Advertisement
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಹಿರಿಯ ಅಧಿಕಾರಿಗಳ ಜತೆ ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ನಿಯಂತ್ರಣ ವಿಚಾರ ಕುರಿತು ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಂಗಳೂರಿನಲ್ಲಿ ಉಗ್ರರರ ಅಡಗುತಾಣಗಳು ಪತ್ತೆಯಾಗಿವೆ ಎಂದು ಎನ್‌ಐಎ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ. ಹೀಗಾಗಿ ಬೆಂಗಳೂರು ಮಾತ್ರವಲ್ಲದೆ, ರಾಜ್ಯಾದ್ಯಂತ ಅಲರ್ಟ್ ಆಗಿರುವಂತೆ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು.
Related Articles
Advertisement
ಬೆಂಗಳೂರಲ್ಲೇ ಶೇ.36 ಪ್ರಕರಣ: ಬೆಂಗಳೂರು ನಗರ ಆರ್ಥಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ. ವಲಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಇಲ್ಲಿ ಜನರ ಸುರಕ್ಷತೆ ಬಹಳ ಮುಖ್ಯವಾಗಿದೆ. ರಾಜ್ಯದಲ್ಲಿ ನಡೆಯುವ ಅಪರಾಧಗಳ ಪೈಕಿ ಶೇ.36 ಪ್ರಕರಣಗಳು ಬೆಂಗಳೂರಿನಲ್ಲೇ ನಡೆಯುತ್ತವೆ. ಅಪರಾಧ ಪ್ರಕರಣಗಳ ಪ್ರಮಾಣವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ.
ಪ್ರಮುಖವಾಗಿ ನಗರದ ವ್ಯಾಪ್ತಿ ದೊಡ್ಡದಾಗಿದೆ. ಯಾರೇ ಅಪರಾಧ ಮಾಡಿದರೂ ಕೇವಲ ಒಂದೆರಡು ಗಂಟೆಗಳಲ್ಲಿ ನೆರೆ ರಾಜ್ಯಗಳಿಗೆ ಹೋಗುವ ಸಾಧ್ಯತೆಯಿದೆ. ನಗರದಲ್ಲಿ ಜೂಜಾಟ, ಬೆಟ್ಟಿಂಗ್ ದಂಧೆಗಳು ಅವ್ಯಹತವಾಗಿ ನಡೆಯುತ್ತಿವೆ. ಇವುಗಳ ಬಗ್ಗೆ ನಿಗಾವಹಿಸಬೇಕು. ಇಂತಹ ಪ್ರಕರಣಗಳ ಕುರಿತು ಸಾರ್ವಜನಿಕರು ದೂರು ನೀಡುವ ಮೊದಲೇ ಎಚ್ಚೆತ್ತುಕೊಂಡು ಆಯಾ ಠಾಣಾಧಿಕಾರಿಗಳು ಕಾನೂನು ಕ್ರಮ ಜರುಗಿಸಬೇಕು.
ಹಾಗೆಯೇ ಅಪರಾಧ ಪ್ರಕರಣಗಳ ಪತ್ತೆಯನ್ನು ಕಾಲಮಿತಿಯೊಳಗೆ ಮಾಡುವಂತೆ ಸೂಚಿಸಲಾಗಿದೆ. ರೌಡಿ ನಿಗ್ರಹ ಪಡೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಆದೇಶ ನೀಡಿದ್ದೇನೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಎಸ್.ಮುರುಗನ್. ಉಮೇಶ್ ಕುಮಾರ್, ಹೇಮಂತ್ ನಿಂಬಾಳ್ಕರ್, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಎಲ್ಲ ಡಿಸಿಪಿಗಳು ಇದ್ದರು.
