ಮದುವೆಯ ಬಳಿಕ ನಟಿ ಮೇಘನಾ ರಾಜ್ ಅಭಿನಯಿಸಿರುವ ಮತ್ತೂಂದು ಚಿತ್ರ “ಒಂಟಿ’ ತೆರೆಗೆ ಬರಲು ತಯಾರಾಗಿದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ “ಒಂಟಿ’ ಚಿತ್ರದ ಪ್ರಥಮ ಪ್ರತಿಸಿದ್ಧವಾಗಿದ್ದು, ಸೆನ್ಸಾರ್ ಅನುಮತಿ ಸಿಗುತ್ತಿದ್ದಂತೆ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ. ಸದ್ಯ ಭರದಿಂದ “ಒಂಟಿ’ ಚಿತ್ರದ ಪ್ರಮೋಶನ್ ಕೆಲಸಗಳನ್ನು ಶುರು ಮಾಡಿರುವ ತಂಡ ಇದೇ ಜೂ. 11ರಂದು ಚಿತ್ರದ ಮೊದಲ ಟ್ರೇಲರ್ ಬಿಡುಗಡೆ ಮಾಡಲು ಪ್ಲಾನ್ ಹಾಕಿಕೊಂಡಿದೆ.
ಈ ಹಿಂದೆ ಕಿಚ್ಚ ಸುದೀಪ್ ಅಭಿನಯದ “ಮೈ ಆಟೋಗ್ರಾಫ್’, “ನಂ 73 ಶಾಂತಿ ನಿವಾಸ’ ಮುಂತಾದ ಚಿತ್ರಗಳಲ್ಲಿ ಸಹ ನಟನಾಗಿ ಅಭಿನಯಿಸಿದ್ದ, “ಈ ಸಂಜೆ’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದ ಆರ್ಯ ನಾಯಕನಾಗಿ ಕಾಣಿಸಿಕೊಂಡಿರುವ ಎರಡನೇ ಚಿತ್ರ ಇದಾಗಿದೆ. “ಸಾಯಿರಾಂ ಕ್ರಿಯೇಷನ್ಸ್’ ಬ್ಯಾನರ್‌ನಲ್ಲಿ ಆರ್ಯ ನಿರ್ಮಿಸಿರುವ ಈ ಚಿತ್ರವನ್ನು ಶ್ರೀ (ಒರಟ ಐ ಲವ್ ಯು) ನಿರ್ದೇಶಿಸಿದ್ದಾರೆ.
ಚಿತ್ರದ ಹಾಡುಗಳಿಗೆ ಮನೋಜ್. ಎಸ್ ಸಂಗೀತ ನಿರ್ದೇಶನವಿದ್ದು, ಕೆ.ಕಲ್ಯಾಣ್, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯವನ್ನು ರಚಿಸಿದ್ದಾರೆ. ಚಿತ್ರಕ್ಕೆ ಕೆ. ಶಶಿಧರ್ ಛಾಯಾಗ್ರಹಣ, ಕುಮಾರ್ ಕೋಟೆಕೊಪ್ಪ ಅವರ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಮುರಳಿ ನೃತ್ಯ, ಆ್ಯಕ್ಷನ್ ದೃಶ್ಯಗಳಿಗೆ ಮಾಸ್ ಮಾದ ಸಾಹಸ ನಿರ್ದೇಶನವಿದೆ. ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ.
ಮೇಘನಾ ರಾಜ್, ಆರ್ಯ ಅವರೊಂದಿಗೆ ದೇವರಾಜ್, ಗಿರಿಜಾ ಲೋಕೇಶ್, ಶರತ್ ಲೋತಾಶ್ವ, ನೀನಾಸಂ ಅಶ್ವತ್, ಮಜಾ ಟಾಕೀಸ್ ಪವನ್ ಮುಂತಾದ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ತನ್ನ ಫಸ್ಟ್‌ಲುಕ್ ಮತ್ತು ಪೋಸ್ಟರ್ ಮೂಲಕ ಗಮನ ಸೆಳೆದಿರುವ “ಒಂಟಿ’ ಟ್ರೇಲರ್ ಹೀಗಿರಲಿದೆ ಅನ್ನೋದು ಶೀಘ್ರದಲ್ಲಿಯೇ ಗೊತ್ತಾಗಲಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ “ಒಂಟಿ’ ಚಿತ್ರ ಇದೇ ಜುಲೈನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.