರತಿ ತಿಂಗಳಿಗೊಮ್ಮೆ ಮ್ಯಾನ್‌ಹೋಲ್‌ ಇರುವ ಜಾಗವನ್ನು ಅಗೆದು-ಮುಚ್ಚುವುದೇ ಪಾಲಿಕೆಯವರಿಗೆ ಮುಖ್ಯ ಕೆಲಸವಾಗಿ ಬಿಟ್ಟಿದೆ. ಒಂದೇ ರಸ್ತೆಯಲ್ಲಿ 1 ಕಿ.ಮೀ. ವ್ಯಾಪ್ತಿಯಲ್ಲಿ 4 ಕಡೆ ಒಳಚರಂಡಿ ಕಾಮಗಾರಿಗಾಗಿ ಕಾಂಕ್ರೀಟ್‌ ರಸ್ತೆಯನ್ನು ಅಗೆಯಲಾಗಿದೆ. ಇದರಿಂದ ಒಂದಡೆ ಸರಕಾರದ ಹಣ ದುಂದುವೆಚ್ಚವಾದರೇ ಇನ್ನೊಂದೆಡೆ ಸಾರ್ವಜನಿಕರು ಅನಗತ್ಯ  ಕಿರಿಕಿರಿಯನ್ನೂ ಎದುರಿಸಬೇಕಾಗುತ್ತದೆ.

ಕಾಮಗಾರಿಗಳನ್ನು ನಡೆಸುವಾಗ ಆ ರಸ್ತೆಗಳಲ್ಲಿ ಯುಟಿಲಿಟಿ ವ್ಯವಸೆœಗಳ ಬಗ್ಗೆ ಪರಿಶೀಲನೆ ನಡೆಸುವುದಿಲ್ಲವೇ? ಸಂಬಂಧಪಟ್ಟ ಇಲಾಖೆಗಳ ನಡುವೆ ಸಮನ್ವಯ ಇಲ್ಲವೆ? ಇದಕ್ಕೆ ಬಳಸುವ ಅನುದಾನಗಳು ಸರಕಾರದ್ದು. ಅಂದರೆ ಸಾರ್ವಜನಿಕರ ಹಣವನ್ನು ಈ ರೀತಿಯಾಗಿ ದುರ್ವಿನಿಯೋಗ ಮಾಡುವುದು ಎಷ್ಟು ಸರಿ?

ನಗರದಲ್ಲಿ ಅಭಿವೃದ್ಧಿ ಕೆಲಸದ ಹೆಸರಿನಲ್ಲಿ ಇಂತಹ ಹೊಣೆಗೇಡಿತದ ನಡವಳಿಕೆಗಳಿಗೆ ಇತಿಶ್ರೀ ಹಾಕುವುದಕ್ಕೆ ಕಠಿನ ಕ್ರಮಗಳು ಆಗಬೇಕಾಗಿದೆ.  ಕಾಂಕ್ರೀಟ್‌ ಹಾಕುವ ಮೊದಲು ಆ ರಸ್ತೆಯಲ್ಲಿರುವ ಎಲ್ಲ ಯುಟಿಲಿಟಿ  ವ್ಯವಸ್ಥೆಗಳನ್ನು ಪರಿಶೀಲಿಸಿ ಆವಶ್ಯಕ ಕ್ರಮಗಳನ್ನು ಕೈಗೊಂಡು ಮುಂದಕ್ಕೆ ಸಮಸ್ಯೆ ಬಾರದ ರೀತಿ ಸುಸಜ್ಜಿತಗೊಳಿಸಿದ ಬಳಿಕವೇ ಕಾಮಗಾರಿ ಪ್ರಾರಂಭಿಸುವತ್ತ ಇನ್ನಾದರೂ ಪಾಲಿಕೆ ಹಾಗೂ ಸ್ಮಾರ್ಟ್‌ ನಿಗಮದ ಮೇಲಧಿಕಾರಿಗಳು ಮುತುವರ್ಜಿ ವಹಿಸಲಿ.

-ಸಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next