ಸಂಚಾರ ನಿಯಂತ್ರಣಕ್ಕೆ 19 ಕ್ರಮಬೆಂಗಳೂರು: ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸ್ವಯಂ ಚಾಲಿತಾ ಸಿಗ್ನಲ್ ಸೇರಿದಂತೆ 19 ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ನಿತ್ಯ ಐದು ಸಾವಿರ ವಾಹನಗಳು ನೋಂದಣಿ ಆಗುತ್ತಿದ್ದು, 13 ಸಾವಿರ ಕಿ.ಮೀ ರಸ್ತೆಯಲ್ಲಿ 82.50 ಲಕ್ಷ ವಾಹನಗಳು ಸಂಚರಿಸುತ್ತಿವೆ. ಹೀಗಾಗಿ, ಹೊಸೂರು ರಸ್ತೆ, ಬೆಂಗಳೂರು-ಪುಣೆ, ಮೈಸೂರು, ಹೈದ್ರಾಬಾದ್, ಮಾಗಡಿ, ಕನಕಪುರ ಸೇರಿ ನಗರದ 12 ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂಬಂಧ ಬೆಸ್ಕಾಂ, ಬಿಎಂಟಿಸಿ, ಮೆಟ್ರೋ, ಸಂಚಾರ ಪೊಲೀಸರು ಸೇರಿ ಸಂಬಂಧಿಸಿದ ಇತರೆ ಇಲಾಖೆಗಳ ಜತೆ ಸೇರಿ ಜಂಟಿ ಸಭೆ ನಡೆಸಿ ಸಂಚಾರ ನಿರ್ವಹಣೆ ಕುರಿತು ಚರ್ಚಿಸಲಾಗುವುದು. ಅನಧಿಕೃತ ಪಾರ್ಕಿಂಗ್, ಅತ್ಯಾಧುನಿಕ ಸಿಗ್ನಲ್ ಅಳವಡಿಕೆ ಸೇರಿ 19 ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದ ಹೇಳಿದರು. ಮಾದರಿ ಸಿಗ್ನಲ್ ವ್ಯವಸ್ಥೆ: ಸಿಬಿಡಿ ಪ್ರದೇಶದಲ್ಲಿ ಮಾದರಿ ಸಂಚಾರ ಸಿಗ್ನಲ್ ವ್ಯವಸ್ಥೆ ಅಳವಡಿಸಲು ವಿಶೇಷ ಸಂಚಾರ ಯೋಜನೆ ಸಿದ್ಧಪಡಿಸಲಾಗಿದೆ. ಯೋಜನೆ ಯಶಸ್ವಿಯಾದರೆ ಇತರೆಡೆಯೂ ಈ ವ್ಯವಸ್ಥೆ ಅಳವಡಿಸಲಾಗುವುದು. ಜತೆಗೆ ಬಿ-ಟ್ರ್ಯಾಕ್ ಯೋಜನೆಗೆ ಹೆಚ್ಚಿನ ಹಣ ಬಿಡುಗಡೆ ಮಾಡಲಾಗುವುದು. ಒಟ್ಟಾರೆ ಬೆಂಗಳೂರನ್ನು ಸುರಕ್ಷಿರ ಹಾಗೂ ಸ್ವತ್ಛ ನಗರವನ್ನಾಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಪೊಲೀಸರ ಕಾರ್ಯವೈಖರಿಗೆ ಅಸಮಾಧಾನ
ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚುಟುವಟಿಕೆಗಳ ಕುರಿತ ಪೊಲೀಸರ ಕಾರ್ಯವೈಖರಿ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ, “ನಗರದಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳು, ವಂಚನೆ ಬಗ್ಗೆ ಯಾವ ರೀತಿ ಕ್ರಮಕೈಗೊಂಡಿದ್ದಿರಿ? ರೌಡಿ ನಿಗ್ರಹ ಮತ್ತು ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಏನೇಲ್ಲ ಕ್ರಮಕೈಗೊಂಡಿದ್ದಿರಿ’ ಎಂದು ಹಿರಿಯ ಅಧಿಕಾರಿಗಳಿಗೆ ಪ್ರಶ್ನಿಸಿ, ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 3 ಗಂಟೆಯಿಂದ ಆರು ಗಂಟೆವರೆಗೆ ಪ್ರತ್ಯೇಕವಾಗಿ ತಮ್ಮ ಅಧಿಕಾರಿಗಳ ಜತೆ ಸಭೆ ನಡೆಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, 12 ಅಂಶಗಳನ್ನು ನೀಡಿ ತಕ್ಷಣದಿಂದ ಕಡ್ಡಾಯವಾಗಿ ಜಾರಿಗೆ ತರುವಂತೆ ಡಿಸಿಪಿ ಮತ್ತು ಎಸಿಪಿ ಹಂತದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಎಸಿಪಿ ಮತ್ತು ಡಿಸಿಪಿಗಳು ಕಡ್ಡಾಯವಾಗಿ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು, ನಗರದಲ್ಲಿರುವ 35 ಸಾವಿರ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಸಮಗ್ರ ಮಾಹಿತಿ ಪಡೆದುಕೊಳ್ಳಬೇಕು. ನಗರದಲ್ಲಿ ಕ್ರಿಯಾಶೀಲವಾಗಿರುವ 6,500 ರೌಡಿಗಳ ಪ್ರಸ್ತುತ ಮಾಹಿತಿ, ಕಾರ್ಯಾಚರಣೆ ವಿಧಾನ, ಯಾವ ತಂಡ ಜತೆ ಗುರುತಿಸಿಕೊಂಡಿದ್ದಾರೆ ಎಂಬ ಸಮಗ್ರ ಮಾಹಿತಿ ದಾಖಲಿಸಬೇಕು, ಠಾಣಾಧಿಕಾರಿಗಳು ಮತ್ತು ಸಿಬ್ಬಂದಿ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಪ್ರರಕಣದ ಫಾಲೋಅಪ್ ಮಾಡಬೇಕು, ಪ್ರತಿ ಠಾಣಾಧಿಕಾರಿಗಳು ಪ್ರತ್ಯೇಕ ಅಪರಾಧ ನಿಗ್ರಹ ಮತ್ತು ಉಗ್ರ ನಿಗ್ರಹ ಕಾರ್ಯಸೂಚಿ ಸಿದ್ದಪಡಿಸಿ ಕಾರ್ಯೋನ್ಮುಖವಾಗಬೇಕು, ಸಮುದಾಯ ಪೊಲೀಸಿಂಗ್ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು, ಮೇಲಿನ ಅಧಿಕಾರಿಗಳು ತಮ್ಮ ಕೆಳಗಿನ ಸಿಬ್ಬಂದಿಯನ್ನು ಗೌರವದಿಂದ ನಡೆಸಿಕೊಳ್ಳಬೇಕು, ಪೋಕ್ಸೋ ಮತ್ತು ಹೊಸ ಕಾನೂನುಗಳ ಬಗ್ಗೆ ತಿಳಿವಳಿಕೆ ಪಡೆದುಕೊಳ್ಳಬೇಕು, ಪ್ರತಿ ಠಾಣೆ ಎಲ್ಲ ಸಿಬ್ಬಂದಿಗೂ ರೊಟೇಷನ್ ಆಧಾರದಲ್ಲಿ ಕೆಲಸ ಹಂಚಬೇಕು, ಪೊಲೀಸ್ ಸಿಬ್ಬಂದಿ ತನಿಖೆ ಮತ್ತು ಕ್ಷಿಪ್ರ ಪೊಲೀಸಿಂಗ್ ಬಗ್ಗೆ ಆಧುನಿಕ ಮನಸ್ಥಿತಿ ಬೆಳೆಸಿಕೊಳ್ಳಬೇಕು ಹಾಗೂ ಇ-ಕೋರ್ಟ್‌ಗಳು ಸೇರಿದಂತೆ ಕಾನೂನಾತ್ಮಕ ಬದಲಾವಣೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು ಎಂದು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.