Advertisement

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮರು ನಿರ್ಮಾಣಕ್ಕೆ ಸಿದ್ಧತೆ

09:16 PM Oct 03, 2021 | Team Udayavani |

ಉಡುಪಿ: ಬ್ರಹ್ಮಾವರದ ದ.ಕ. ಸಹಕಾರಿ ಸಕ್ಕರೆ ಕಾರ್ಖಾನೆ ಪುನರ್‌ ನಿರ್ಮಾಣಕ್ಕೆ ಪೂರಕವಾಗಿ ಉಡುಪಿ ಜಿಲ್ಲೆಯಾದ್ಯಂತ ಕಬ್ಬು ಕೃಷಿಯ ಕ್ರಾಂತಿ ಮಾಡುವ ಸಂಕಲ್ಪ ಮಾಡಲಾಗಿದ್ದು, ಪ್ರಥಮ ಹಂತದ ಅಭಿಯಾನವಾಗಿ ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯುವ ಯೋಜನೆಗೆ ನವೆಂಬರ್‌ ತಿಂಗಳಲ್ಲಿ ಚಾಲನೆ ಸಿಗುವ ಸಾಧ್ಯತೆಗಳಿವೆ.

Advertisement

ಸಕ್ಕರೆ ಕಾರ್ಖಾನೆಯ ಪುನರ್‌ನಿರ್ಮಾಣಕ್ಕೆ ಆಡಳಿತ ಮಂಡಳಿಯು ಸಮಗ್ರ ಯೋಜನೆ ರೂಪಿಸಿದ್ದು, ಇದಕ್ಕೆ ಪುಷ್ಟಿ ನೀಡುವ ಪ್ರಯತ್ನವಾಗಿ ಜಿಲ್ಲೆಯ ರೈತರು, ಸಹಕಾರಿ ಸಂಸ್ಥೆ, ಜನಪ್ರತಿನಿಧಿಗಳು, ಉದ್ಯಮಿಗಳನ್ನು ಸಂಪರ್ಕಿಸಿ ವ್ಯಾಪಕ ಕಬ್ಬು ಬೆಳೆಯುವ ಯೋಜನೆ ರೂಪಿಸಲಾಗಿದೆ. ಇದರಿಂದಾಗಿ 8ರಿಂದ 10 ಸಾವಿರ ಮಂದಿ ಸ್ಥಳೀಯರಿಗೆ ಉದ್ಯೋಗಾವ ಕಾಶವೂ ಲಭ್ಯವಾಗಲಿದೆ.

100 ಗ್ರಾಮಗಳ ಗುರುತು
ಪ್ರಥಮ ಹಂತದಲ್ಲಿ ಜಿಲ್ಲೆಯ 100 ಗ್ರಾಮಗಳನ್ನು ಗುರುತಿಸಿ ರೈತರಿಗೆ ಉಚಿತ ಕಬ್ಬಿನ ಸಸಿಯನ್ನು ವಿತರಣೆ ಮಾಡುವ ಉದ್ದೇಶವನ್ನು ಇರಿಸಲಾಗಿದೆ.

ರೈತರಿಂದ ವ್ಯಾಪಕ ಬೆಂಬಲ
ಸಕ್ಕರೆ ಕಾರ್ಖಾನೆಯ ಪುನರ್‌ ನಿರ್ಮಾಣಕ್ಕೆ ಪೂರಕವಾಗಿ ವಾಣಿಜ್ಯ ಬೆಳೆಯಾದ ಕಬ್ಬು ಬೆಳೆಯುವ ಬಗ್ಗೆ ಉಡುಪಿ ಜಿಲ್ಲೆಯಾದ್ಯಂತ ರೈತರಿಂದ ವ್ಯಾಪಕ ಬೆಂಬಲ ದೊರೆತಿದೆ. ಈಗಾಗಲೇ ಆಡಳಿತ ಮಂಡಳಿ ಹಾಗೂ ವಿವಿಧ ರೈತ ಸಂಘಟನೆಗಳ ಮೂಲಕ ಸುಮಾರು 1,500ಕ್ಕೂ ಅಧಿಕ ಮಂದಿ ರೈತರನ್ನು ಸಂಪರ್ಕಿಸಲಾಗಿದ್ದು, ಕಬ್ಬು ಬೆಳೆಯುವ ಬಗ್ಗೆ ಕಾರ್ಖಾನೆಗೆ ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿ ಜಿಲ್ಲೆಯ ವಿವಿಧ ರೈತ ಸಂಘಟನೆಗಳ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಕಾರ್ಯಯೋಜನೆ ರೂಪಿಸಲಾಗುತ್ತದೆ.

