Advertisement

ಬೇಸಿಗೆ ಎದುರಿಸಲು ತಾಲೂಕಾಡಳಿತ ಸನ್ನದ್ಧ

12:35 PM Mar 14, 2020 | Suhan S |

ಬೀಳಗಿ: ಕಡು ಬೇಸಿಗೆ ಕಾಲಿಟ್ಟಿದೆ. ಕುಡಿವ ನೀರಿನ ತೊಂದರೆಯಾಗದಂತೆ ತಾಲೂಕು ಆಡಳಿತ ಸನ್ನದ್ಧಾಗಿದೆ. ಇಲಾಖೆ ವರದಿಯ ಪ್ರಕಾರ ತಾಲೂಕಿನಲ್ಲಿ ಬೇಸಿಗೆ ಎದುರಿಸಲು ಬೇಕಾದ ಜಲ ಸಂಪನ್ಮೂಲ ಇದ್ದು, ಬೇಸಿಗೆಯಲ್ಲಿ ಕುಡಿವ ನೀರಿನ ತೊಂದರೆಯಾಗಲಾರದು. ಆದರೂ ಇಲಾಖೆಯವರು ತೀವ್ರ ಮುಂಜಾಗ್ರತೆ ವಹಿಸಿರುವುದು ಕಂಡು ಬರುತ್ತಿದೆ.

Advertisement

ತಾಲೂಕಿನಲ್ಲಿ ಕೃಷ್ಣೆ ಮತ್ತು ಘಟಪ್ರಭೆ ನದಿ ಹರಿದಿವೆ. ಈ ಹಿಂದೆ ಬೇಸಿಗೆ ಕಾಲದಲ್ಲಿ ಎರಡೂ ನದಿಯಲ್ಲಿ ಹನಿ ನೀರಿಲ್ಲದೆ ಜಲಚರ ಪ್ರಾಣಿಗಳು ಕೂಡ ಸಾವನ್ನಪ್ಪಿರುವ ಘಟನೆ ಈಗಲೂ ಇಲ್ಲಿನ ಜನಮಾನಸದಿಂದ ದೂರವಾಗಿಲ್ಲ. ಸದ್ಯ, ಕೃಷ್ಣೆ ಹಾಗೂ ಘಟಪ್ರಭೆಯ ಒಡಲಲ್ಲಿ ನೀರು ತುಂಬಿಕೊಂಡಿದ್ದು, ಪ್ರಸಕ್ತ ಬೇಸಿಗೆಯನ್ನು ಯಾವುದೇ ಭೀತಿಯಿಲ್ಲದೆ ಎದುರಿಸಬಹುದು ಎನ್ನುವ ಆಶಾಭಾವ ಮೂಡಿಸಿದೆ.

ನೀರಿನ ಮೂಲ: ತಾಲೂಕಿನ ಜನವಸತಿ ಪ್ರದೇಶಗಳು ಸೇರಿ ಒಟ್ಟು 85 ಗ್ರಾಮಗಳಿವೆ. ತಾಲೂಕಿನಾದ್ಯಂತ 83 ಶುದ್ಧ ಕುಡಿವ ನೀರಿನ ಘಟಕವಿದ್ದು, 9 ಘಟಕಗಳನ್ನು ಸಂಬಂ ಸಿದ ಇಲಾಖೆಯವರು, ತಾಲೂಕಿನ ಗಲಗಲಿ, ಗುಳಬಾಳ ಗ್ರಾಮದ ಘಟಕಗಳನ್ನು ಸಹಕಾರಿ ಸಂಘದವರು ಹಾಗೂ 15 ಘಟಕಗಳನ್ನು ಆಯಾ ಗ್ರಾಪಂನವರು ಮತ್ತು 57 ಘಟಕಗಳನ್ನು ಗುಡ್‌ವ್ಹೀಲ್‌ ಕ್ರಿಯೆಸನ್ಸ್‌ ಸಂಸ್ಥೆಯವರು ನಿರ್ವಹಣೆ ಮಾಡುತ್ತಿದ್ದಾರೆ. 83 ಘಟಕಗಳಲ್ಲಿ ತೆಗ್ಗಿ ತಾಂಡಾ ಮತ್ತು ಮುಂಡಗನೂರ ಆರ್‌ಸಿ ಯ ಘಟಕಗಳು ತಾಂತ್ರಿಕ ತೊಂದರೆಯಿಂದ ಸ್ಥಗಿತಗೊಂಡಿವೆ. ಇವುಗಳ ದುರಸ್ತಿಗೆ ಇಲಾಖೆ ಕ್ರಮ ಕೈಗೊಂಡಿದೆ.

ಇನ್ನು ತಾಲೂಕಿನಲ್ಲಿ ಒಟ್ಟು 6 ಬಹುಗ್ರಾಮ ಕುಡಿವ ನೀರು ಯೋಜನೆಯಿವೆ. ಕೃಷ್ಣಾ ನದಿ ಅವಲಂಬಿತ ತೆಗ್ಗಿ, ಸೊನ್ನ, ಮುಂಡಗನೂರ ಬಹುಗ್ರಾಮ ಕುಡಿವ ನೀರು ಯೋಜನೆಗೆ 30 ಗ್ರಾಮ ಮತ್ತು ಘಟಪ್ರಭಾ ನದಿ ಅವಲಂಬಿತ ಅರಕೇರಿ, ತೋಳಮಟ್ಟಿ, ಹೆರಕಲ್ಲ ಬಹುಗ್ರಾಮ ಕುಡಿವ ನೀರು ಯೋಜನೆಯಡಿ 32 ಗ್ರಾಮಗಳಿಗೆ ನೀರು ಸರಬರಾಜು ಆಗುತ್ತಿದೆ. ಇನ್ನುಳಿದಂತೆ 23 ಗ್ರಾಮಗಳು ಕೊಳವೆ ಬಾವಿಯ ನೀರನ್ನೆ ಅವಲಂಬಿಸುವ ಅನಿವಾರ್ಯತೆಯಿದೆ.

ಹಿಡಕಲ್‌ ಜಲಾಶಯದಿಂದ ಘಟಪ್ರಭಾ ನದಿಗೆ ಸುಮಾರು 2 ಸಾವಿರ ಕ್ಯೂಸೆಕ್‌ ನೀರು ಬಿಡಲಾಗಿದೆ. ಘಟಪ್ರಭಾ ಅವಲಂಬಿತ ತಾಲೂಕಿನ ಕಾತರಕಿ, ಕಲಾದಗಿ ಬ್ಯಾರೇಜ್‌ನಲ್ಲಿ ಸಾಕಷ್ಟು ನೀರಿದೆ.- ಎಚ್‌.ಡಿ.ಆಲೂರ, ಎಇಇ, ಸಣ್ಣ ನೀರಾವರಿ ಇಲಾಖೆ, ಮುಧೋಳ

Advertisement

 

-ರವೀಂದ್ರ ಕಣವಿ

Advertisement

Udayavani is now on Telegram. Click here to join our channel and stay updated with the latest news.

Next