Advertisement

ಸಂಪುಟ ವಿಸ್ತರಣೆ ಬೆನ್ನಲ್ಲೇ ಪುನಾರಚನೆಗೆ ಸಿದ್ಧತೆ

11:01 PM Feb 06, 2020 | Team Udayavani |

ಬೆಂಗಳೂರು: ಸಾಕಷ್ಟು ರಾಜಕೀಯ ಮೇಲಾಟಗಳ ಬಳಿಕ ಅನರ್ಹರಾಗಿ ಉಪಚುನಾವಣೆ ಎದುರಿಸಿ ಅರ್ಹರಾದವರ ಪೈಕಿ 10 ಮಂದಿಗೆ ಸಚಿವ ಸ್ಥಾನ ನೀಡಿ “ಸಂತೃಪ್ತಿ’ ಪಡಿಸಿರುವ ಬೆನ್ನಿಗೇ ಹಾಲಿ 8-10 ಸಚಿವರನ್ನು ಕೈಬಿಟ್ಟು ಸಂಪುಟ ಪುನಾರಚನೆಗೆ ಬಿಜೆಪಿ ಸಿದ್ಧತೆ ನಡೆಸಿದೆ.

Advertisement

ಸಂಪುಟದಲ್ಲಿ ಮೂಲ ಬಿಜೆಪಿಗರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಮಾತುಗಳ ಬೆನ್ನಲ್ಲೇ ಪಕ್ಷನಿಷ್ಠರಿಗೂ ಪ್ರಾತಿನಿಧ್ಯ ಕಲ್ಪಿಸಲು ಪಕ್ಷ ಚಿಂತನೆ ನಡೆಸಿದೆ. ರಾಜ್ಯ ಬಜೆಟ್‌ ಅಧಿವೇಶನದ ಬಳಿಕ ಇಲ್ಲವೇ ಜೂನ್‌ನಲ್ಲಿ ವಿಧಾನ ಪರಿಷತ್‌ನ 12 ಸ್ಥಾನ ತೆರವಾದ ಬಳಿಕ ಸಂಪುಟ ಪುನಾರಚನೆಗೆ ಮುಂದಾಗಲಿದೆ. ಮೊದಲ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಪಡೆದಿದ್ದ 17 ಮಂದಿ ಪೈಕಿ 8ರಿಂದ 10 ಮಂದಿಯನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸಿ ಮೂಲ ಬಿಜೆಪಿಯ ಸಚಿವಾಕಾಂಕ್ಷಿಗಳನ್ನು ಸಮಾಧಾನಪಡಿಸುವ ಯತ್ನಕ್ಕೆ ಕೈಹಾಕಲು ಮುಂದಾಗಿದೆ.