ಇದನ್ನೂ ಓದಿ:ಪಂಜಾಬ್ ಗೆ ಸೋಲುಣಿಸಿದ ಕೊಹ್ಲಿ ಪಡೆ ಪ್ಲೇ ಆಫ್ ನತ್ತ

Advertisement

ಕಬ್ಬು ಬೆಳೆಗೆ ವಾರಾಹಿ ಯೋಜನೆ ಪೂರಕ
ಪ್ರಸ್ತುತ ವಾರಾಹಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ವಾರಾಹಿ ಜಲ ವಿದ್ಯುತ್‌ ಯೋಜನೆಯ ಟೇಲ್‌ ರೇಸ್‌ನಿಂದ ಪ್ರತಿನಿತ್ಯ ಹೊರಬರುವ 1,100 ಕ್ಯೂಸೆಕ್ಸ್‌ ನೀರನ್ನು ಉಪಯೋಗಿಸಿಕೊಂಡು ಕುಂದಾಪುರ, ಬೈಂದೂರು ಹಾಗೂ ಬ್ರಹ್ಮಾವರ ತಾಲೂಕುಗಳ ಸುಮಾರು 38 ಸಾವಿರ ಎಕರೆ ಕೃಷಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ. ಈ ಯೋಜನೆಯು 42.73 ಕಿ.ಮೀ.ಉದ್ದದ ಬಲದಂಡೆ ಕಾಲುವೆ, 44.35 ಕಿ.ಮೀ.ಉದ್ದದ ಎಡದಂಡೆ ಕಾಲುವೆ ಹಾಗೂ 33 ಕಿ.ಮೀ.ಉದ್ದದ ಲಿಫ್ಟ್ ಕಾಲುವೆಗಳನ್ನು ಒಳಗೊಂಡಿರುತ್ತದೆ.

ಬೆಳೆಗಾರರಿಗೆ ಅವಕಾಶ
ಈಗಾಗಲೇ ಸುಮಾರು 10 ಸಾವಿರ ಎಕ್ರೆ ರೈತರ ಜಮೀನಿಗೆ ಕಾಲುವೆ ಮೂಲಕ ನೀರು ಹರಿಸಲಾಗಿದೆ. ಇನ್ನೂ ಹೆಚ್ಚುವರಿಯಾಗಿ ಕಾಮಗಾರಿ ನಡೆಯುತ್ತಿದ್ದು, ಸುಮಾರು 8 ಸಾವಿರ ಎಕ್ರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಒಟ್ಟು ವಾರಾಹಿ ನೀರಾವರಿ ಯೋಜನೆ ಪೂರ್ಣಗೊಂಡಾಗ ಎಡದಂಡೆ, ಬಲದಂಡೆ ಕಾಲುವೆ ಪ್ರದೇಶಗಳಲ್ಲಿ ಸುಮಾರು 2 ಸಾವಿರ ಎಕ್ರೆ ಕಬ್ಬು ಬೆಳೆಯುವ ಅವಕಾಶ ಸಿಗಲಿದೆ.

2006ರಲ್ಲಿ ಮುಚ್ಚುಗಡೆ
1985ರಲ್ಲಿ ಸಕ್ಕರೆ ಉತ್ಪಾದನೆ ಆರಂಭಿಸಿದ್ದ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪ್ರತಿದಿನ 1,250 ಮೆಟ್ರಿಕ್‌ ಟನ್‌ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿತ್ತು. ವಾರಾಹಿ ನೀರಿನ ಯೋಜನೆ ಸರಿಯಾಗಿ ಅನುಷ್ಠಾನಗೊಳ್ಳದೆ ಕಬ್ಬಿನ ಕೊರತೆ, ಬಂಡವಾಳದ ಅಭಾವದಿಂದ 2006ರಲ್ಲಿ ಮುಚ್ಚುಗಡೆಗೊಂಡು ಕಾರ್ಖಾನೆಯ ಎಲ್ಲ ಕಾರ್ಮಿಕರನ್ನು ಸೇವೆಯಿಂದ ವಿಮುಕ್ತಿಗೊಳಿಸ ಲಾಗಿತ್ತು.

ಏನೆಲ್ಲ ಉತ್ಪಾದನೆ
ಕೇಂದ್ರ ಸರಕಾರದ ಮಹತ್ವದ ಯೋಜನೆಯಂತೆ ಎಥೆನಾಲ್‌ ಉತ್ಪಾದನೆಗೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಉತ್ಸುಕ ವಾಗಿದೆ. ಈಗಾಗಲೇ ಆಹಾರ ನಾಗರಿಕ ಪೂರೈಕೆ ಇಲಾಖೆಯು ಇ-ಪೋರ್ಟಲ್‌ ನೋಂದಾಯಿಸಲಾಗಿದೆ. 60 ಕೆಎಲ್‌ಪಿಡಿ ಎಥೆನಾಲ್‌ ತಯಾರಿಸುವ ಬಗ್ಗೆ ಯೋಜನಾ ವರದಿ ಸಿದ್ದಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯ ಜತೆಗೆ ಸಕ್ಕರೆ, ವಿದ್ಯುತ್‌, ಬೆಲ್ಲ, ರೈಸ್‌ಮಿಲ್‌, ಎಣ್ಣೆ, ಹಿಟ್ಟಿನ ಗಿರಣಿಯನ್ನು ಉತ್ಪಾದಿಸುವ ಘಟಕವನ್ನು ಪ್ರಾರಂಭಿಸುವ ಉದ್ದೇಶ ಹೊಂದಲಾಗಿದೆ. ಸಂಸ್ಥೆಯ ಆರ್ಥಿಕ ಪ್ರಗತಿಗೋಸ್ಕರ ಸಂಸ್ಕರಣಾ ಘಟಕ, ಆಹಾರ ಉತ್ಪನ್ನ, ಔಷಧ ತಯಾರಿ, ಬಯಲು ರಂಗಮಂದಿರದಂತಹ ಯೋಜನೆಗಳನ್ನು ರೂಪಿಸಲು ಉದ್ದೇಶಿಸಲಾಗಿದೆ.

ಸಾಲ ಮನ್ನಾ ನಿರೀಕ್ಷೆ
2023ರೊಳಗೆ ಸಕ್ಕರೆ ಕಾರ್ಖಾನೆ ಮತ್ತೆ ಪುನರಾರಂಭ ಮಾಡಲಾಗುವುದು. ರೈತರ ಹಿತಾಸಕ್ತಿ ಗಮನಿಸಿಕೊಂಡು ಈಗ ಇರುವ ಸಾಲವನ್ನು ಸರಕಾರ ಮನ್ನಾ ಮಾಡಬೇಕಿದೆ. ನವೆಂಬರ್‌ ತಿಂಗಳಿನಿಂದ ಕಬ್ಬು ಬೆಳೆಯುವ ಪ್ರಕ್ರಿಯೆ ಆರಂಭಗೊಳ್ಳಲಿದೆ. 5 ತಿಂಗಳು ಕಬ್ಬಿನಿಂದ ಎಥೆನಾಲ್‌ ಮತ್ತೆ 5 ತಿಂಗಳು ಆಹಾರ ಧಾನ್ಯಗಳಿಂದ ಎಥೆನಾಲ್‌ ತಯಾರಿಸುವ ಉದ್ದೇಶ ಹೊಂದಲಾಗಿದೆ.
-ಬೈಕಾಡಿ ಸುಪ್ರಸಾದ್‌ ಶೆಟ್ಟಿ,,
ಅಧ್ಯಕ್ಷರು, ಬ್ರಹ್ಮಾವರ ಸಕ್ಕರೆ ಕಾರ್ಖಾನೆ

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next