ಮುಂದಿನ ಜುಲೈಗೆ ಬಿಜೆಪಿ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಲಿದೆ. ಆಗಸ್ಟ್‌ ಅಂತ್ಯಕ್ಕೆ ಮೊದಲ ಸಂಪುಟ ವಿಸ್ತರಣೆ ವೇಳೆ ಸಚಿವರಾದವರ ಒಂದು ವರ್ಷದ ಅಧಿಕಾರಾವಧಿ ಪೂರ್ಣ ಗೊಳ್ಳ ಲಿದೆ. ಆಗ ಕೆಲವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡುವ ಚಿಂತನೆಯಿದೆ. ಆ ಹಿನ್ನೆಲೆಯಲ್ಲಿ ಸದ್ಯಕ್ಕೆ ಯಾರೊಬ್ಬರೂ ಬೇಸರಕ್ಕೆ ಒಳಗಾಗದೆ ಸಮಾಧಾನದಿಂದ ಇರಬೇಕು ಎಂಬ ಸಂದೇಶವನ್ನು ಹಿರಿಯ ನಾಯಕರು ರವಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಕ್ರಿಯಾಶೀಲರಲ್ಲದ ಸಚಿವರಿಗೆ ಕೊಕ್‌: ಹಾಲಿ ಸಚಿವರ ಪೈಕಿ ತಮಗೆ ವಹಿಸಿದ ಖಾತೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸದವರು, ಸರ್ಕಾರ ಹಾಗೂ ಪಕ್ಷದ ವರ್ಚಸ್ಸು ಹೆಚ್ಚಿಸುವ ರೀತಿಯಲ್ಲಿ ಕಾರ್ಯನಿರ್ವಹಿಸದವರು, ಸಂಘಟನೆ ಚಟುವಟಿಕೆಗಳಿಗೆ ಸ್ಪಂದಿಸದೆ ಅಂತರ ಕಾಯ್ದುಕೊಂಡವರು, ಅಧಿಕಾರವನ್ನಷ್ಟೇ ಅನುಭವಿಸುತ್ತ ತಮಗೆ ವಹಿಸಿದ ಜವಾಬ್ದಾರಿ ನಿರ್ಲಕ್ಷಿಸಿದ ಸಚಿವರಿಗೆ ಕೊಕ್‌ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಸದ್ಯಕ್ಕೆ ಹೊಸ ಸಚಿವರ ಬದಲಾವಣೆ ಇಲ್ಲ: ಎರಡನೇ ಸುತ್ತಿನಲ್ಲಿ ಸಂಪುಟ ಸೇರಿದ 10 ಮಂದಿಯನ್ನು ಪುನಾರಚನೆ ವೇಳೆ ಬದಲಾಯಿಸುವ ಸಾಧ್ಯತೆ ಬಹಳ ಕಡಿಮೆ. ಏಕೆಂದರೆ ಬೆರಳೆಣಿಕೆ ತಿಂಗಳ ಅವಧಿಯಲ್ಲಿ ಯಾವುದೇ ಸಚಿವರ ಕಾರ್ಯಕ್ಷಮತೆ ಅಳೆಯುವುದು ಸಾಧ್ಯ ವಿಲ್ಲ. ಉತ್ತಮವಾಗಿ ಕಾರ್ಯ ನಿರ್ವಹಣೆ ಮೂಲಕ ಪಕ್ಷ ಹಾಗೂ ಅವರ ವರ್ಚಸ್ಸು ಹೆಚ್ಚಿಸಿಕೊಳ್ಳುವವರಿಗೆ ತೊಂದರೆಯಾಗದು. ಮೊದಲ ಸುತ್ತಿನಲ್ಲಿ ಸಚಿವ ರಾದವರ ಪೈಕಿ ಕೆಲವರ ಬದಲಾವಣೆ ಅನಿವಾರ್ಯ. ಅವರನ್ನು ಸಂಘಟನೆ ಕಾರ್ಯದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು ಎಂದು ಹಿರಿಯ ನಾಯಕರೊಬ್ಬರು ಹೇಳಿದರು.

Advertisement

ಪಕ್ಷಕ್ಕೆ ದುಡಿದವರಿಗೆ ಆದ್ಯತೆ: ರಾಜ್ಯದಲ್ಲಿ ಬಿಜೆಪಿ ಎರಡನೇ ಬಾರಿಗೆ ಸರ್ಕಾರ ರಚಿಸಿದೆ. ಆದರೆ 4ರಿಂದ 6 ಬಾರಿ ಗೆದ್ದರೂ ಈವರೆಗೆ ಒಮ್ಮೆಯೂ ಸಚಿವರಾಗದವರು ಸಾಕಷ್ಟು ಮಂದಿ ಇದ್ದಾರೆ. ಅವರಿಗೆ ಅವಕಾಶ ನೀಡದಿದ್ದರೆ, ಅವರ ಸೇವೆ ಕಡೆಗಣಿಸಿದಂತಾಗುತ್ತದೆ. ಹೀಗಾಗಿ ಪುನಾರಚನೆಯಲ್ಲಿ ಪಕ್ಷ ನಿಷ್ಠರು, ಸಂಘಟನೆಗೆ ದುಡಿದವರಿಗೆ ಆದ್ಯತೆ ಮೇರೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಆ ಮೂಲಕ ಸಂಪುಟದಲ್ಲಿ ಸಮತೋಲನ ತರಲು ಪ್ರಯತ್ನಿಸಲಾಗುವುದು. ವರಿಷ್ಠರ ಸೂಚನೆಯಂತೆಯೇ ಈ ಪ್ರಕ್ರಿಯೆಯೂ ನಡೆಯಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next